ಸಾರಾಂಶ
ಬೆಂಗಳೂರು : ಕನ್ನಡದ ಬೆಳವಣಿಗೆಯಲ್ಲಿ ಪರಿಚಾರಿಕೆಯ ಕೆಲಸವನ್ನು ತನು, ಮನ, ಧನ ವ್ಯಯಿಸಿ ತ್ರಿಕರಣ ಶುದ್ಧಿ, ನಿರ್ಮಲ ಮನಸ್ಸಿನಿಂದ ಮಾಡಬೇಕು ಎಂದು ವಿದ್ವಾಂಸ ಡಾ। ಹಂ.ಪ.ನಾಗರಾಜಯ್ಯ ಅಭಿಪ್ರಾಯಪಟ್ಟರು.
ನಗರದ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ಡಾ। ಸಿಸಿರಾ ಸ್ನೇಹ ಬಳಗ ಆಯೋಜಿಸಿದ್ದ ಸಿಸಿರಾ ಅವರ 51ರ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರಳ ಸಜ್ಜನಿಕೆಯ ಸುಸಂಸ್ಕೃತ ಡಾ। ರಾಮಲಿಂಗೇಶ್ವರ ಅವರು (ಸಿಸಿರಾ) ಕಾವ್ಯನಾಮದಲ್ಲಿ ಕಳೆದ 26 ವರ್ಷಗಳಿಂದ ಕನ್ನಡ ನಾಡು ನುಡಿ, ಸಾಹಿತ್ಯ ಸಂಸ್ಕೃತಿ ಸಂಘಟನೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಪರರ ಕಾರ್ಯಕ್ರಮವನ್ನೂ ತನ್ನ ಕಾರ್ಯಕ್ರಮ ಎಂದು ತಿಳಿದು ಪರೋಪಕಾರ ಮನೋಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ. 1996 ರಿಂದಲೂ ಬಲ್ಲವನಾಗಿದ್ದು , ಚಿಕ್ಕ ವಯಸ್ಸಿನಲ್ಲೇ ಮುಂದೆ ದೊಡ್ಡವನಾಗಿ ಕನ್ನಡ ಸೇವಕನಾಗುವ ಭವಿಷ್ಯವನ್ನು ನೋಡಿದ್ದೆ ಎಂದರು.
ಸಿಸಿರಾ ಅವರ ಬದುಕು ಬರಹ ಕೃತಿ ‘ಕನ್ನಡ ಮಾಣಿಕ್ಯ’ ಗ್ರಂಥ ಜನಾರ್ಪಣೆ ಮಾಡಿ ಮಾತನಾಡಿದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ। ವೂಡೇ ಪಿ. ಕೃಷ್ಣ, ಸಿಸಿರಾ ಅವರು ಕನ್ನಡ ಸಾಹಿತ್ಯ ಸೇವೆಯನ್ನು ತಮ್ಮ ಮೈಮೇಲೆ ಎಳೆದುಕೊಂಡು ಮೈಮನಸ್ಸಿನೊಳಗೆ ತುಂಬಿಕೊಂಡು ಮಾಡುತ್ತಿದ್ದಾರೆ. ಶೇಷಾದ್ರಿಪುರಂ ಕಾಲೇಜಿನ ಕನ್ನಡ ಮೇಷ್ಟ್ರಾಗಿ ಕಾಲೇಜಿಗೆ, ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಮಾಡುತ್ತಾ ಗೌರವ ಸಂಪಾದಿಸಿದ್ದಾರೆ.
ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಮನು ಬಳಿಗಾರ್ ಅವರು, ಸಿಸಿರಾ ರಾಮಲಿಂಗೇಶ್ವರ ಅವರ ಕನ್ನಡದ ಬಗೆಗಿನ ಕರ್ತವ್ಯ ನಿಷ್ಠೆಯನ್ನು ಗಮನಿಸಿ ನೃಪತುಂಗ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್.ಬೈರಪ್ಪ ಅವರ ಜೊತೆ ಜೊತೆಗೆ ಮಯೂರ ವರ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಮಂಗಲಿ ಸೇವಾಶ್ರಮದ ಅಧ್ಯಕ್ಷರಾದ ಡಾ.ಎಸ್.ಜಿ.ಸುಶೀಲಮ್ಮ ವಹಿಸಿದ್ದರು. ನಿವೃತ್ತ ತಹಸೀಲ್ದಾರ್ ಕೆ.ಎಂ.ರೇವಣ್ಣ, ಕವಯಿತ್ರಿ ಜಯಶ್ರೀ ರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.