ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಇಬ್ಬರು ಯುವಕರ ನಡುವೆ ಮಾತಿಗೆ ಮಾತು ಬೆಳೆದು ಘಟನೆ ಅತಿರೇಕಕ್ಕೆ ತಿರುಗಿ ಗುಂಡಿನ ಕಾಳಗ ನಡೆದಿರುವ ಪ್ರಕರಣ ಕುಶಾಲನಗರದ ಬಡಾವಣೆಯೊಂದರಲ್ಲಿ ಭಾನುವಾರ ತಡರಾತ್ರಿ ನಡೆದಿದೆ.ಕುಶಾಲನಗರ ಕರಿಯಪ್ಪ ಬಡಾವಣೆ ನಿವಾಸಿ ಶಶಿಕುಮಾರ್ ( 40) ಎಂಬಾತ ಗುಂಡಿನ ದಾಳಿಗೆ ಒಳಗಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತನ್ನ ಮನೆಯ ಬಳಿ ತಡರಾತ್ರಿಯಲ್ಲಿ ಬಂದ ಶಶಿಕುಮಾರ್‌ಗೆ ಡಬಲ್ ಬ್ಯಾರಲ್ ಕೋವಿಯಿಂದ ಗುಂಡು ಹೊಡೆದ ಅನುದೀಪ್ (40) ಸೇರಿದಂತೆ ಆತನನ್ನು ಮನೆಗೆ ಕರೆದುಕೊಂಡು ಹೋಗಿ ಗಲಭೆಗೆ ಪ್ರಚೋದನೆ ನೀಡಿದ್ದ ಆರೋಪಿ ಲವಕುಮಾರ್ ಎಂಬಾತನನ್ನು ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.ರಾತ್ರಿ ಒಂದು ಗಂಟೆಗೆ ಆನುದೀಪ್ ಮನೆಗೆ ತನ್ನ ಫಾರ್ಚುನರ್ ಕಾರಿನಲ್ಲಿ ತೆರಳಿ ಗುಂಡು ಹಾರಿಸಿದ್ದು, ಶಶಿಕುಮಾರ್ ಎಡಗಾಲಿಗೆ ಗುಂಡು ತಗುಲಿದ್ದು, ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ. ಕಾರಿನ ಚಾಲಕನ ಸೀಟಿನ ಕಡೆಗೆ ಒಟ್ಟು ಏಳು ಗುಂಡುಗಳು ತಗಲಿದ್ದು ಅದೃಷ್ಟವಶಾತ್ ಶಶಿಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಗ್ಗೆ ರಾತ್ರಿ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕೂಡಲೇ ಠಾಣಾಧಿಕಾರಿ ಚಂದ್ರಶೇಖರ್, ಗೀತಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಲವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.ಪ್ರಕರಣ ಹಿನ್ನೆಲೆ:
ಕುಶಾಲನಗರ ಸಮೀಪ ಕೊಪ್ಪ ಬಳಿ ಕ್ಲಬ್ ಒಂದರಲ್ಲಿ ಶಶಿಕುಮಾರ್ ಮತ್ತು ಅನುದೀಪ್ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆಸಿ ಘರ್ಷಣೆಗೆ ಇಳಿದಿದ್ದಾರೆ.ಅಲ್ಲಿಂದ ಹೊರ ಬಂದು ಕುಶಾಲನಗರ ಮುಖ್ಯ ರಸ್ತೆಯಲ್ಲಿ ಇಬ್ಬರೂ ಮತ್ತೆ ಸಂಘರ್ಷಕ್ಕೆ ಇಳಿದ ವೇಳೆ ಕೊಪ್ಪ ಬಳಿಯ ಹೋಂಸ್ಟೇ ಮಾಲೀಕ ಲವ ಎಂಬಾತ ಅನುದೀಪ್‌ನನ್ನು ಕುಶಾಲ ನಗರ ಕೂಡಿಗೆ ರಸ್ತೆಯಲ್ಲಿರುವ ಚೌಡೇಶ್ವರಿ ಬಡಾವಣೆಯ ಮನೆಗೆ ಬಿಟ್ಟು ಬಂದಿದ್ದಾನೆ.
ಈ ಸಂದರ್ಭ ಅನುದೀಪ್ ನನ್ನು ಹಿಂಬಾಲಿಸಿಕೊಂಡು ಹೋದ ಶಶಿಕುಮಾರ್ ಆತನ ಮನೆ ಬಳಿ ಸಂಘರ್ಷಕ್ಕೆ ಇಳಿದ ವೇಳೆ ಅನುದೀಪ್ ತನ್ನ ಕೋವಿಯಿಂದ ಗುಂಡು ಹಾರಿಸಿದ್ದಾನೆ.ಸ್ವಲ್ಪ ದೂರದಿಂದ ಗುಂಡು ಹಾರಿಸಿದ ಕಾರಣ ಗುಂಡುಗಳು ಕಾರಿನ ಚಾಲಕನ ಸೀಟಿನ ಬಳಿಯ ಬಾಗಿಲಿಗೆ ತಾಗಿ ಕಾರಿನೊಳಗೆ ನುಸುಳಿದ್ದು, ಈ ಪೈಕಿ ಒಂದು ಗುಂಡು ಶಶಿಕುಮಾರ್ ಎಡಗಾಲಿಗೆ ತಗಲಿದೆ.
ಅಲ್ಲಿಂದ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಕುಶಾಲನಗರ ಠಾಣೆಗೆ ಮಾಹಿತಿ ನೀಡಿದ ಬೆನ್ನಲ್ಲೇ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಕುಶಾಲನಗರ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ, ಕುಶಾಲನಗರ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಕಾಶ್, ಠಾಣಾಧಿಕಾರಿಗಳಾದ ಚಂದ್ರಶೇಖರ್, ಗೀತಾ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಕೋವಿ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಗಾಯಾಳು ಶಶಿಕುಮಾರ್ ಅಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.