ಛಾಯಾಗ್ರಾಹಕರು ಸಮಾಜದ ಅವಿಭಾಜ್ಯ ಅಂಗ

| Published : Aug 30 2024, 02:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಪರಂಪರೆ, ವಿಶ್ವದ ಐತಿಹಾಸಿಕ ಕ್ಷಣಗಳ ಇತಿಹಾಸ, ತಲೆ ಮಾರುಗಳ ದಾಖಲೀಕರಣವನ್ನು ಕ್ಯಾಮರಾಗಳ ಮುಖಾಂತರ ಸೆರೆ ಹಿಡಿದು ಜಗತ್ತಿಗೆ ತೋರಿಸುವಲ್ಲಿ ಸಾಕ್ಷಿಯಾಗಿಸಿದ್ದಾರೆ. ಅಂಥ ಛಾಯಾಗ್ರಾಹಕರನ್ನು ಸಮಾಜದ ಅವಿಭಾಜ್ಯ ಅಂಗ ಎನ್ನುಬಹುದು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರಪರಂಪರೆ, ವಿಶ್ವದ ಐತಿಹಾಸಿಕ ಕ್ಷಣಗಳ ಇತಿಹಾಸ, ತಲೆ ಮಾರುಗಳ ದಾಖಲೀಕರಣವನ್ನು ಕ್ಯಾಮರಾಗಳ ಮುಖಾಂತರ ಸೆರೆ ಹಿಡಿದು ಜಗತ್ತಿಗೆ ತೋರಿಸುವಲ್ಲಿ ಸಾಕ್ಷಿಯಾಗಿಸಿದ್ದಾರೆ. ಅಂಥ ಛಾಯಾಗ್ರಾಹಕರನ್ನು ಸಮಾಜದ ಅವಿಭಾಜ್ಯ ಅಂಗ ಎನ್ನುಬಹುದು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ನಗರದದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಹಾಗೂ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಸಹಯೋಗದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ನಡೆದ ಛಾಯಾಗ್ರಹಣ ಕ್ಷೇತ್ರದ ಹಿರಿಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಛಾಯಾಗ್ರಾಹಕರೆಲ್ಲ ಸಾಂಸ್ಕೃತಿಕ ರಾಯಭಾರಿಗಳೆಂದರೆ ತಪ್ಪಲ್ಲ. ಈ ಪ್ರರ್ದಶನದಲ್ಲಿ ಹಲವಾರು ವಿಭಿನ್ನ ವಿಷಯಗಳ ಅದ್ಬುತ ದೃಶ್ಯಕಾವ್ಯವನ್ನು ಛಾಯಾಗ್ರಾಹಕರು ಸೆರೆಹಿಡಿದಿದ್ದಾರೆ. ಸರ್ಕಾರ ಛಾಯಾಗ್ರಾಹಕರಿಗೆ ಎಲ್ಲ ರೀತಿಯ ಆರ್ಥಿಕ ಸೌಲಭ್ಯ ನೀಡಿ ಅವರಿಗೂ ನೆಮ್ಮದಿಯ ಜೀವನ ಸಾಗಿಸಲು ಸವಲತ್ತುಗಳನ್ನು ನೀಡಲು ಪ್ರಯತ್ನಿಸುತ್ತಿದೆ ಎಂದರು.ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರ ಮಾತನಾಡಿ, ಜಗತ್ತಿನಲ್ಲಿ ಯಾರಾದರು ಸುಳ್ಳುಹೇಳಬಹುದು, ಆದರೆ ಕ್ಯಾಮರಾ ಯಾವ ಕಾರಣಕ್ಕೂ ಸುಳ್ಳು ಹೇಳಲು ಸಾಧ್ಯವಿಲ್ಲ. ಇಂದು ನ್ಯಾಯಾಲಯದ ತೀರ್ಪು ಬರಬೇಕಾದರೆ ಸಾಕ್ಷಿ ಎಷ್ಟು ಮುಖ್ಯವೋ ಒಂದು ಪೋಟೋ ಕೂಡ ಅಷ್ಟೆ ಮುಖ್ಯ. ಇದರಿಂದ ಅಪರಾಧಿಗೆ ಶಿಕ್ಷೆ ಆಗಬಹುದು, ನಿರಪರಾಧಿಗೆ ಬಿಡುಗಡೆ ಆಗಬಹುದು. ಇದು ನಿರ್ಧಾರವಾಗಲು ಛಾಯಾಗ್ರಾಹಕ ಬೇಕೆ ಬೇಕು ಎಂದು ಹೇಳಿದರು.ರವಿಕಿರಣ ಮಾತನಾಡಿ, ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನದ ಬಗ್ಗೆ ಮಾಹಿತಿ ನೀಡಿ ಪ್ರದರ್ಶನದ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದರು.

ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸಂಘಟನೆ ಗಟ್ಟಿಗೊಳಿಸಬೇಕಾಗಿದೆ. ಛಾಯಾಗ್ರಾಹಕರನ್ನು ಗುರುತಿಸದೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಸಂಘವನ್ನು ಬಲಿಷ್ಠಗೊಳಿಸಿ ಕರ್ನಾಟಕ ಛಾಯಾಗ್ರಹಣ ಅಕಾಡೆಮಿ ರಚನೆ ಮಾಡುವಂತೆ ಒತ್ತಾಯಿಸುವದು ಅನಿವಾರ್ಯವಾಗಿದೆ ಎಂದರು.

ಸಮಾರಂಭದಲ್ಲಿ ಜಿಲ್ಲೆಯ ಛಾಯಾಗ್ರಾಹಕರುಗಳಾದ ರವೀಂದ್ರ ಪೂಜಾರಿ, ಮಹೇಶ ಬಾಗಿ, ವಿವೇಕಾನಂದ ಅಕ್ಕಿ. ಚಂದ್ರಕಾಂತ ಸಂಗಮ, ಮಹಮ್ಮದ್ ಇಸಾಕ್, ಪ್ರಭಾಕರ ನೆಲವಡೆ, ಶಶಿಧರ ಆಲಗೂರ ಅವರ ಅನುಪಮ ಸೇವೆಯನ್ನೂ ಗುರುತಿಸಿ ಜಿಲ್ಲಾ ಛಾಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎಸ್.ಎಸ್.ಎಲ್.ಸಿ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಛಾಯಾಗ್ರಾಹಕರ ಮಕ್ಕಳಾದ ಐಶ್ವರ್ಯ ರಜಪೂತ, ಭವಾನಿ ನೇಜ, ಪ್ರಜ್ವಲ ನ್ಯಾಮಗೊಂಡ, ಪ್ರೀಯಾ ಬಿರಾದಾರ, ಸಚಿನ ಬಡಿಗೇರಗೆ ಗೌರವಧನ, ಪ್ರಮಾಣಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ತಾಲೂಕು ಅಧ್ಯಕ್ಷರುಗಳಾದ ಜಂಗಲಿಬಾಷಾ ಮುಜಾವರ, ಸಂಗಯ್ಯ ಮಠಪತಿ, ಸಿದ್ದು ಕುದುರೆ, ಶಿವರುದ್ರಯ್ಯ ಹಿರೇಮಠ, ಪರಶುರಾಮ ಗುಳ್ಳೂರ, ಪದಾಧಿಕಾರಿಗಳಾದ ಸತೀಶ ಕಲಾಲ, ಪ್ರಶಾಂತ ಪಟ್ಟಣಶೆಟ್ಟಿ, ರಾಜುಸಿಂಗ್ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನಕುಮಾರ ಅಂಗಡಿ, ಸಂಜೀವ ಕುಂಬಾರ, ಹಿರಿಯತ ಕಲಾವಿದರಾದ ಪಿ.ಎಸ್.ಕಡೆಮನಿ, ಬಿ.ಎಸ್.ಪಾಟೀಲ, ಪಿಂಟು ಕರ್ವಾ, ಉಮೇಶ ಹಿರೆದೇಸಾಯಿ, ಕಿರಣ ಅಕ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಛಾಯಾಗ್ರಾಹಕ ವೃತ್ತಿಯಲ್ಲಿ ಸುಮಾರು ವರ್ಷಗಳಿಂದ ಸಾಗಿ ಬಂದಿದ್ದೇವೆ. ಆದರೂ, ಸರ್ಕಾರ ನಮ್ಮನ್ನು ಗುರುತಿಸುವುದನ್ನು ಮರೆತಿದೆ. ಎಲ್ಲರಿಗೂ ಸಿಗುವ ಸೌಲಭ್ಯ ನಮಗೂ ಸಿಗುವಂತಾಗಲಿ. ಛಾಯಾಗ್ರಾಹಕರಿಗೂ ಮಾಶಾಸನ ದೊರೆಯುಂತೆ ಆದೇಶ ಮಾಡಲಿ.

ನಾಗರಾಜ.ಟಿ.ಸಿ, ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನಿರ್ದೇಶಕ