ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲ ದೂರದ ಬೆಂಗಳೂರು, ಮಂಗಳೂರಿನ ಕಾಲೇಜುಗಳ ಮಾಸ್ಟರ್ ಡಿಗ್ರಿ ಓದುವ 9 ನೂರು ವಿದ್ಯಾರ್ಥಿಗಳು ಹಾನಗಲ್ಲ ತಾಲೂಕಿನ 20 ಹಳ್ಳಿಗಳ ಪ್ರಾಥಮಿಕ ಶಾಲೆಗಳ ಮಕ್ಕಳೊಂದಿಗೆ ಬೆರೆತು, ಅಭಿವೃದ್ಧಿಯ ಕನಸು ಕಟ್ಟಿ ಕೊಟ್ಟಿದ್ದಲ್ಲದೆ ಸ್ವಂತ ಖರ್ಚಿನಲ್ಲಿ ಶಾಲೆಗೆ ಬಣ್ಣ ಸುಣ್ಣ ಮಾಡುವ ಮೂಲಕ ವಿಶೇಷತೆಯನ್ನು ಮೆರೆದಿದ್ದಾರೆ. ಹಾನಗಲ್ಲಿನ ಲೋಯಲಾ ವಿಕಾಸ ಕೇಂದ್ರದ ಸಹಭಾಗಿತ್ವದಲ್ಲಿ ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜು ಹಾಗೂ ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು ಹಾನಗಲ್ಲ ತಾಲೂಕಿಗೆ 12 ತಂಡಗಳಲ್ಲಿ ಬಂದು, ಹಳ್ಳಿಯಲ್ಲಿಯೇ 5 ದಿನ ವಾಸವಾಗಿ, ಅಲ್ಲಿನ ಶಾಲೆಗಳಲ್ಲಿದ್ದು, ಮಕ್ಕಳೊಂದಿಗೆ ಬೆರೆತು ಮೌಲ್ಯ, ಶಿಕ್ಷಣ, ಆಟ ಪಾಠಗಳಲ್ಲಿಯೂ ಪಾಲ್ಗೊಂಡುದು ಮಾತ್ರವಲ್ಲ ಶಾಲೆಯ ಸ್ವಚ್ಛತೆಗಾಗಿ ಪೊರಕೆ ಹಿಡಿದು ಕಸ ಗುಡಿಸಿ, ಶಾಲೆಗೆ ಸುಣ್ಣ ಬಣ್ಣ ಮಾಡಿರುವುದು ಹಳ್ಳಿಗರಿಗೆ ಒಂದು ವಿಶೇಷ ಅನುಭವವನ್ನು ನೀಡಿದೆ. ಶಾಲೆಗಳಿಗೆ ವರ್ಲಿ ಕಲೆಯ ಚಿತ್ರಗಳನ್ನು ಬಿಡಿಸಿರುವುದು ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಆಗಿದೆ. ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಿದ್ದಾರೆ. ಬೇಸಿಕ್ ಇಂಗ್ಲಿಷ್‌, ಸ್ಪೋಕನ್ ಇಂಗ್ಲಿಷ್‌ ಕಲಿಸಿದ್ದಾರೆ. ಬೀದಿ ನಾಟಕಗಳನ್ನು ಮಾಡಿಸಿದ್ದಾರೆ. ಆರೋಗ್ಯ ಜಾಗೃತಿ, ಬಾಲ ಕಾರ್ಮಿಕ ಜಾಗೃತಿಯೂ ಸೇರಿದಂತೆ ಲಿಂಗ ಸಮಾನತೆ, ಮಕ್ಕಳ ಹಕ್ಕು ಮತ್ತು ರಕ್ಷಣೆ, ಕೌಶಲ್ಯದ ಪಾಠಗಳನ್ನೂ ಹೇಳಿದ್ದಾರೆ. ಜಾಗೃತಿ ಜಾಥಾಗಳನ್ನು ನಡೆಸಿದ್ದಾರೆ. ಈ ಎಲ್ಲದಕ್ಕೂ 900 ವಿದ್ಯಾರ್ಥಿಗಳು 80 ಸಾವಿರ ರು. ತಮ್ಮ ಜೇಬಿನಿಂದ ಖರ್ಚು ಮಾಡಿದ್ದಾರೆ. ದತ್ತು ಶಾಲೆ: ಇದೇ ಸಂಭ್ರಮದಲ್ಲಿ ಹಾನಗಲ್ಲಿನ ಲೋಯಲಾ ವಿಕಾಸ ಕೇಂದ್ರ ತಾಲೂಕಿನ ಕತ್ರಿಕೊಪ್ಪ ಹಾಗೂ ಇನಾಂ ನೀರಲಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದತ್ತು ತೆಗೆದುಕೊಂಡಿದೆ. ಈ ಎರಡೂ ಶಾಲೆಗಳಿಗೆ ಸಂಸ್ಥೆಯಿಂದ ಈಗಾಗಲೇ 67 ಸಾವಿರ ರು. ಖರ್ಚು ಮಾಡಿ ಅಭಿವೃದ್ಧಿಗೆ ಮುಂದಾಗಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಶಾಲೆಗೆ ಒಳ್ಳೆಯ ವಾತಾವರಣ ನೀಡಲು ಎಲ್ಲ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಲೋಯಲಾ ಸಂಸ್ಥೆಯ ನಿರ್ದೇಶಕ ವಿನ್ಸಂಟ್ ಜೇಸನ್ ಅವರ ಮಾರ್ಗದರ್ಶನಲ್ಲಿ ಸಂಸ್ಥೆಯ ಪಿರಪ್ಪ ಶಿರಸಿ, ರೇವಣ್ಣ ದಾನಗೊಂಡರ್, ಮೈಲಾರಿ ಜಾಡರ, ಫಕ್ಕೀರೇಶ ಗೌಡಳ್ಳಿ, ಎಸ್.ಬಿ. ಜಯಮ್ಮ, ವೈ.ಎಸ್. ಹೊನ್ನಮ್ಮ, ಲೋಹಿತ ಕಾಟಣ್ಣನವರ, ರಮೆಶ ಬಾರ್ಕಿ ಅವರ ಬೆಂಬಲ ಪರಿಶ್ರಮ 900 ವಿದ್ಯಾರ್ಥಿಗಳ ಸೇವೆ ಹಾಗೂ ಸುರಕ್ಷತೆಗೆ ಸಹಕಾರಿಯಾಗಿದೆ.ಪಟ್ಟಣ ಪ್ರದೇಶದಿಂದ ಬಂದ ಯುವ ವಿದ್ಯಾರ್ಥಿಗಳು ಹಳ್ಳಿಯ ಪರಿಸರ ಕಲಿಯುವುದು ಅತ್ಯಂತ ಮುಖ್ಯ. ಅದಕ್ಕಾಗಿಯೇ ಮಕ್ಕಳನ್ನು ಇಲ್ಲಿಗೆ ಕರೆತರಲಾಗಿತ್ತು. ಇದೊಂದು ವಿಶೇಷ ಅನುಭವ. ಅಲ್ಲದೆ ಹಳ್ಳಿಯ ನಾಗರಿಕರು ತೋರಿದ ಪ್ರೀತಿ ಮಾತ್ರ ಅನುಕರಣೀಯವಾದುದು. ವಿದ್ಯಾರ್ಥಿಗಳು ಕೂಡ ಹಳ್ಳಿಯ ಸಾರ್ವಜನಿಕರೊಂದಿಗೆ ಬೆರೆತು, ಜನರ ಪ್ರೀತಿಯಲ್ಲಿ ಮುಳುಗು ಹೋಗಿದ್ದರು. ಮರಳಿ ಹೋಗುವಾಗ ಕಣ್ಣೀರಿಟ್ಟ ಸಂದರ್ಭಗಳು ನಿಜಕ್ಕೂ ಅಚ್ಚರಿಯ ಅನುಭವ. ಗ್ರಾಮಗಳಲ್ಲಿನ ಸುಖ ಪಟ್ಟಣಗಳಲ್ಲಿ ಇಲ್ಲ. ಇಲ್ಲಿನ ಸ್ನೇಹ ಪ್ರೀತಿ ನಿಜಕ್ಕೂ ಹಾಗೆಯೇ ಇದೆ. ನಮ್ಮ ಹಳ್ಳಿಗಳಿಗೆ ನಿಜಕ್ಕೂ ಒಂದು ದೊಡ್ಡ ಹ್ಯಾಟ್ಸಪ್ ಎಂದು ಉಪನ್ಯಾಸಕ ಪ್ರೊ.ಬ್ರಿಲ್, ಡೀನ್‌ ಡಾ. ಹೇಮಲತಾ, ಮಂಗಳೂರು ಯೂನಿವರ್ಸಿಟಿ ಅಲೋಸಿಯಸ್ ಹೇಳಿದರು.ಪ್ರತಿ ವರ್ಷ ಈ ಕಾಲೇಜುಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಅವರಿಗೆ ಹಳ್ಳಿಗಳಲ್ಲಿ ಇರಲು ವ್ಯವಸ್ಥೆ ಮಾಡುತ್ತೇವೆ. ಒಳ್ಳೆಯ ಅನುಭವ ಪಡೆದು ಮರಳುತ್ತಾರೆ. ವಿದ್ಯಾರ್ಥಿಗಳು ಕೂಡ ಗ್ರಾಮ ಜೀವನದಲ್ಲಿ ಬೆರೆತು ಮರಳಿ ಹೋಗುವ ಮನಸ್ಸಿಲ್ಲದೆ ಕಣ್ಣೀರಿಡುತ್ತಾರೆ. ಅದರೊಂದಿಗೆ ತಾವು ಪಟ್ಟಣದ ಹೈಟೆಕ್ ವ್ಯವಸ್ಥೆಯಿಂದ ಬಂದಿದ್ದರೂ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇಲ್ಲಿ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಲೋಯಲಾ ಸಂಸ್ಥೆಯ ನಿರ್ದೇಶಕ ವಿನ್ಸಂಟ್ ಜೇಸನ್ ಹೇಳಿದರು.