ವಿವಿಧ ಸ್ಥಳಕ್ಕೆ ಫಣೀಂದ್ರ ದಿಢೀರ್‌ ಭೇಟಿ

| Published : Mar 20 2025, 01:15 AM IST

ಸಾರಾಂಶ

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಉಪ ಲೋಕಾಯುಕ್ತ ನ್ಯಾಯಾಧೀಶ ಕೆ.ಎನ್.ಫಣೀಂದ್ರ ಅವರು ವಿವಿಧೆಡೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್‌ ನೀಡಿದರು.

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಉಪ ಲೋಕಾಯುಕ್ತ ನ್ಯಾಯಾಧೀಶ ಕೆ.ಎನ್.ಫಣೀಂದ್ರ ಅವರು ವಿವಿಧೆಡೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್‌ ನೀಡಿದರು.

ಭೇಟಿ ವೇಳೆ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ ಅವರು, ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಗರಂ ಆದರು. ಇದು ಹೀಗೆ ಮುಂದುವರಿದರೆ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದರು.ಮೊದಲಿಗೆ ಮಹಾತ್ಮ ಗಾಂಧಿ ಉದ್ಯಾನವನಕ್ಕೆ ಭೇಟಿದ ಅವರು, ಅಲ್ಲಿನ ಅವ್ಯವಸ್ಥೆ ಕಂಡು ಗರಂ ಆದರು. ಜೊತೆಗೆ ವಾಯು ವಿಹಾರಕ್ಕೆ ಆಗಮಿಸಿದ್ದ ನಾಗರಿಕರು ಹಲವು ಸಮಸ್ಯೆಗಳನ್ನು ಉಪ ಲೋಕಾಯುಕ್ತರ ಮುಂದಿಟ್ಟರು. ಕಾಲಮಿತಿಯೊಳಗೆ ಪಾರ್ಕ್‌ನ ಅವ್ಯವಸ್ಥೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಮುಂದಿನ 20 ದಿನಗಳೊಳಗಾಗಿ ವಾಯುವಿಹಾರಿಗಳಿಗೆ ಅನುಕೂಲವಾಗುವಂತೆ ಉದ್ಯಾನವನದ ಆಯ್ದ ನಾಲ್ಕು ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ಬೆಳಕು, ಒದಗಿಸುವುದರ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ತಾಕೀತು ಮಾಡಿದ ಅವರು, ನಿಗದಿಪಡಿಸಿದ ಕಾಲಮಿತಿಯಲ್ಲಿ ಸಂಪೂರ್ಣ ಕಾರ್ಯವನ್ನು ಪೂರ್ಣಗೊಳಿಸಬೇಕು. ಅಲ್ಲಿಯವರೆಗೂ ಪಾಲಿಕೆ ಆಯುಕ್ತರ ವಿರುದ್ಧ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಳ್ಳಲಾಗುವುದು ಎಂದರು.

ಸಮಸ್ಯೆಗಳಿಗೆ ಪರಿಹಾರ ದೊರಕಿದ ಮಾಹಿತಿ ನೀಡಿದ ನಂತರ ದಾಖಲಿಸಿಕೊಳ್ಳಲಾದ ದೂರನ್ನು ವಿಲೇ ಮಾಡಲಾಗುವುದು. ಪಾಲಿಕೆ ಅಧಿಕಾರಿಗಳು, ಉದ್ಯಾನವನದ ಉಸ್ತುವಾರಿ ಸಿಬ್ಬಂದಿ ತಮ್ಮ ಜಬಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಉದ್ಯಾನವನದ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿರುವುದರ ಜೊತೆಗೆ ಅನುದಾನದ ಕೊರತೆಯೂ ಪ್ರಮುಖವಾದ ಕಾರಣವಾಗಿರುವುದನ್ನು ಗುರುತಿಸಲಾಗಿದೆ. ಇಲ್ಲಿನ ಅಭಿಯಂತರರು ಮುಂದಿನ ಆರು ತಿಂಗಳೊಳಗಾಗಿ ಉದ್ಯಾನವನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ. ಸಮಸ್ಯೆಗಳನ್ನು ಆದ್ಯತೆಯ ಮೇಲೆ ಇತ್ಯರ್ಥಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ತುಂಗಾ ನಾಲೆಗೆ ಭೇಟಿ :

