ಸಾರಾಂಶ
ಹಾನಗಲ್ಲ: ಹಲವು ಸವಾಲುಗಳ ನಡುವೆ ಛಾಯಾಗ್ರಾಹಕರು, ವಿಡಿಯೋಗ್ರಾಫರ್ ವೃತ್ತಿ ಧರ್ಮದ ಜೊತೆಗೆ ಪ್ರವೃತ್ತಿಗೆ ಆದ್ಯತೆ ನೀಡುತ್ತಿರುವುದು ಇಂದಿನ ವಾಸ್ತವವಾಗಿದ್ದು, ಹೊಸ ತಂತ್ರಜ್ಞಾನ ಬಳಸಿ ಈಗ ವೃತ್ತಿಗೆ ಚೈತನ್ಯ ತಂದುಕೊಳ್ಳುವ ಅಗತ್ಯವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಭಾನುವಾರ ಹಾನಗಲ್ಲಿನ ಜೆಕೆ ಫಂಕ್ಷನ್ ಹಾಲ್‌ನಲ್ಲಿ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಸಂಘ ಆಯೋಜಿಸಿದ ೧೮೫ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ, ಪ್ರತಿಭಾ ಪುರಸ್ಕಾರ, ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಛಾಯಾಗ್ರಹಣ ಮಾಡುವ ಮೂಲಕ ಬಹಳಷ್ಟು ತೊಂದರೆಯಿಂದ ವೃತ್ತಿ ಧರ್ಮ ಕಾಯ್ದುಕೊಳ್ಳುತ್ತಿರುವ ಛಾಯಾಗ್ರಾಹಕರು ಇತರರ ಆನಂದದ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಛಾಯಾಗ್ರಾಹಕರಿಗಾಗಿ ಭವನ ನಿರ್ಮಾಣಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ನಿಯಮದಡಿ ಒಂದು ಜಾಗೆ ನೀಡಲು ಅಭ್ಯಂತರವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಭವನ ನಿರ್ಮಾಣಗೊಂಡು ನಿರ್ವಹಣೆ ಇಲ್ಲದೆ ಹಲವು ಟೀಕೆಗೆ ಗುರಿಯಾಗುತ್ತಿರುವುದರ ಅರಿವು ಇರಲಿ. ಯಾವುದೇ ಸಾರ್ವಜನಿಕ ಭವನಗಳ ನಿರ್ಮಾಣದ ಜೊತೆಗೆ ನಿರ್ವಹಣೆಯ ಪೂರ್ವ ತಯಾರಿ ಬೇಕು. ಅಗತ್ಯವಿದ್ದಲ್ಲಿ ಶಾಸಕರ ಅನುದಾನದಲ್ಲಿ ಭವನ ನಿರ್ಮಾಣ ಮಾಡಲು ೧೦ ಲಕ್ಷ ರು. ಅನುದಾನ ನೀಡಲು ಬದ್ಧ ಎಂದರು.ಹೋತನಹಳ್ಳಿ ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿ, ಎಲ್ಲ ವೃತ್ತಿಯವರಿಗೂ ಒಂದು ಸಂಘಟನೆ ಬೇಕು. ಸಂಘಟಿತ ಹೋರಾಟದಿಂದ ಎಲ್ಲವನ್ನೂ ಪಡೆಯಲು ಸಾಧ್ಯ. ಛಾಯಾಗ್ರಾಹಕರು ಕಲಾತ್ಮಕ ವೃತ್ತಿ ಹಾಗೂ ಪ್ರವೃತ್ತಿಯವರು. ಕಲೆಗೆ ಯಾವಾಗಲೂ ಬೆಲೆ ಇದೆ ಎಂದರು.ಯುವ ಮುಖಂಡ ರಾಜಶೇಖರಗೌಡ ಕಟ್ಟೆಗೌಡರ ಮಾತನಾಡಿ, ಅಸಂಘಟಿತವಾಗಿರುವ ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್ ವೃತ್ತಿಯವರು ತಮ್ಮ ಬೇಡಿಕೆ ಈಡೇರಿಕೆಗಾಗಿ ಸಂಘಟಿತರಾಗಲೇಬೇಕು. ಎಲ್ಲ ಸಂದರ್ಭದಲ್ಲಿಯೂ ತಮ್ಮ ನೆರವಿಗೆ ನಾನು ಸಿದ್ಧ. ಕಷ್ಟದಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಈ ವೃತ್ತಿ ಪ್ರವೃತ್ತಿಯವರಿಗೆ ಸಮಾಜದ ಬೆಂಬಲವೂ ಬೇಕು ಎಂದರು.ತಾಲೂಕು ಫೋಟೋಗ್ರಾಫರ್ ಮತ್ತು ವಿಡಯೋಗ್ರಾಫರ್ ಸಂಘದ ಅಧ್ಯಕ್ಷ ಬಸವರಾಜ ಗಾಣಿಗೇರ ಅಧ್ಯಕ್ಷತೆವಹಿಸಿದ್ದರು. ಪುರಸಭೆ ಅಧ್ಯಕ್ಷೆಮಮತಾ ಆರೆಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ಆದಿಶಕ್ತಿ ಕೇಬಲ್ ನೆಟ್‌ವರ್ಕ ಮಾಲೀಕ ರಾಮು ಯಳ್ಳೂರ, ಮರಿಗೌಡ ಪಾಟೀಲ, ಶಿವಾನಂದ ದೇಸಾಯಿ, ನಾಗೇಂದ್ರ ಬಂಕಾಪೂರ, ಗೌಸಅಹಮ್ಮದ ಕಾಲೇನವರ, ಸಂಘದ ಹಾವೇರಿ ಜಿಲ್ಲಾ ಪದಾಧಿಕಾರಿಗಳು, ಎಲ್ಲ ತಾಲೂಕುಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಅನು ಬಂಕಾಪೂರಮಠ ಪ್ರಾರ್ಥನೆ ಹಾಡಿದರು. ಜ್ಞಾನಗಂಗಾ ಆಂಗ್ಲ ಮಾಧ್ಯಮ ಶಾಲೆಯ ಅಂಜಲಿ ಚಕ್ರಸಾಲಿ, ಅನ್ವಿತಾ ಭರತ ನಾಟ್ಯ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸುಣಗಾರ ಸ್ವಾಗತಿಸಿದರು. ಶಿವಾನಂದ ದೇಸಾಯಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀನಿವಾಸ ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.