ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರಿಗೆ ಕಲೆಯ ಬಗ್ಗೆ ಅಪಾರ ಆಸಕ್ತಿ ಇತ್ತು. ತತ್ವಪದಗಾರರಿಂದ ಸಾಕಷ್ಟು ಹಾಡುಗಳನ್ನು ಕೇಳುತ್ತಿದ್ದರು, ಅವರಿಗೆ ಆಸರೆಯಾಗಿ ನಿಲ್ಲುತ್ತಿದ್ದರು, ನಮ್ಮ ಕುಟುಂಬಸ್ಥರು ತತ್ವಪದಗಾರರನ್ನು ಮನೆಗೆ ಕರೆಸಿ, ಹಾಡಿಸುತ್ತಿದ್ದರು, ಇತ್ತೀಚಿನ ದಿನಗಳಲ್ಲಿ ತತ್ವಪದಗೀತೆಗಳು ಮರೆಯಾಗುತ್ತಿದ್ದು, ಅವುಗಳಿಗೆ ಮತ್ತೆ ಜೀವ ತುಂಬುವ ಕೆಲಸ ಆಗಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡದ ತತ್ವಪದಗಳು ಆಧ್ಯಾತ್ಮಿಕ ಚಿಂತನೆಯ ಮಹೋನ್ನತ ಸಾಹಿತ್ಯ ಪ್ರಾಕಾರ, ಹಿರಿಯ ನೊಂದ ಮನಸ್ಸುಗಳಿಂದ ತತ್ವಪದಗಳು ಹುಟ್ಟಿಕೊಂಡಿವೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.ನಗರದಲ್ಲಿರುವ ಸೇವಾಕಿರಣ ವೃದ್ಧಾಶ್ರಮದ ಸಭಾಂಗಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ತತ್ವಪದ ಗಾಯನ-ವಯೋವೃದ್ಧರಿಗೆ ಪೌಷ್ಟಿಕಾಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾನಪದ ಸಾಹಿತ್ಯದ ಪ್ರಕಾರಗಳಲ್ಲಿ ತತ್ವಪದವು ಒಂದು, ವಚನ ಸಾಹಿತ್ಯದಂತೆ ತತ್ವಪದಗಳನ್ನು ಸ್ವರ-ಲಯವಾಗಿ ಹಾಡುವ ಸದ್ಭಕ್ತಗುರು ಗಾಯಕರು ನಮ್ಮ ನಡುವೆ ಇದ್ದಾರೆ ಎಂದು ನುಡಿದರು.ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರಿಗೆ ಕಲೆಯ ಬಗ್ಗೆ ಅಪಾರ ಆಸಕ್ತಿ ಇತ್ತು. ತತ್ವಪದಗಾರರಿಂದ ಸಾಕಷ್ಟು ಹಾಡುಗಳನ್ನು ಕೇಳುತ್ತಿದ್ದರು, ಅವರಿಗೆ ಆಸರೆಯಾಗಿ ನಿಲ್ಲುತ್ತಿದ್ದರು, ನಮ್ಮ ಕುಟುಂಬಸ್ಥರು ತತ್ವಪದಗಾರರನ್ನು ಮನೆಗೆ ಕರೆಸಿ, ಹಾಡಿಸುತ್ತಿದ್ದರು, ಇತ್ತೀಚಿನ ದಿನಗಳಲ್ಲಿ ತತ್ವಪದಗೀತೆಗಳು ಮರೆಯಾಗುತ್ತಿದ್ದು, ಅವುಗಳಿಗೆ ಮತ್ತೆ ಜೀವ ತುಂಬುವ ಕೆಲಸ ಆಗಬೇಕು ಎಂದರು.
