ಕಡೂರುನೀರಿನ ಲಭ್ಯತೆ ನೋಡಿಕೊಂಡು ನಾಲ್ಕನೇ ಹಂತದ ಭದ್ರಾ ಮೇಲ್ಡಂಡೆ ಯೋಜನೆ ಕಾಮಗಾರಿ ಆರಂಭಿಸುವುದಕ್ಕೆ ಕ್ರಮ ವಹಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಾಲ್ಕನೇ ಹಂತದ ಭದ್ರಾ ಮೇಲ್ಡಂಡೆ ಯೋಜನೆಗೆ ಶಾಸಕ ಆನಂದ್ ನೇತೃತ್ವದಲ್ಲಿ ನೀಡಿದ ಮನವಿ ಸ್ವೀಕಾರ
ಕನ್ನಡಪ್ರಭ ವಾರ್ತೆ ಕಡೂರುನೀರಿನ ಲಭ್ಯತೆ ನೋಡಿಕೊಂಡು ನಾಲ್ಕನೇ ಹಂತದ ಭದ್ರಾ ಮೇಲ್ಡಂಡೆ ಯೋಜನೆ ಕಾಮಗಾರಿ ಆರಂಭಿಸುವುದಕ್ಕೆ ಕ್ರಮ ವಹಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಾಲ್ಕನೇ ಹಂತದ ಭದ್ರಾ ಮೇಲ್ಡಂಡೆ ಯೋಜನೆ ಕಾಮಗಾರಿ ಆರಂಭಕ್ಕೆ ಕಡೂರಿನ ಶಾಸಕ ಆನಂದ್ ನೇತೃತ್ವದಲ್ಲಿ ನೂರಾರು ಮಂದಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಭಾನುವಾರ ಕಡೂರಿನಲ್ಲಿ ಮನವಿ ಸಲ್ಲಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ ಭದ್ರಾ ಮೇಲ್ಡಂಡೆ ಯೋಜನೆಗೆ ನಿಗದಿ ಪಡಿಸಿರುವ ನೀರಿನ ಪ್ರಮಾಣದಲ್ಲಿ ನೀರಿನ ಲಭ್ಯತೆ ಇದ್ದರೆ, ಮುಂದಿನ 4ನೇ ಹಂತದ ಕಾಮಗಾರಿ ನಡೆಸಲು ಅವಕಾಶ ಇದೆ. ಶಾಸಕ ಆನಂದ್ ನೇತೃತ್ವ ದಲ್ಲಿ ಮನವಿ ಸಲ್ಲಿಸಿ, ವರ್ಷದಲ್ಲಿ ಒಂದೆರಡು ಮಳೆ ಮಾತ್ರ ಆಗುತ್ತದೆ. ಕುಡಿಯುವ ನೀರಿಗೂ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಮೇಲ್ದಂಡೆ ಯೋಜನೆ ಮೂಲಕ ನೀರು ಪೂರೈಸಲು ಮನವಿ ಮಾಡಿದ್ದಾರೆ. ಪರಿಶೀಲನೆ ನಡೆಸುವುದಕ್ಕೆ ಅಧಿಕಾರಿ ಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಭದ್ರಾ ಮೇಲ್ಡಂಡೆ ಯೋಜನೆಯಿಂದ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಒಟ್ಟು 12 ತಾಲೂಕು ಗಳ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗಲಿದೆ. 74 ಲಕ್ಷ ಮಂದಿ ಈ ಯೋಜನೆಯಿಂದ ಸಹಕಾರಿ ಯಾಗಲಿದೆ ಎಂದು ತಿಳಿಸಿದರು.ಭದ್ರಾ ಹಾಗೂ ತುಂಗಾ ನದಿಯಿಂದ 29 ಟಿಎಂಟಿ ನೀರು ಬಳಕೆ ಮಾಡಲಾಗುತ್ತಿದ್ದು, ಈ ಪೈಕಿ 21 ಟಿಎಂಸಿಯನ್ನು ಸಣ್ಣ ನೀರಾ ವರಿಗೆ, 6 ಟಿಎಂಸಿ ಕೆರೆ ತುಂಬಿಸುವ ಯೋಜನೆಗೆ, ವಾಣಿವಿಲಾಸ ಸಾಗರ ಜಲಾಶಯಕ್ಕೆ 2 ಟಿಎಂಸಿ ಪೂರೈಕೆ ಮಾಡಲಾ ಗುವುದು. ಒಟ್ಟು 5.75 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಅನುಕೂಲವಾಗಲಿದೆ ಎಂದರು.
