ಹೊಸಪೇಟೆ: ರಾಜ್ಯದ ತಳಸಮುದಾಯಗಳ, ಶೋಷಿತ ವರ್ಗಗಳ, ಜನಸಾಮಾನ್ಯರ ಆಚರಣೆಗಳನ್ನು ಮುಂಚೂಣಿಗೆ ತಂದು, ನಮ್ಮ ಸಾಂಸ್ಕೃತಿಕ ಬೇರುಗಳ ಹುಡುಕಿಕೊಡುವ ಮೂಲಕ ಚಳವಳಿಗಳಿಗೆ ಸಾಂಸ್ಕೃತಿಕ ಬುನಾದಿ ಹಾಕಿಕೊಟ್ಟ ದಾರ್ಶನಿಕ ಸಂಶೋಧಕ ಎಸ್.ಎಸ್. ಹಿರೇಮಠರು ಎಂದು ಸಾಹಿತಿ ರಹಮತ್ ತರೀಕೆರೆ ಹೇಳಿದರು.
ಇಲ್ಲಿನ ವಿಜಯನಗರ ಕಾಲೇಜು ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ವಿಜಯನಗರ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಸ್.ಎಸ್.ಹಿರೇಮಠ ಅವರ ಸಮಗ್ರ ಸಾಹಿತ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದಲಿತ ಮತ್ತು ಕೆಳಜಾತಿಗಳಲ್ಲಿ ಇರುವ ನಂಬಿಕೆ, ಆಚರಣೆಗಳು ನಗರೀಕರಣದಿಂದ ನಾಶವಾಗುತ್ತಿರುವ ಈ ಸಂದರ್ಭದಲ್ಲಿ ಎಸ್.ಎಸ್. ಹಿರೇಮಠರು ಹಟ್ಟಿ ಹಬ್ಬ ಹಾಗೂ ಜಾತ್ರೆಗಳೊಳಗಿರುವ ಜೀವಪರ ದರ್ಶನವನ್ನು ಬರಹ ರೂಪದಲ್ಲಿ ನೀಡಿದ್ದಾರೆ ಎಂದರು.
ಮಾರ್ಕ್ಸ್, ಶಂಭಾ ಜೋಶಿ ಪ್ರಭಾವ:ಎಸ್.ಎಸ್. ಹಿರೇಮಠರು ಒಬ್ಬ ದೃಢ ಮಾರ್ಕ್ಸ್ ವಾದಿ.. ಕಾರ್ಲ್ ಮಾರ್ಕ್ಸ್, ಲೆನಿನ್ ಹಾಗೂ ಮುಖ್ಯವಾಗಿ ಬಂಗಾಳದ ವಿದ್ವಾಂಸರಾದ ದೇವಿಪ್ರಸಾದ್ ಚಟ್ಟೋಪಾಧ್ಯಾಯ, ಕೋಸಾಂಬಿ, ರೊಮಿಲಾ ಥಾಪರ್ ಅವರ ಆಲೋಚನಾ ಕ್ರಮ ಇವರ ಮೇಲಿತ್ತು. ಅದರ ಜೊತೆಗೆ ಶಂಭಾ ಜೋಶಿಯವರ ಆರಂಭದ ಹಂತದ ಸಂಶೋಧನಾ ಪ್ರಶ್ನೆಗಳನ್ನು ಇಟ್ಟುಕೊಂಡು, ಅದಕ್ಕೆ ದೃಢವಾದ ಉತ್ತರಾಧಿಕಾರಿಯಾಗಿ ಮಾರ್ಕ್ಸ್ ವಾದಿ ಪರಿಭಾಷೆಯಲ್ಲಿ ಮುಂದುವರಿಸಿದವರು ಎಸ್.ಎಸ್. ಹಿರೇಮಠರು. ಅವರು ಜಾಗತಿಕ ಫಿಲಾಸಫಿಗಳನ್ನು ಸ್ಥಳೀಯ ಬದುಕಿನೊಂದಿಗೆ ಜೋಡಿಸುವ ಅಪೂರ್ವ ಶಕ್ತಿ ಹೊಂದಿದ್ದರು ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾತನಾಡಿ, ಎಸ್.ಎಸ್. ಹಿರೇಮಠರು ತಮ್ಮ ಬದುಕು ಮತ್ತು ಬರಹದಲ್ಲಿ ನಿಷ್ಟುರವಾದಿ, ಲೋಕವಿರೋಧಿ ಹಾಗೂ ಸತ್ಯವಾದಿ ಮಹಾನ್ ಚಿಂತನೆಯ ಪ್ರವಾದಿ ಎಂಬ ನಾಣ್ಣುಡಿಯನ್ನು ನಿಜವಾಗಿಸಿದವರು. ಹೊಸ ಇತಿಹಾಸದ ಸೃಷ್ಟಿಗಾಗಿ ನಾವು ನಿಜವಾದ ಇತಿಹಾಸಕ್ಕೆ ಮರಳಬೇಕಾಗಿದೆ. ಜನತೆಯ ಸಾಂಸ್ಕೃತಿಕ ಇತಿಹಾಸ ಬರೆಯಬೇಕಾದರೆ ನಾವು ಜನರ ಮಧ್ಯೆ ಮತ್ತೆ ಹೋಗಬೇಕಾಗುತ್ತದೆ ಎಂಬುದರಲ್ಲಿ ನಂಬಿಕೆಯಿಟ್ಟವರು. ಬದುಕನ್ನು ಬದುಕುವುದನ್ನು ಬಿಟ್ಟು ಅದನ್ನು ಕೆದಕುತ್ತಾ ಹೋಗುವ ಇಂದಿನ ಕಾಲದಲ್ಲಿ, ಬದುಕು ಒಂದು ಕಲೆ; ಅದನ್ನು ಹೇಗೆ ಬದುಕಬೇಕು ಎಂಬುದನ್ನು ತಮ್ಮ ಬರಹಗಳ ಮೂಲಕ ಕಲಿಸಿಕೊಟ್ಟ ಧೀಮಂತ ಚಿಂತಕ ಎಸ್.ಎಸ್. ಹಿರೇಮಠರು ಎಂದು ಹೇಳಿದರು.
ಮಣಿಪಾಲ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೆ.ಫಣಿರಾಜ್, ವಿಜಯನಗರ ಮಹಾವಿದ್ಯಾಲಯ ಅಧ್ಯಕ್ಷ ಮಲ್ಲಿಕಾರ್ಜುನ ಎನ್. ಮೆಟ್ರಿ, ಬರಹಗಾರ ಹಾಗೂ ಸಾಮಾಜಿಕ ಹೋರಾಟಗಾರ ಪೀರ್‌ಬಾಷಾ, ಎಸ್.ಎಸ್.ಹಿರೇಮಠರ ಧರ್ಮಪತ್ನಿ ಯೋಗಿತಾ ಎಸ್.ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಹಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ ಸೇರಿದಂತೆ ಸಾಹಿತಿಗಳು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಚಿಂತಕರು ಸಭೆಯಲ್ಲಿ ಉಪಸ್ಥಿತರಿದ್ದರು.