ನೆಹರು ಯುವ ಕೇಂದ್ರದ ನಿವೃತ್ತ ಅಧಿಕಾರಿ ಎಚ್.ಎಂ.ಬಸವರಾಜು ಮಾತನಾಡಿ, ಕನ್ನಡ ಸಾಹಿತ್ಯದ ಅತ್ಯಂತ ಶ್ರೀಮಂತ ಹಾಗೂ ಲೋಕಜ್ಞಾನದ ಗಣಿಯಾಗಿರುವ ‘ತತ್ವಪದಗಳು’ ಮತ್ತು ಅವುಗಳ ಸಾಮಾಜಿಕ ಮಹತ್ವದ ಅರಿವನ್ನು ಇಂದಿನ ಯುವಪೀಳಿಗೆ ಬೆಳೆಸಬೇಕಿದೆ ಎಂದು ನುಡಿದರು.ಜಟಿಲವಾದ ವೇದಾಂತ ಮತ್ತು ಆಧ್ಯಾತ್ಮದ ಸತ್ಯಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಹಾಡಿನ ರೂಪದಲ್ಲಿ ಕಟ್ಟಿಕೊಟ್ಟಿರುವುದೇ ತತ್ವಪದ ಎಂದು ತಿಳಿಸಿದರು.
ವೈದ್ಯ ಡಾ.ಎಚ್.ಸಿ.ಆನಂದ್ ಮಾತನಾಡಿ, ಸಂಸ್ಕೃತದ ಕ್ಲಿಷ್ಟ ಪದಗಳನ್ನು ಬಳಸದೇ, ಹಳ್ಳಿಗರ ಆಡುಭಾಷೆಯಲ್ಲಿ ಬದುಕಿನ ಪರಮ ಸತ್ಯವನ್ನು ತತ್ವಪದಗಳು ದಾಟಿಸುತ್ತವೆ. ಶರೀರವೇ ದೇಗುಲ ಎನ್ನುವ ಸಂದೇಶವಿದೆ, ಮಾನವನ ದೇಹವನ್ನೇ ಮುಖ್ಯ ನೆಲೆಯಾಗಿಟ್ಟುಕೊಂಡು, ಶರೀರದ ಒಳಗಿನ ಆಧ್ಯಾತ್ಮಿಕ ಅರಿವನ್ನು ಜಾಗೃತಗೊಳಿಸುವುದು ಇದರ ಮುಖ್ಯ ಆಶಯ ಎಂದು ತಿಳಿಸಿದರು.ಕುಂಬಾರನ ಚಕ್ರ, ನೂಲುವ ರಾಟೆ, ಅಕ್ಕಿ ಕುಟ್ಟುವ ಒನಕೆ ಮುಂತಾದ ದೈನಂದಿನ ಜೀವನದ ವಸ್ತುಗಳನ್ನೇ ರೂಪಕಗಳಾಗಿ ಬಳಸಿ ಬದುಕಿನ ನಶ್ವರತೆಯನ್ನು ಇವು ವಿವರಿಸುತ್ತವೆ. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಸಂತರು ಸಂತೆಯಲ್ಲೇ ನಿಂತು ಸತ್ಯವನ್ನು ಸಾರಿದರು ಎಂದರು.
ಇದೇ ಸಂದರ್ಭದಲ್ಲಿ ಶಿವಾನಂದ ಕೀಲಾರ ತಂಡದವರು ತತ್ವಪದಗಳನ್ನು ಹಾಡಿ ರಂಜಿಸಿದರು. ವಯೋವೃದ್ದರಿಗೆ ಪೌಷ್ಟಿಕಾಹಾರ ಮತ್ತು ಹಣ್ಣ-ಹಂಪಲು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಪೋತೇರ ಮಹದೇವು, ನಿವೃತ್ತ ಶಿಕ್ಷಕ ಎ.ನಾಗರಾಜು, ಹುಲಿವಾನ ಎ.ಶಿವಣ್ಣ, ಜಾನಪದ ಸಾಹಿತಿ ಕೆ.ಪಿ.ವೀರಪ್ಪ ಕೀಲಾರ, ಕಸಿವೇ ರಾಜ್ಯ ಕಾರ್ಯದರ್ಶಿ ಸಿ.ಜೆ. ಸುಜಾತಕೃಷ್ಣ, ಸಾಹಿತಿ ವಸಂತ ನಾಗಲಿಂಗೇಗೌಡ, ಸಮಾಜ ಸೇವಕಿ ಎಚ್.ಜೆ.ಲೀಲಾವತಿ, ಆಶ್ರಮದ ಮೇಲ್ವಿಚಾರಕ ರಾಜಣ್ಣ ಮತ್ತಿತರರಿದ್ದರು.