ಒಟ್ಟು 367 ಕೆರೆ ತುಂಬಿಸುವ ಯೋಜನೆ ಕೈಗೊಳ್ಳಲಾಗಿದೆ. 767 ಗ್ರಾಮಗಳಿಗೆ ಅನುಕೂಲವಾಗಲಿದೆ. ತುಂಗಾದಿಂದ ಭದ್ರಾ ಜಲಾಶಯಕ್ಕೆ 17.4 ಟಿಎಂಸಿ ನೀರು ಪಂಪ್ ಮಾಡುವ ಕಾಮಗಾರಿ ಪೂರ್ಣಗೊಂಡಿದೆ. ಅಜ್ಜಂಪುರದ ಬಳಿ ವೈಜಂಕ್ಷನ್ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟರೆ, ಯೋಜನೆಯ ಮೊದಲ 2 ಹಂತದ ಕಾಮಗಾರಿ ಪೂರ್ಣಗೊಂಡಿದ್ದು, 3ನೇ ಹಂತದ ಕಾಮಗಾರಿ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.ಕಡೂರು ಶಾಸಕ ಕೆ.ಎಸ್. ಆನಂದ್ ಮಾತನಾಡಿ, ಕೆರೆಗಳಿಗೆ ನೀರು ಹರಿಸುವ ಪ್ರಾಯೋಗಿಕ ಕಾರ್ಯ ಯಶಸ್ವಿಯಾಗಿದೆ. ಬರಗಾಲದಲ್ಲಿರುವ ಕಡೂರು ತಾಲೂಕು 79 ವರ್ಷದಿಂದ ಬರಗಾಲ ಎದುರಿಸುತ್ತಿದೆ. 2018 ರಿಂದ ಮೂರು ಹಂತದಲ್ಲಿ ನೀರು ಹರಿಸುವ ಯೋಜನೆಗೆ ಮೊದಲ ಹಂತದಿಂದ ಇದುವರೆಗೆ ₹90 ಕೋಟಿ ನೀಡಿದ್ದು, ಕಾಂಗ್ರೆಸ್ ಸರ್ಕಾರ ₹450 ಕೋಟಿ ಗುತ್ತಿಗೆ ದಾರರಿಗೆ ನೀರಾವರಿ ಬಿಲ್ ಕೂಡುವ ಮೂಲಕ ಕಾಮಗಾರಿ ವೇಗ ಪಡೆದಿದೆ. 2ನೇ ಹಂತದಲ್ಲಿ 72 ಕೆರೆ ಕಾಮಗಾರಿ ಮುಕ್ತಾಯ ವಾಗಲಿದೆ. 3ನೇ ಹಂತದಲ್ಲಿ ಕಡೂರು ಹಾಗು ಚಿಕ್ಕಮಗಳೂರು ಕ್ಷೇತ್ರದ 112 ಕೆರೆ ತುಂಬುವ ಯೋಜನೆಗೆ ಮತ್ತು 3ನೇ ಹಂತಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರ ₹309 ಕೋಟಿ ನೀಡಿದೆ. ಉಳಿದಂತೆ ಮುಖ್ಯವಾದ 4ನೇ ಹಂತ ಕಾಮಗಾರಿ ಆರಂಭಿಸ ಬೇಕಿದೆ ಎಂದು ಮನವಿ ಮಾಡಿದರು.
