ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸರ್ಕಾರಿ ನೌಕರರಿಗೆ ಸಂಬಂಧಿಸಿದ 7ನೇ ವೇತನ ಆಯೋಗದ ವರದಿ ಯಥಾವತ್ತಾಗಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ತಹಸೀಲ್ದಾರ್ ಕೆ.ಎನ್.ಲೋಕೇಶ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಪಟ್ಟಣದ ತಾಪಂ ಕಚೇರಿ ಬಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಹಾಗೂ ತಾಲೂಕು ಕಚೇರಿ ಸಮೀಪ ತಹಸೀಲ್ದಾರ್ ಕೆ.ಎನ್.ಲೋಕೇಶ್ ಅವರಿಗೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಮಲ್ಲಿಕಾರ್ಜುನಯ್ಯ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಎಚ್.ಮಲ್ಲಿಕಾರ್ಜುನಯ್ಯ ಮಾತನಾಡಿ, ರಾಜ್ಯ ಸರ್ಕಾರ 2017ರಲ್ಲಿ ರಚಿಸಿದ್ದ ವೇತನ ಆಯೋಗದ ವರದಿ ಸಲ್ಲಿಸಿದ 6 ತಿಂಗಳಲ್ಲೇ ಜಾರಿಗೊಳಿಸಲಾಗಿತ್ತು. ಅದು ಅನುಷ್ಠಾನಗೊಂಡು 5 ವರ್ಷವಾಗಿರುವುದರಿಂದ ನೌಕರರ ವೇತನ ಮತ್ತು ಭತ್ಯೆಗಳನ್ನು 2022 ಜುಲೈ ತಿಂಗಳಿಂದ ಪರಿಷ್ಕರಿಸಬೇಕಿತ್ತು. ಸಂಘದ ಒತ್ತಡದಿಂದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚಿಸಿಸಿದರೂ ಅದು ಜಾರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಏಳನೇ ವೇತನ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಗೊಳಿಸಬೇಕು. ಎನ್ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ಮಾಡಬೇಕು. ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯಬೇಕು ಎಂದು ಶಾಸಕರನ್ನು ಒತ್ತಾಯಿಸಿದರು.
ಶಾಸಕರ ಕಚೇರಿ ಬಳಿ ಈ ಬಗ್ಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಮುಖ್ಯಮಂತ್ರಿಗಳೊಂದಿಗೆ ಈ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಸಂಘದ ವಿವಿಧ ಪದಾಧಿಕಾರಿಗಳಾದ ಲಿಂಗರಾಜು, ಪುಟ್ಟಸ್ವಾಮಿಗೌಡ, ಚಂದ್ರಶೇಖರ್, ವೆಂಟಕೇಶ್, ಶಿವಶಂಕರ್, ಮಹದೇವಮ್ಮ, ಜಿ.ಎನ್.ಮಲ್ಲೇಶ್, ಸೋಮು, ಗುರುಸ್ವಾಮಿ, ವಿನಯ್ ಇದ್ದರು.