ಹಂತಹಂತವಾಗಿ ಖಾಲಿ ಹುದ್ದೆ ಭರ್ತಿ: ಸಚಿವರು

| Published : Jun 22 2024, 12:46 AM IST

ಸಾರಾಂಶ

ಮಾಗಡಿ: ಲೋಕಸಭಾ ಚುನಾವಣೆ ಫಲಿತಾಂಶ ಬೇಸರ ತರುತ್ತಿದೆ ಪ್ರತಿ ಗ್ರಾಮ ಪಂಚಾಯಿತಿಗೂ ಭೇಟಿ ಕೊಡುತ್ತಿದ್ದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಗ್ಯಾರಂಟಿಗಳನ್ನು ಕೊಟ್ಟರೂ ಜನ ಸೋಲಿಸಿದ್ದಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಮಾಗಡಿ: ಲೋಕಸಭಾ ಚುನಾವಣೆ ಫಲಿತಾಂಶ ಬೇಸರ ತರುತ್ತಿದೆ ಪ್ರತಿ ಗ್ರಾಮ ಪಂಚಾಯಿತಿಗೂ ಭೇಟಿ ಕೊಡುತ್ತಿದ್ದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಗ್ಯಾರಂಟಿಗಳನ್ನು ಕೊಟ್ಟರೂ ಜನ ಸೋಲಿಸಿದ್ದಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ವಿವಿಧ ಕಟ್ಟಡ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮಾಗಡಿಗೆ ಎಕ್ಸ್‌ಪ್ರೆಸ್‌ ಕೆನಾಲ್ ಮೂಲಕ ಹೇಮಾವತಿ ಯೋಜನೆ ತರಲು ಹೊರಟಿದ್ದ ಸುರೇಶ್ ಅವರನ್ನೇ ಸೋಲಿಸಿದ್ದಾರೆ. ಗ್ಯಾರಂಟಿಗಳನ್ನು ವಿರೋಧ ಮಾಡುವವರ ಪರ ಜನಗಳು ನಿಲ್ಲುತ್ತಾರೆಂದರೆ ಹೇಗೆ? ವಾರಕ್ಕೆ 5 ದಿನ ಜನಗಳು ಜನರ ಜೊತೆಯಲ್ಲೇ ಇದ್ದವರು ಸುರೇಶ್‌. ಆದರೂ ಮಾಗಡಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆಯಾಗಿದೆ. ಇನ್ನು 4 ವರ್ಷ ಅಧಿಕಾರದಲ್ಲಿರುತ್ತೇವೆ. ಅಭಿವೃದ್ಧಿ ವಿಚಾರಕ್ಕೆ ಮಾತ್ರ ಹೆಚ್ಚಿನ ಒತ್ತು ಕೊಡುತ್ತೇವೆ. ಚುನಾವಣೆಯಲ್ಲಿ ಜನತೆ ಏನು ಬೇಕಾದರೂ ತೀರ್ಪನ್ನು ನೀಡಲಿ ಅದಕ್ಕೆ ನಾವು ತಲೆ ಬಾಗುತ್ತೇವೆ. ಮತ್ತಷ್ಟು ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.

