ಪಂಚಮಸಾಲಿ 2ಎ ಮೀಸಲಿಗೆ 6 ನೇ ಹಂತದ ಧರಣಿ: ಜಯ ಮೃತ್ಯುಂಜಯ

| Published : Feb 12 2024, 01:31 AM IST

ಪಂಚಮಸಾಲಿ 2ಎ ಮೀಸಲಿಗೆ 6 ನೇ ಹಂತದ ಧರಣಿ: ಜಯ ಮೃತ್ಯುಂಜಯ
Share this Article
  • FB
  • TW
  • Linkdin
  • Email

ಸಾರಾಂಶ

ಭಗವಂತ ಸಿದ್ದರಾಮಯ್ಯನವರಿಗಾದರೂ ಒಳ್ಳೆಯ ಬುದ್ಧಿಯನ್ನು ಕೊಟ್ಟು ಪಂಚಮಸಾಲಿ ಸಮಾಜವನ್ನು 2 ಎಗೆ ಸೇರ್ಪಡೆ ಗೊಳಿಸಲಿ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕಟಕಿಯಾಡಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಲಿಂಗಾಯಿತ ಪಂಚಮಸಾಲಿ ಹಾಗೂ ಮಲೇಗೌಡರನ್ನು ಪ್ರವರ್ಗ 2ಎಗೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ 6ನೇ ಹಂತದ ಪ್ರತಿಭಟನೆಯನ್ನು 9ನೇ ಜಿಲ್ಲೆಯಾದ ಶಿವಮೊಗ್ಗ ಪಟ್ಟಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಮಾಜದವರೇ ಆದ ಬಿ.ಎಸ್. ಯಡಿಯೂರಪ್ಪನವರನ್ನು ಆನಂತರದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ನಮ್ಮ ಸಮಾಜವನ್ನು 2ಎಗೆ ಸೇರ್ಪಡೆಗೊಳಿಸಲು ಮನವಿ ಮಾಡಿ ಪ್ರತಿಭಟನೆ ಮಾಡಿದರೂ ಸಾಧ್ಯವಾಗಲಿಲ್ಲ.

ಕೊನೆಯ ಹಂತದಲ್ಲಿ ಎಲ್ಲಾ ಲಿಂಗಾಯತರನ್ನು ಒಟ್ಟಿಗೆ ಸೇರಿಸಿ 2ಡಿ ಎಂದು ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿದರು. ಅದು ಜಾರಿ ಆಗುವ ಸಮಯಕ್ಕೆ ಚುನಾವಣೆ ಘೋಷಣೆ ಆಗಿದ್ದು ಯಾವ ಪ್ರಯೋಜನವೂ ಆಗಲಿಲ್ಲ.

ಆದಕಾರಣ ಈ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ ಅವರು ಭರವಸೆ ನೀಡಿದಂತೆ ಈಗಲಾದರೂ ನಮ್ಮ ಸಮಾಜವನ್ನು ಎರಡು 2ಎಗೆ ಸೇರಿಸಿ ಎಂದು ಆಗ್ರಹಿಸಿ ಶಿವಮೊಗ್ಗ ಪಟ್ಟಣದಲ್ಲಿ ಇದೇ 14ರಂದು ಶಿವಪ್ಪ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೋಪಿ ವೃತ್ತದಲ್ಲಿ ಇಷ್ಟಲಿಂಗ ಪೂಜೆಯನ್ನು ಮಾಡುವ ಮೂಲಕ ಪ್ರತಿಭಟನೆಯನ್ನು ನಡೆಸಲಾಗುವುದು ಎಂದರು. ಭಗವಂತ ಸಿದ್ದರಾಮಯ್ಯನವರಿಗಾದರೂ ಒಳ್ಳೆಯ ಬುದ್ಧಿಯನ್ನು ಕೊಟ್ಟು ನಮ್ಮ ಸಮಾಜವನ್ನು 2 ಎಗೆ ಸೇರ್ಪಡೆ ಗೊಳಿಸಲಿ ಎಂದು ಕುಟುಕಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿ ಸರ್ಕಾರದ ಕಣ್ಣು ತೆರೆಯಿಸಲು ಸಹಕರಿಸಬೇಕು ಎಂದು ಕೋರಿದರು. ಗೋಷ್ಠಿಯಲ್ಲಿ ಸಮಾಜದ ಮುಖಂಡ ಡಾ.ಲಿಂಗಪ್ಪ ಚಳ್ಳಗೆರೆ, ಡಾ.ಮಾಲತೇಶ್, ರುದ್ರಗೌಡ, ಮಹೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.