1.45 ಟಿಎಂಸಿ ನೀರು ನಮ್ಮ ಹಕ್ಕಾಗಿದ್ದರೂ ಕೂಡ ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ಭದ್ರಾ ಉಪಕಣಿವೆ ಯೋಜನೆ ಯಲ್ಲಿ ನಮ್ಮ ಕ್ಷೇತ್ರದ 38 ಕೆರೆಗಳಿಗೆ ನೀರಾವರಿ ಆಗಬೇಕಿದೆ. ಸಿಂಗಟಗೆರೆ ಮತ್ತು ಪಂಚನಹಳ್ಳಿ ಹೋಬಳಿ ವ್ಯಾಪ್ತಿಗೆ ಒಳ ಪಡುವ ಈ ಕೆರೆಗಳ ಕೊನೆ ಹಂತದ ಯೋಜನೆಗೆ ₹460 ಕೋಟಿ ಬೇಕಿದ್ದು, ಈ ಅನುದಾನ ನೀಡಬೇಕೆಂದು ಮನವಿ ಮಾಡಿದರು.ಈ ವೇಳೆ ನೀರಾವರಿ ಇಲಾಖೆ ಅಧಿಕಾರಿ ಹರೀಶ್, ನೀರಾವರಿ ಇಲಾಖೆ ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಭಂಡಾರಿ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ತೋಟದಮನೆ ಮೋಹನ್, ಈರಳ್ಳಿ ರಮೇಶ್, ಆಸಂದಿ ಕಲ್ಲೇಶ್, ಚಂದ್ರಮೌಳಿ ಇದ್ದರು.ಫೋಟೋ
ಭದ್ರಾ ಜಲಾಶಯ ಹಾಗೂ ಭದ್ರಾ ಮೇಲ್ಡಂಡೆ ಯೋಜನೆ ವಿವಿಧ ಕಾಮಗಾರಿಯನ್ನು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಭಾನುವಾರ ಪರಿಶೀಲಿಸಿದರು. ಈ ವೇಳೆ ತರೀಕೆರೆ ಶಾಸಕ ಶ್ರೀನಿವಾಸ್, ಮಾಜಿ ಶಾಸಕ ಸುರೇಶ್ ಸೇರಿದಂತೆ ಮೊದಲಾದವರಿದ್ದರು.---ಬಾಕ್ಸ್---ಭದ್ರಾ ಮೇಲ್ಡಂಡೆಗೆ ಕೇಂದ್ರ ನಯಾಪೈಸೆ ಕೊಟ್ಟಿಲ್ಲ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ₹5300 ಕೋಟಿ ಘೋಷಿಸಿದ್ದ ಕೇಂದ್ರ ಸರ್ಕಾರ ಈ ವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಆದರೆ, ರಾಜ್ಯ ಸರ್ಕಾರ ಈಗಾಗಲೇ ತನ್ನ ಪಾಲಿನ ₹12 ಸಾವಿರ ಕೋಟಿ ಅಧಿಕ ಹಣ ಖರ್ಚು ಮಾಡಿ ಕಾಮಗಾರಿ ಮುಂದುವರಿಸಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಭಾನುವಾರ ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ಹಾಗೂ ಜಲಾಶಯದ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮಳೆ ಕೊರತೆಯಿಂದ ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆ ಇದೆ. ಆದರೆ,ಈ ವ್ಯಾಪ್ತಿಯ ಚಿತ್ರದುರ್ಗ, ತುಮಕೂರು ಸೇರಿದಂತೆ ಎಲ್ಲಾ ಜಿಲ್ಲೆಗಳ ಜನರಿಗೆ ಕುಡಿವ ನೀರು ಪೂರೈಸಲು ಮೊದಲ ಆದ್ಯತೆ ನೀಡಲಾಗುವುದು ಎಂದರು.ಯಾವುದೇ ಪರಿಸ್ಥಿತಿಯಲ್ಲೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಜಲಾಶಯಗಳಲ್ಲಿ ಅಗತ್ಯ ನೀರು ಕಾಯ್ದಿರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅಡೆತಡೆಗಳ ನಿವಾರಣೆಗೆ ಅಧಿಕಾರಿಗಳಿಗೆ ಗಡುವು:ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪರಿಶೀಲಿಸಿದ ಸಚಿವರು, ಅರಣ್ಯ ಇಲಾಖೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಯಲ್ಲಿದ್ದ ತೊಡಕುಗಳನ್ನು ಶೀಘ್ರವಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು. ತುಮಕೂರು ಭಾಗದ ಕಾಲುವೆ ಹಾದುಹೋಗುವ ಮಾರ್ಗದಲ್ಲಿ ಅರಣ್ಯ ಇಲಾಖೆ ಹಾಗೂ ಚಿತ್ರದುರ್ಗ ಸೇರಿದಂತೆ ಕೆಲವು ಕಡೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ಸಣ್ಣಪುಟ್ಟ ಅಡೆತಡೆಗಳಿದ್ದವು. ಇವೆಲ್ಲವನ್ನೂ ಆದಷ್ಟು ಬೇಗ ನಿವಾರಿಸಿ, ಕೆಲಸಕ್ಕೆ ವೇಗ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾದೆ. ಅವರು ನಿಗಾ ವಹಿಸಿದ್ದಾರೆ ಎಂದು ತಿಳಿಸಿದರು.