ರಾಜೇಂದ್ರ ನಗರದಲ್ಲಿ ಹರಿದು ಹೋಗುವ ತುಂಗಾನಾಲೆ ನಗರದ ತ್ಯಾಜ್ಯದಿಂದ ತುಂಬಿಹೋಗಿದ್ದು, ಸಾಂಕ್ರಾಮಿಕ ರೋಗಗಳ ಆಗರವಾಗಿದೆ. ಇದನ್ನು ಸ್ವಚ್ಛಗೊಳಿಸುವಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸ್ವಚ್ಛತೆ ಎಂಬುದು ಸರ್ಕಾರದ ಇಲಾಖೆಗಳ ಕಾರ್ಯ ಮಾತ್ರವಲ್ಲ, ಇಲ್ಲಿನ ನಿವಾಸಿಗಳು ಕೂಡ ನಾಲೆಗೆ ಕಸ ಹಾಕದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಈ ಪ್ರದೇಶದಲ್ಲಿನ ಅಶುದ್ಧ ಗಾಳಿ ಮತ್ತು ತ್ಯಾಜ್ಯದ ನಿಯಂತ್ರಣಕ್ಕೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವಂತೆ ಉಪಲೋಕಾಯುಕ್ತರು ಪಾಲಿಕೆ ಅಭಿಯಂತರ ಭರತ್‌ ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಈ ನಾಲೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ತುರ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಆಸ್ಪತ್ರೆಯ ತ್ಯಾಜ್ಯ ಹಾಕುತ್ತಿರುವವರ ಬಗ್ಗೆ ಮಾಹಿತಿ ನೀಡಿದಲ್ಲಿ ಅಂತಹ ಆಸ್ಪತ್ರೆಗಳ ವೈದ್ಯರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ನವುಲೆ ಕೆರೆ ಭೇಟಿ :

ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಸ್ಥಳೀಯ ಜಿಲ್ಲಾಧಿಕಾರಿ, ಮಹಾನಗರಪಾಲಿಕೆ ಆಯುಕ್ತರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡದೊಂದಿಗೆ ನವುಲೆ ಕೆರೆಗೆ ಭೇಟಿ ನೀಡಿದರು.

ಈ ವೇಳೆ ನವುಲೆ ಕೆರೆ ಅವ್ಯವಸ್ಥೆ ಕುರಿತಂತೆ ಉಪ ಲೋಕಾಯುಕ್ತರು ತೀವ್ರ ಬೇಸರ ವ್ಯಕ್ತಪಡಿಸಿದರು. ಸದರಿ ಕೆರೆ ಯಾವ ಇಲಾಖೆ ಉಸ್ತುವಾರಿಯಲ್ಲಿದೆ ಎಂಬುವುದರ ಬಗ್ಗೆಯೇ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ. ತಕ್ಷಣವೇ ಕೆರೆ ಜೀರ್ಣೋದ್ಧಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಂಬಂಧಿಸಿದ ಇಲಾಖಾ ಅಧಿಕಾರಿಗಳು ನಗರದ ಹೃದಯ ಭಾಗದಲ್ಲಿರುವ ಇಂತಹ ಬೃಹತ್‌ ಕೆರೆಯನ್ನು ಸ್ವಚ್ಛಗೊಳಿಸಿ, ಸಾರ್ವಜನಿಕ ಬಳಕೆಗೆ ಅನುಕೂಲವಾಗುವಂತೆ ರೂಪಿಸಲು ಸಲಹೆ ನೀಡಿದರು.

ಬಳಿಕ ಬಿ.ಎಚ್.ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ, ಆಹಾರದ ಗುಣಮಟ್ಟದ ಬಗ್ಗೆ ಗ್ರಾಹಕರಿಂದ ಮಾಹಿತಿ ಪಡೆದುಕೊಂಡರು.ನಂತರ ರಾಜೇಂದ್ರ ನಗರ ಬಡಾವಣೆ ಮೂಲಕ ಹಾದು ಹೋಗಿರುವ ತುಂಗಾ ನಾಲೆಯು ಕೊಳಚೆಯಿಂದ ಆವೃತವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಕಚೇರಿಯ ನ್ಯಾ.ಲೋಕಪ್ಪ.ಎನ್.ಆರ್, ಜೆ.ವಿ.ವಿಜಯಾನಂದ್‌, ಕಿರಣ್‌ ಪಿ.ಎಂ.ಪಾಟೀಲ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್‌.ಎಂ.ಎಸ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನಕುಮಾರ್‌, ಲೋಕಾಯುಕ್ತ ಎಸ್ಪಿ ಎಂ.ಎಚ್. ಮಂಜುನಾಥಚೌಧರಿ‌ ಮತ್ತಿತರರಿದ್ದರು.