ಕಳೆದ 2024ರಲ್ಲಿ ಕಾಣೆಯಾಗಿದ್ದ ಮೊಬೈಲ್ ಅನ್ನು ಸಹೋದ್ಯೋಗಿ ಮಹಿಳಾ ಪೇದೆ ಕಳುವು ಮಾಡಿದ್ದಾಗಿ 2026ರಲ್ಲಿ ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿದ ಪೊಲೀಸ್ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ದೂರು ದಾಖಲಿಸಿದ ಪೇದೆ ವಿರುದ್ಧವೆ ಇಲಾಖಾ ವಿಚಾರಣೆ ನಡೆಸುವುದಾಗಿ ಎಚ್ಚರಿಸಿದೆ.
ವೆಂಕಟೇಶ್ ಕಲಿಪಿ
ಕನ್ನಡಪ್ರಭ ವಾರ್ತೆ ಬೆಂಗಳೂರುಕಳೆದ 2024ರಲ್ಲಿ ಕಾಣೆಯಾಗಿದ್ದ ಮೊಬೈಲ್ ಅನ್ನು ಸಹೋದ್ಯೋಗಿ ಮಹಿಳಾ ಪೇದೆ ಕಳುವು ಮಾಡಿದ್ದಾಗಿ 2026ರಲ್ಲಿ ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿದ ಪೊಲೀಸ್ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ದೂರು ದಾಖಲಿಸಿದ ಪೇದೆ ವಿರುದ್ಧವೆ ಇಲಾಖಾ ವಿಚಾರಣೆ ನಡೆಸುವುದಾಗಿ ಎಚ್ಚರಿಸಿದೆ.
ಅಲ್ಲದೆ, 2 ವರ್ಷದ ಹಿಂದೆ ಸಹೋದ್ಯೋಗಿಯ ಮೊಬೈಲ್ ಕಳ್ಳತನದ ಆರೋಪ ಎದುರಿಸುತ್ತಿರುವ ಮಹಿಳಾ ಪೊಲೀಸ್ ಪೇದೆ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿದೆ. ಜೊತೆಗೆ ಅವರ ಅಮಾನತು ಆದೇಶ ಒಂದು ನಿಮಿಷವೂ ಮುಂದುವರಿಯಬಾರದು. ಅಮಾನತು ಹಿಂಪಡೆಯಲು ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ತಾಕೀತು ಮಾಡಿದೆ. ಮೊಬೈಲ್ ಕಳವು ಆರೋಪ ಸಂಬಂಧ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ತುಮಕೂರು ಮಹಿಳಾ ಪೊಲೀಸ್ ಠಾಣೆ ಪೇದೆ ಸಿ.ಟಿ. ನಂದಿನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.ದೂರುದಾರೆ ತುಮಕೂರಿನ ನ್ಯೂ ಎಕ್ಸ್‌ಟೆನ್ಷನ್ ಠಾಣೆಯ ಮಹಿಳಾ ಪೊಲೀಸ್ ಪೇದೆ ಟಿ.ಪಿ. ರೇಖಾಂಜಲಿ. ತನ್ನ ಫೋನ್ ಕದ್ದಿರುವ ಆರೋಪವನ್ನು ಅರ್ಜಿದಾರೆ ಮೇಲೆ ಹೊರಿಸಿದ್ದಾರೆ. 2 ವರ್ಷಗಳಿಂದೆ ಫೋನ್ ಕಾಣೆಯಾಗಿದ್ದು, ದೂರುದಾರೆ ಬಹಳ ತಡವಾಗಿ ಎಚ್ಚೆತ್ತುಕೊಂಡು ನೀಡಿದ ದೂರಿನ ಬಗ್ಗೆ ಪೊಲೀಸ್ ವ್ಯವಸ್ಥೆ ತನಿಖೆ ನಡೆಸುತ್ತಿರುವುದು ಆಘಾತಕಾರಿಯಾಗಿದೆ. ಇಂತಹ ನಿಷ್ಪ್ರಯೋಜಕ ದೂರುಗಳು ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಅಡಚಣೆಯಾಗಿದೆ. ಇಂತಹ ಪ್ರಕರಣಗಳ ವಿಚಾರಣೆಯಿಂದ ನೈಜ ಪ್ರಕರಣಗಳ ಇತ್ಯರ್ಥಕ್ಕೆ ಬಳಸಬೇಕಾದ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಹಾಗಾಗಿ, ಅರ್ಜಿದಾರರೆಯ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ದೂರು ದಾಖಲಿಸಿರುವ ತುಮಕೂರು ಮಹಿಳಾ ಪೊಲೀಸ್ ಠಾಣಾಧಿಕಾರಿ ಹಾಗೂ ದೂರುದಾರೆಗೆ ನೋಟಿಸ್ ಜಾರಿಗೊಳಿಸಿ ಸೆ.3ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅಂದು ದೂರುದಾರೆ ವಿರುದ್ಧವೇ ಪ್ರಕರಣ ದಾಖಲಿಸಲು ಆದೇಶ ಮಾಡೋಣ. ದೂರುದಾರೆಗೆ ಠಾಣಾಧಿಕಾರಿಗೆ ಪರಿಚಯ ಇರಬೇಕು. ಅದಕ್ಕೆ ಎಫ್‌ಐಆರ್ ದಾಖಲಾಗಿದೆ. ಅವರು ನನ್ನ ಕೈಗೆ ಸಿಗಲಿ ಸೂಕ್ತ ಆದೇಶ ಹೊರಡಿಸುತ್ತೇನೆ ಎಂದು ಸರ್ಕಾರಿ ಅಭಿಯೋಜಕರನ್ನು ಉದ್ದೇಶಿಸಿ ನ್ಯಾಯಮೂರ್ತಿಗಳು ತೀಕ್ಷ್ಣವಾಗಿ ನುಡಿದರು.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಮಹಿಳಾ ಪೊಲೀಸ್ ಪೇದೆಯಾಗಿದ್ದಾರೆ. ಮೊಬೈಲ್ ಕದ್ದ ಆರೋಪ ಅವರ ಮೇಲಿದೆ. ಅದೂ 2024ರ ಡಿ.12ರಂದು ಕಳ್ಳತನವಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಆದರೆ 2026ರ ಜು.22ರಂದು ದೂರು ದಾಖಲಿಸಲಾಗಿದೆ. ದೂರುದಾರೆ ಸಹ ಪೇದೆಯಾಗಿದ್ದಾರೆ. ಅವರು ಮೊಬೈಲ್ ಕಳವು ಬಗ್ಗೆ ಇಲಾಖಾ ವಿಚಾರಣೆಗೆ ಕೋರಿದರೆ, ಪೊಲೀಸರು ಮಾತ್ರ ಅರ್ಜಿದಾರರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ವಿಚಾರಣೆಗೆ ಹಾಜರಾಗಲು ಸೂಚಿಸಿ ಪೊಲೀಸರು ಅರ್ಜಿದಾರಿಗೆ ಒಂದು ದಿನ ಮುನ್ನ ನೋಟಿಸ್ ನೀಡಿದ್ದಾರೆ. ಸೇವೆಯಿಂದ ಅಮಾನತು ಸಹ ಮಾಡಲಾಗಿದೆ ಎಂದು ವಿವರಿಸಿದರು.
ಆಗ ಪ್ರತಿಕ್ರಿಯಿಸಿದ ಪೀಠ, ಪೊಲೀಸರ ಮುಂದೆ ಪೊಲೀಸರೇ ಹಾಜರಾಗಬೇಕಿದೆ. ಹಸುಗಳು ಕಾಣೆಯಾದ ಬಗ್ಗೆ 2 ವರ್ಷ ನಂತರ ದೂರು ದಾಖಲಾಗಿತ್ತು. ಆ ದೂರು ಆಧರಿಸಿ ಇಡೀ ಪೊಲೀಸ್ ವ್ಯವಸ್ಥೆಯೇ ಹಸುಗಳ ಹಿಂದೆ ಬಿದ್ದು, ಅವುಗಳ ಪತ್ತೆಗೆ ಮುಂದಾಗಿತ್ತು. ಇದು ಸಹ ಅದೇ ಮಾದರಿಯ ಪ್ರಕರಣ. ಫೋನ್ ಕಾಣೆಯಾದ ಬಗ್ಗೆ 2 ವರ್ಷ ನಂತರ ದೂರುದಾರೆಗೆ ದಿಢೀರ್ ನೆನಪಾಗಿ ದೂರು ನೀಡಿದ್ದಾರೆ. ಠಾಣೆಯ ಪೊಲೀಸರೆಲ್ಲರೂ ಮೊಬೈಲ್ ಪತ್ತೆಗೆ ಮುಂದಾಗಿದ್ದಾರೆ ಎಂದು ವ್ಯಂಗ್ಯವಾಗಿ ನುಡಿಯಿತು. ಅಂತಿಮವಾಗಿ, ಅರ್ಜಿದಾರೆ ಮತ್ತು ದೂರುದಾರೆ ಮಧ್ಯೆ ಬೇರೆ ಏನೋ ದ್ವೇಷ ಇರಬೇಕು. ಇರಲಿ.. ಮುಂದಿನ ವಿಚಾರಣೆ ವೇಳೆ ದೂರುದಾರೆ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶ ಮಾಡೋಣ ಎಂದು ನ್ಯಾಯಪೀಠ ನುಡಿಯಿತು.