ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿರುವ ಛಾಯಾ ವಸ್ತು ಪ್ರದರ್ಶನ ಉತ್ತರ ಕರ್ನಾಟಕ ಭಾಗದ ಛಾಯಾಗ್ರಾಹಕರಿಗೆ ಹೊಸ ಬಗೆಯ ಕ್ಯಾಮೆರಾ, ಸಾಫ್ಟ್‌ವೇರ್‌ ಹಾಗೂ ಡಿಜಿಟಲ್ ಆಲ್ಬಮ್‌ ನೋಡಲು ಮತ್ತು ಖರೀದಿಸಲು ಅನುಕೂಲವಾಗುತ್ತಿದೆ.

ಹುಬ್ಬಳ್ಳಿ:

ಛಾಯಾಚಿತ್ರ ಕ್ಷೇತ್ರದಲ್ಲಿ ಕಾಲಮಾನಕ್ಕೆ ತಕ್ಕಂತೆ ತಂತ್ರಜ್ಞಾನ ನಿರಂತರವಾಗಿ ಬದಲಾಗುತ್ತಿದೆ. ಎಲ್ಲ ಛಾಯಾಗ್ರಾಹಕರು ಈ ಬದಲಾವಣೆಗಳಿಗೆ ಹೊಂದಿಕೊಂಡು ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕಿದೆ ಎಂದು ನೈಋತ್ಯ ರೈಲ್ವೆಯ ಮಹಾಪ್ರಬಂಧಕ ಮುಕುಲ್ ಸರನ್ ಮಾಥುರ್ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ವಾಸವಿ ಮಹಲ್‌ನಲ್ಲಿ ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋ ಗ್ರಾಫರ್ಸ್‌ ಸಂಘದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಉತ್ತರ ಕರ್ನಾಟಕ ಮಟ್ಟದ ಡಿಜಿ ಫೋಟೋ ಎಕ್ಸ್‌ಪೋ, ಛಾಯಾ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿ.ಎ.ಕೆ. ಫೌಂಡೇಶನ್‌ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಕಾಟವೆ ಮಾತನಾಡಿ, ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿರುವ ಛಾಯಾ ವಸ್ತು ಪ್ರದರ್ಶನ ಉತ್ತರ ಕರ್ನಾಟಕ ಭಾಗದ ಛಾಯಾಗ್ರಾಹಕರಿಗೆ ಹೊಸ ಬಗೆಯ ಕ್ಯಾಮೆರಾ, ಸಾಫ್ಟ್‌ವೇರ್‌ ಹಾಗೂ ಡಿಜಿಟಲ್ ಆಲ್ಬಮ್‌ ನೋಡಲು ಮತ್ತು ಖರೀದಿಸಲು ಅನುಕೂಲವಾಗುತ್ತಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರ ಹಾಗೂ ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಕಿರಣ್ ಬಾಕಳೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಒಟ್ಟು 12 ಹಿರಿಯ ಛಾಯಾಗ್ರಾಹಕರಿಗೆ “ಉತ್ತರ ಕರ್ನಾಟಕ ಛಾಯಾ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಹುಬ್ಬಳ್ಳಿ ಸಂಘದ ಉಪಾಧ್ಯಕ್ಷ ದಿನೇಶ್ ದಾಬಡೆ, ಕಾರ್ಯದರ್ಶಿ ರವೀಂದ್ರ ಕಾಟಿಗರ, ಖಜಾಂಚಿ ಅನಿಲ್ ತುರುಮರಿ, ಧಾರವಾಡ ಸಂಘದ ಅಧ್ಯಕ್ಷ ಅನಿಲ್ ಕಲಾಲ, ರಾಕೇಶ ಪವಾರ, ವಿನಾಯಕ ಸಪಾರೆ, ಆನಂದ ರಾಜಳ್ಳಿ, ಪ್ರವೀಣ್ ಹಣಗಿ, ಅಲ್ಲಾಭಕ್ಷ ಅದೋನಿ, ವಜೀರ್ ಅಹ್ಮದ್, ವಿಜಯ ಮೆಹರವಾಡೆ ಸೇರಿ ಹಲವರಿದ್ದರು.