ನೀರಿನ ಲಭ್ಯತೆ ಆಧಾರದ ಮೇಲೆ ಹೊರ್ತಿ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಯ ಎರಡನೇ ಹಂತ ಜಾರಿಗೊಳಿಸಲಾಗುವುದು ಎಂದು ಡಿಸಿಎಂ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನೀರಿನ ಲಭ್ಯತೆ ಆಧಾರದ ಮೇಲೆ ಹೊರ್ತಿ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಯ ಎರಡನೇ ಹಂತ ಜಾರಿಗೊಳಿಸಲಾಗುವುದು ಎಂದು ಡಿಸಿಎಂ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ತಿಳಿಸಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ವಿಠ್ಠಲ ಕಟಕಧೋಂಡ ಅವರು ಹೊರ್ತಿ ರೇವಣಸಿದ್ದೇಶ್ವರ ಯೋಜನೆಯ 2ನೇ ಹಂತವನ್ನು ಯಾವಾಗ ಪ್ರಾರಂಭ ಮಾಡುತ್ತೀರಿ ಎಂಬ ಪ್ರಶ್ನೆಗೆ, ಡಿಸಿಎಂ ಉತ್ತರಿಸಿ, ಹೊರ್ತಿ ರೇವಣ ಸಿದ್ದೇಶ್ವರ ಏತ ನೀರಾವರಿ‌ ಯೋಜನೆಯ ಎರಡನೇ ಹಂತದ ಅನುಷ್ಠಾನಕ್ಕೆ ನೀರಿನ ಲಭ್ಯತೆ ನೋಡಬೇಕಿದೆ. ನೀರಿಲ್ಲದೇ ಹೇಗೆ ಕೆಲಸ ಮಾಡೋದು? ಆಲಮಟ್ಟಿಯ 2.5 ಟಿಎಂಸಿ ನೀರನ್ನು ಬಳಸಿಕೊಂಡು 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಯೋಜನೆ ಇದಾಗಿದೆ ಎಂದರು.

ಆಲಮಟ್ಟಿ ಮೂರನೇ ಹಂತದ ವಿಚಾರವಾಗಿ ಇನ್ನೂ ಕೇಂದ್ರದಿಂದ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ. ಅದಕ್ಕಾಗಿ ನಾವು ಕಾರ್ಯಸಾಧ್ಯತೆಗಳನ್ನು ನೋಡುತ್ತಿದ್ದೇವೆ. ನಮಗೂ ಎರಡನೇ ಹಂತದ ಕೆಲಸ ಮುಗಿಸಬೇಕು ಎನ್ನುವ ಆಸೆಯಿದೆ ಎಂದರು. ಹೊರ್ತಿ ರೇವಣ ಸಿದ್ದೇಶ್ವರ ಏತ ನೀರಾವರಿ‌ ಯೋಜನೆಯ ಮೊದಲನೇ ಹಂತದ ಕಾಮಗಾರಿಯನ್ನು ₹2,638 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ 3.24 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುವುದು. ಇದರಿಂದ 6 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಅನುಕೂಲವಾಗಲಿದೆ ಎಂದರು. ಆಲಮಟ್ಟಿ ‌ಮೂರನೇ ಹಂತದ ಯೋಜನೆ ಅನುಷ್ಠಾನಕ್ಕೆ ಭೂ ಸ್ವಾಧೀನ ವಿಚಾರವಾಗಿ ದೊಡ್ಡ ತೀರ್ಮಾನ ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ನೋಡಿಕೊಂಡು ಕೆಲಸವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.