ಪೆಟ್ರೋಲ್‌ ಪಂಪ್‌ ಸಿಬ್ಬಂದಿ ಮೇಲೆ ಹಲ್ಲೆ: ಮೂವರ ಬಂಧನ

| Published : Jul 26 2025, 12:00 AM IST

ಸಾರಾಂಶ

ಪಟ್ಟಣದ ಹೊರವಲಯ ಹೇರೂರು ಗ್ರಾಮ ಸಿಐಟಿ ಕಾಲೇಜು ಬಳಿಯ ಎಂಆರ್ ಪಿಎಲ್ ಪೆಟ್ರೋಲ್ ಬಂಕ್ ನಲ್ಲಿ ತಡರಾತ್ರಿ ಸುಮಾರು ಏಳೆಂಟು ಜನರ ಗುಂಪು ದೊಣ್ಣೆ ಹಿಡಿದುಕೊಂಡು ಹಲ್ಲೆ ಮಾಡಿ ಅಟ್ಟಹಾಸ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗುವ ಜೊತೆಗೆ ಗುಬ್ಬಿ ಪಟ್ಟಣದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ಪಟ್ಟಣದ ಹೊರವಲಯ ಹೇರೂರು ಗ್ರಾಮ ಸಿಐಟಿ ಕಾಲೇಜು ಬಳಿಯ ಎಂಆರ್ ಪಿಎಲ್ ಪೆಟ್ರೋಲ್ ಬಂಕ್ ನಲ್ಲಿ ತಡರಾತ್ರಿ ಸುಮಾರು ಏಳೆಂಟು ಜನರ ಗುಂಪು ದೊಣ್ಣೆ ಹಿಡಿದುಕೊಂಡು ಹಲ್ಲೆ ಮಾಡಿ ಅಟ್ಟಹಾಸ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗುವ ಜೊತೆಗೆ ಗುಬ್ಬಿ ಪಟ್ಟಣದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.ಪೆಟ್ರೋಲ್ ಬಂಕ್ ಗೆ ದ್ವಿಚಕ್ರ ವಾಹನದಲ್ಲಿ ಬಂದ ಪುಂಡರ ಗುಂಪು ಕುಡಿದ ಅಮಲಿನಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಸಿಗರೇಟ್ ಸೇದುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದ ಬಂಕ್ ಸಿಬ್ಬಂದಿ ಇಲ್ಲಿ ಸಿಗರೇಟ್ ಸೇದುವಂತಿಲ್ಲ ಎಂದಿದ್ದಕ್ಕೆ ಏಕಾಏಕಿ ದೊಣ್ಣೆ, ಕಬ್ಬಿಣದ ಬಕೆಟ್, ಚೇ‌ರ್ ತೆಗೆದುಕೊಂಡು ಬಂಕ್ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಪಟ್ಟಣದಲ್ಲಿ ಹಲವು ಬಡಾವಣೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ರಾತ್ರಿ 12 ರವರೆಗೆ ಗುಂಪುಗೂಡಿ ದಾಂಧಲೆ ಮಾಡುವ ಘಟನೆ ಕೆಲ ಬಡಾವಣೆಯಲ್ಲಿ ನಡೆದಿದೆ. ಅಹಿತಕರ ಘಟನೆಗಳು ಹೆಚ್ಚಾಗುವ ಮುನ್ನ ಪೊಲೀಸ್‌ ಇಲಾಖೆ ಎಚ್ಚೆತ್ತು ಕೊಳ್ಳಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ರಾತ್ರಿ ನಡೆದ ಪೆಟ್ರೋಲ್ ಬಂಕ್ ಗಲಭೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಗುಬ್ಬಿ ಪೊಲೀಸ್ ನವರು ಕೇಸ್ ದಾಖಲಿಸಿಕೊಂಡು ತನಿಖೆ ನಂತರ 3 ಜನರನ್ನು ಬಂಧಿಸಿದ್ದಾರೆ.