ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಮಂಗಳವಾರ ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಸೈಕಲ್ ಹಾಗೂ ಟಾಂಗಾ ಗಾಡಿಗಳ ಮೂಲಕ ಆಗಮಿಸಿ ಧರಣಿ ನಡೆಯಿತು. ಈ ವೇಳೆ ಹೆಚ್ಚಳ ಮಾಡಿರುವ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುವಂತೆ ಜೆಡಿಎಸ್ ಆಗ್ರಹಿಸಿತು. ಅಲ್ಲದೇ, ಪಕ್ಷದ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಸರ್ಕಾರ ತೈಲಬೆಲೆ ಹೆಚ್ಚಳ ಮಾಡಿ ಗ್ರಾಹಕರಿಗೆ ಹೊರೆಯಾಗಿಸಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗಲಿದ್ದು, ಶ್ರೀಸಾಮಾನ್ಯರಿಗೆ ತೊಂದರೆಯಾಗಲಿದೆ. ರಾಜ್ಯಸರ್ಕಾರ ಕೂಡಲೇ ಬೆಲೆ ಇಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಮೇಶ್ ಗೌಡರು, ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿಗಳನ್ನು ಜನರ ಮೇಲೆ ಹೇರುತ್ತಿದೆ. ಐದು ಗ್ಯಾರಂಟಿಗಳಿಗೆ ಹಣ ಹೊಂದಿಸುವುದಕ್ಕೆ ಜನರ ಕಿಸೆಗೆ ಕೈ ಹಾಕಲಾಗಿದೆ. ಜನರಿಗೆ ಅಗ್ಗದ ಆಮಿಷಗಳನ್ನೊಡ್ಡಿ ಜನರಿಂದಲೇ ದೊಡ್ಡ ಪ್ರಮಾಣದಲ್ಲಿ ಹಣ ಸುಲಿಗೆ ಮಾಡುತ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯಿಂದ ದಿನಬಳಕೆ ವಸ್ತುಗಳ ಬೆಲೆ ಗಗನಮುಖಿ ಆಗಿದೆ. ಬಡವರು, ಮಧ್ಯಮ ವರ್ಗದ ಜನರ ಬದುಕು ದುಸ್ತರವಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜವರಾಯಿ ಗೌಡ, ಜೆಡಿಎಸ್ ರಾಜ್ಯ ಕಾನೂನು ವಿಭಾಗದ ಅಧ್ಯಕ್ಷ ಎ.ಪಿ.ರಂಗನಾಥ್ ಉಪಸ್ಥಿತರಿದ್ದರು.