ಕನ್ನಡಪ್ರಭ ವಾರ್ತೆ ಬೆಂಗಳೂರು
ತಮ್ಮ ಮನೆ ನಲ್ಲಿಯಲ್ಲಿ ಕಾಲು ತೊಳೆಯುವ ವಿಚಾರಕ್ಕೆ ಆಕ್ಷೇಪಿಸಿದ ಪಿಜಿ ಮಾಲಿಕನ ಮೇಲೆ ಬ್ಯಾಟ್‌ನಿಂದ ಹಲ್ಲೆ ನಡೆಸಿ ಪಾನಮತ್ತ ಇಬ್ಬರು ಪದವಿ ವಿದ್ಯಾರ್ಥಿಗಳು ಕೊಂದಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.ಒಎಂಆರ್ ಲೇಔಟ್ ನಿವಾಸಿ ಮಾಧವ್ ಮಟ್ಲೆ (37) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ವಿದ್ಯಾರ್ಥಿಗಳಾದ ರಾಕೇಶ್ ಹಾಗೂ ಡಾನ್ ಬ್ರೈಟ್ ಸನ್ ಬಂಧಿತರಾಗಿದ್ದಾರೆ. ಕಸ್ತೂರಿ ರಸ್ತೆ ಪಕ್ಕದಲ್ಲಿರುವ ಮಾಧವ್ ಮನೆ ಹೊರಾವರಣದಲ್ಲಿ ಸೋಮವಾರ ಸಂಜೆ ವಿದ್ಯಾರ್ಥಿಗಳು ಕಾಲು ತೊಳೆಯಲು ಹೋದಾಗ ಗಲಾಟೆ ನಡೆದು ಈ ಹತ್ಯೆ ಕೃತ್ಯ ನಡೆದಿದೆ.
ಮೃತ ಮಾಧವ್ ಮೂಲತಃ ಆಂಧ್ರದವರಾಗಿದ್ದು, ಒಎಂಆರ್ ಲೇಔಟ್‌ನ ಕಸ್ತೂರಿನಲ್ಲಿ ನಗರದ ರಸ್ತೆಯಲ್ಲಿ ಅವರು ‘ಲಕ್ಷ್ಮೀ ನರಸಿಂಹ’ ಹೆಸರಿನ ಪಿಜಿ ನಡೆಸುತ್ತಿದ್ದರು. ಆ ಪಿಜಿ ಕಟ್ಟಡದ ಕೆಳಮಹಡಿಯಲ್ಲಿ ಅವರ ಮನೆ ಇದೆ. ಇನ್ನು ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂನಲ್ಲಿ ರಾಕೇಶ್ ಹಾಗೂ ಪ್ರಥಮ ವರ್ಷದ ಬಿಬಿಎನಲ್ಲಿ ಡಾನ್ ಓದುತ್ತಿದ್ದರು. ಹಲವು ವರ್ಷಗಳಿಂದ ಇಬ್ಬರು ಗೆಳೆಯರಾಗಿದ್ದು, ಸೋಮವಾರ ಸಂಜೆ ಮದ್ಯ ಸೇವಿಸಿ ಬೈಕ್‌ನಲ್ಲಿ ಇಬ್ಬರು ಮನೆಗೆ ಮರಳುತ್ತಿದ್ದರು. ಆಗ ಮಾರ್ಗ ಮಧ್ಯೆ ಮಾಧವ್ ಮನೆ ಸಮೀಪದ ಖಾಲಿ ಪ್ರದೇಶದಲ್ಲಿ ಶೌಚ ಮಾಡಲು ವಿದ್ಯಾರ್ಥಿಗಳು ಹೋಗಿದ್ದರು. ಆ ವೇಳೆ ತಮ್ಮ ಕಾಲಿಗೆ ಮೆತ್ತಿಕೊಂಡ ಗಲೀಜನ್ನು ತೊಳೆದುಕೊಳ್ಳಲು ರಸ್ತೆ ಬದಿಯ ಮಾಧವ ಮನೆಗೆ ಅವರು ತೆರಳಿದ್ದಾರೆ. ಮನೆ ಹೊರಗಿದ್ದ ನಲ್ಲಿಯಲ್ಲಿ ಕಾಲು ತೊಳೆಯುವಾಗ ಬಂದ ಮಾಧವ್, ಮನೆ ಆವರಣಕ್ಕೆ ಬಂದಿದ್ದಕ್ಕೆ ವಿದ್ಯಾರ್ಥಿಗಳಿಗೆ ಏರಿದ ದನಿಯಲ್ಲಿ ಪ್ರಶ್ನಿಸಿ ಬೈದಿದ್ದಾರೆ. ಈ ಮಾತಿಗೆ ಪಾನಮತ್ತರಾಗಿದ್ದ ವಿದ್ಯಾರ್ಥಿಗಳು ಕೆರಳಿದ್ದಾರೆ.ಆ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಮಾಧವ್, ಮನೆಯೊಳಗೆ ಹೋಗಿ ಕ್ರಿಕೆಟ್ ಬ್ಯಾಟ್ ತಂದು ವಿದ್ಯಾರ್ಥಿಗಳಿಗೆ ಹೊಡೆಯಲು ಯತ್ನಿಸಿದ್ದಾರೆ. ತಕ್ಷಣವೇ ಅದೇ ಬ್ಯಾಟ್ ಕಸಿದುಕೊಂಡು ಅವರ ಮೇಲೆಯೇ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡು ಮಾಧವ್ ಮೃತಪಟ್ಟಿದ್ದಾರೆ. ಈ ಬಗ್ಗೆ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಕೆಲವೇ ಕ್ಷಣಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