ಹಲವು ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಖಾಲಿಯಿದ್ದ ಹುದ್ದೆಗಳಿಗೆ ಭರ್ತಿ ಮಾಡುವ ಕೆಲಸ ಹಂತಹಂತವಾಗಿ 600ಕ್ಕೂ ಹೆಚ್ಚು ಸಿಬ್ಬಂದಿ ನೇಮಕಾತಿಗೆ ಅನುಮೋದನೆ ನೀಡಲಾಗುತ್ತಿದೆ. ಕಳೆದ 15ರಿಂದ 20 ವರ್ಷಗಳ ಇಲಾಖೆಗಳಲ್ಲಿ ಹುದ್ದಗೆಳ ಭರ್ತಿ ಮಾಡುವ ವಿಚಾರವನ್ನು ನಮ್ಮ ಸರ್ಕಾರ ಬಂದ ಮೇಲೆ ಒತ್ತಡ ತರುತ್ತಿದ್ದಾರೆ. ಹಿಂದಿನ ಸರ್ಕಾರ ಇದ್ದಾಗ ರೈತ ಸಂಘದ ಮುಖಂಡರು ಏನು ಮಾಡಿದ್ದರು? ಈಗ ಬಂದು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸಚಿವರು ರೈತ ಮುಖಂಡರನ್ನು ಪ್ರಶ್ನೆ ಮಾಡಿದರು. ಹಿಂದಿನ ಸರ್ಕಾರಗಳು ಖಾಲಿಯಿರುವ ಹುದ್ದೆಗಳನ್ನು ಏಕೆ ಭರ್ತಿ ಮಾಡಲು ಮುಂದೆ ಬರಲಿಲ್ಲ. ಈಗ 57ರಷ್ಟು ಹುದ್ದೆಗಳು ಭರ್ತಿಯಾಗಬೇಕಿದೆ. ಈಗ ಸಿಬ್ಬಂದಿಗಳ ಕೊರತೆಯಿದೆ ಎಂದು ಹೇಳುತ್ತಿದ್ದಾರೆ ಹಂತ ಹಂತವಾಗಿ ಇಲಾಖೆಗಳಲ್ಲಿ ಹುದ್ದೆಗಳ ಭರ್ತಿ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಅಧಿಕಾರಿಗಳು ಯಾವುದೇ ಸಮಸ್ಯೆಯಿದ್ದರೂ ನೇರವಾಗಿ ನನ್ನ ಬಳಿ ಚರ್ಚೆ ಮಾಡಲಿ ಬಾಲಕೃಷ್ಣರಂತಹ ಶಾಸಕರು ಆಸಕ್ತಿ ಇರುವುದಿಂದಲೇ ಇಂತಹ ಕಾರ್ಯಕ್ರಮಗಳು ನಡೆಯಲು ಸಾಧ್ಯ. ನಾನು ಈ ಹಿಂದೆ ಸಾರಿಗೆ ಸಚಿವರಾಗಿದ್ದಾಗ ಮಾಗಡಿಗೆ ಸರ್ಕಾರಿ ಡಿಪೋ, ಬಸ್ ನಿಲ್ದಾಣ ಮಾಡಿಕೊಟ್ಟಿದ್ದು ಈಗ 60 ಲಕ್ಷ ವೆಚ್ಚದಲ್ಲಿ ಕಸಬಾ ರೈತ ಸಂಪರ್ಕ ಕೇಂದ್ರ, ಸುಸಜ್ಜಿತ ಕಟ್ಟಡ, 4 ಕೋಟಿ ವೆಚ್ಚದಲ್ಲಿ ಹುಲಿಕಟ್ಟೆಯಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದೆ. ಇದು ಒಂದು ತಾಲೂಕಿಗೆ ಸೀಮಿತವಾಗದೆ ಪಕ್ಕದ ಜಿಲ್ಲೆಯವರು ಕೂಡ ಇಲ್ಲಿಗೆ ಬಂದು ತರಬೇತಿ ಪಡೆದುಕೊಳ್ಳಬಹುದು. ಕೃಷಿ ಭಾಗ್ಯ, ಕೃಷಿ ಪ್ರಾಧಿಕಾರ ಸೇರಿದಂತೆ ಇನ್ನು ಅನೇಕ ಯೋಜನೆಗಳನ್ನು ಮುಂದುವರಿಸಲಾಗುತ್ತಿದ್ದು ರೈತರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.

ಶಾಸಕ ಬಾಲಕೃಷ್ಣ ಮಾತನಾಡಿ, ಚಲುವರಾಯಸ್ವಾಮಿ ಅವರು ಈ ಹಿಂದೆ ಸಚಿವರಾಗಿ ನಮ್ಮ ಕ್ಷೇತ್ರಕ್ಕೆ ಬಂದಾಗ ಸರ್ಕಾರಿ ಡಿಪೋ, ಬಸ್ ನಿಲ್ದಾಣ ಮಾಡಿಸಿಕೊಟ್ಟರು. ಈಗ ಕೃಷಿ ಇಲಾಖೆ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು 2.50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದೆ. ನನ್ನ ತವರೂರಾದ ಹುಲಿಕಟ್ಟೆಯಲ್ಲಿ ಕೃಷಿ ಇಲಾಖೆಗೆ 5 ಎಕರೆ ಜಾಗವನ್ನು ಹಸ್ತಾಂತರ ಮಾಡಿದ್ದು 5 ಕೋಟಿ ವೆಚ್ಚದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಆರಂಭಿಸಲಾಗುವುದು. ನನ್ನ ಕ್ಷೇತ್ರಕ್ಕೆ ಈ ಯೋಜನೆ ನೀಡಿದ ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೃಷಿ ಇಲಾಖೆಯ ಅಧಿಕಾರಿಗಳು ತಮಗೆ ಅಗತ್ಯವಾಗಿ ಬೇಕಾದ ಸೌಲಭ್ಯಗಳ ಬಗ್ಗೆ ಪಟ್ಟಿ ನೀಡಿದರೆ ಸಚಿವರ ಜೊತೆ ಚರ್ಚಿಸಿ ಅನುಕೂಲತೆ ಮಾಡಿಕೊಡಲಾಗುತ್ತದೆ. ಗೋಡೋನ್ ಸೇರಿದಂತೆ ಕೃಷಿಗೆ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳನ್ನು ತಾಲೂಕಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶರತ್ ಕುಮಾರ್, ಇಒ ಚಂದ್ರು, ಕೃಷಿ ಸಹಾಯಕ ನಿರ್ದೇಶಕ ವಿಜಯ ಸವಣೂರು ಇತರ ಮುಖಂಡರು ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಷನ್‌)

ಮಾಗಡಿಯ ಕೃಷಿ ಇಲಾಖೆ ಆವರಣದಲ್ಲಿ ವಿವಿಧ ಕಟ್ಟಡ ಕಾಮಗಾರಿಗಳಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು.