ಸಾರಾಂಶ
ಹುಬ್ಬಳ್ಳಿ: ಇಂದಿನ ಅಧುನಿಕತೆಯ ಕಾಲಘಟ್ಟದಲ್ಲಿ ಛಾಯಾಗ್ರಾಹಕರು ಹೊಸ ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಬೇಕಿದೆ ಎಂದು ದಿ ವಿಕ್ ಫೋಟೋ ಎಡಿಟರ್ ಭಾನುಪ್ರಕಾಶ ಚಂದ್ರ ಹೇಳಿದರು.
ಇಲ್ಲಿನ ಇಂದಿರಾ ಗಾಜಿನ ಮನೆ ಆವರಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ "ಫೋಕಸ್ ಆನ್ ನ್ಯೂಸ್ " ಛಾಯಾಚಿತ್ರ ಪ್ರದರ್ಶನ ಹಾಗೂ ಪತ್ರಿಕಾ ಛಾಯಾಗ್ರಹಣ ತರಬೇತಿ ಕಾರ್ಯಾಗಾರದಲ್ಲಿ ಪತ್ರಿಕಾ ಛಾಯಾಗ್ರಹಣದ ಪ್ರಸಕ್ತ ಸ್ವರೂಪ ಹಾಗೂ ಸವಾಲುಗಳು ವಿಷಯದ ಕುರಿತು ವಿಷಯ ಮಂಡನೆ ಮಾಡಿದರು.ಛಾಯಾಚಿತ್ರ ಗ್ರಾಹಕರಿಗೆ ಭಾರತದಂತಹ ದೇಶದಲ್ಲಿ ಕಥೆ ಹೇಳಲು ಉತ್ತಮ ಅವಕಾಶಗಳಿವೆ. ಪ್ರಸ್ತುತ ದಿನಗಳಲ್ಲಿ ಮೊಬೈಲ್ ಜರ್ನಲಿಸಂ ಹಾಗೂ ಡಿಜಿಟಲ್ ಜರ್ನಲಿಸಂ ಬೆಳೆದು ನಿಂತಿದೆ. ಈ ನಿಟ್ಟಿನಲ್ಲಿ ನಾವು ಡಿಜಿಟಲ್ ಜರ್ನಲಿಸಂನ್ನು ಒಪ್ಪಿಕೊಳ್ಳಬೇಕಾಯಿತು. ಅದೇ ರೀತಿ ಎಐ (ಕೃತಕ ಬುದ್ಧಿಮತ್ತೆ) ತಾಂತ್ರಿಕತೆ ಬಂದಿದ್ದನ್ನೂ ನಾವು ಇಂದು ಒಪ್ಪಿಕೊಳ್ಳುವ ಸ್ಥಿತಿಯಲ್ಲಿದ್ದೇವೆ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪತ್ರಿಕಾ ಛಾಯಾಗ್ರಾಹಕಿ ಶಿಪ್ರಾ ದಾಸ್ ಮಾತನಾಡಿ, 1980ರಲ್ಲಿ ನಾನು ಕೆಲಸ ಆರಂಭಿಸಿದಾಗ ಮ್ಯಾನುವೆಲ್ ಕ್ಯಾಮೆರಾಗಳಿದ್ದವು. ಆಗ ಡೆಡ್‌ಲೈನ್ ಒಳಗಾಗಿ ಫೋಟೋ ಕೊಡಲು ನಾವು ಶತಪ್ರಯತ್ನ ಪಡುತ್ತಿದ್ದೆವು. ಆದರೆ, ಪ್ರಸ್ತುತ ದಿನಗಳಲ್ಲಿ ಆ ರೀತಿಯ ತೊಂದರೆಗಳಿಲ್ಲ. ಛಾಯಾಚಿತ್ರ ತೆಗೆದ ತಕ್ಷಣ ಅವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ನಾವು ಸಂಬಂಧಿಸಿದವರಿಗೆ ತ್ವರಿತಗತಿಯಲ್ಲಿ ತಲುಪಿಸಬಹುದಾಗಿದೆ ಎಂದರು.ಕನ್ನಡಪ್ರಭ ಬ್ಯೂರೋ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಒಂದು ಸುದ್ದಿಗೆ ಛಾಯಾಚಿತ್ರ, ಒಂದು ಛಾಯಾಚಿತ್ರಕ್ಕೆ ಸುದ್ದಿ ಎರಡೂ ಹೊಂದುವಂತಿರಬೇಕು. ಒಂದು ಚಿತ್ರ ಸುದ್ದಿಯನ್ನು ಸಂಪೂರ್ಣವಾಗಿ ಕಟ್ಟಿಕೊಡುವಂತಿರಬೇಕು. ಸುದ್ದಿ ಎಷ್ಟು ಶಕ್ತಿಯುತವಾಗಿರುತ್ತದೆಯೋ ಅಷ್ಟೇ ಶಕ್ತಿಯುತವಾಗಿ ಒಂದು ಛಾಯಾಗ್ರಹಣವೂ ಇರಬೇಕು ಎಂದರು.
ಮೊದಲಿನ ದಿನಗಳಲ್ಲಿ ಛಾಯಾಗ್ರಹಣಕ್ಕೆ ಸಾಕಷ್ಟು ಪ್ರಚಾರ ದೊರೆಯುತ್ತಿತ್ತು. ಆದರೆ, ಇತ್ತೀಚೆಗೆ ಪುಟಗಳ ಸಂಖ್ಯೆಯ ಕೊರತೆ, ಸುದ್ದಿಗಳ ಹಾವಳಿ, ಸ್ಥಳದ ಕೊರತೆಯಿಂದಾಗಿ ಇಂದು ಛಾಯಾಚಿತ್ರಗಳಿಗೆ ಪ್ರಚಾರ ಸಿಗುತ್ತಿಲ್ಲ ಎಂದರು.ಹಿರಿಯ ಪತ್ರಕರ್ತ ಬಂಡು ಕುಲಕರ್ಣಿ ಮಾತನಾಡಿ, ಪತ್ರಿಕೋದ್ಯಮದಲ್ಲಿ ಹಲವು ಸಂದಿಗ್ಧತೆಗಳಿರುತ್ತವೆ. ಇಂತಹ ಸಂದಿಗ್ಧತೆಯಲ್ಲಿ ಎಲ್ಲರೂ ಕೆಲಸ ಮಾಡಬೇಕಾಗುತ್ತದೆ. ಪತ್ರಿಕಾಲಯದಲ್ಲಿ ಪರಂಪರಾಗತವಾಗಿ ಬಂದ ಛಾಯಾಗ್ರಾಹಕರು, ಬಿಡಿ ವರದಿಗಾರರು ಛಾಯಾಚಿತ್ರ ಗ್ರಾಹಕರಾಗುತ್ತಾರೆ. ಇನ್ನಷ್ಟು ಜನ ಅನಿವಾರ್ಯವಾಗಿ ಛಾಯಾಗ್ರಾಹಕರಾಗುತ್ತಾರೆ. ಆದರೆ, ಅವರಿಗೆ ಸಾಕಷ್ಟು ಅವಕಾಶಗಳಿರುತ್ತವೆ. ಆ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.
ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಮಾತನಾಡಿ, ಇಂದಿನ ಫೋಟೋಗ್ರಾಫರ್‌ಗಳಿಗಿಂತ ಮೊದಲಿನ ಫೋಟೋಗ್ರಾಫರ್‌ಗಳು ಮುಖ್ಯ ಪಾತ್ರವಹಿಸುತ್ತಾರೆ. ಒಬ್ಬ ತೆಗೆದ ಫೋಟೋಗಳನ್ನು ಇಡೀ ಊರಿಗೆ ಹಂಚುವುದು ಫೋಟೋಗ್ರಫಿ ಅಲ್ಲ. ನ್ಯೂಸ್ ಫೋಟೋಗ್ರಫರ್ ಯಾವುದೇ ಕ್ಷಣದಲ್ಲೂ ನಗು ನಗುತ್ತಲೇ ಕೆಲಸ ಮಾಡುತ್ತಲಿರಬೇಕು ಎಂದರು.ಇದೇ ಸಂದರ್ಭದಲ್ಲಿ ಹಲವು ಛಾಯಾಗ್ರಾಹಕರು ಸಂವಾದದಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಪತ್ರಿಕಾ ಛಾಯಾಗ್ರಹಣ ಸ್ಪರ್ಧೆಯ ವಿಜೇತರುಹುಬ್ಬಳ್ಳಿ: ಪೋಕಸ್ ಆನ್ ನ್ಯೂಸ್ ಛಾಯಾಚಿತ್ರ ಪ್ರದರ್ಶನದಲ್ಲಿ ಮೈಸೂರು ಬಳಿಯ ಸಂಕ್ರಾಂತಿ ಹಬ್ಬದ ಕಿಚ್ಚು ಹಾಯಿಸುವ ದೃಶ್ಯವನ್ನು ಸೆರೆ ಹಿಡಿದ ಮಂಗಳೂರಿನ ಸತೀಶ್ ಇರಾ ಅವರ ಛಾಯಾಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಕೊಪ್ಪಳದ ಪ್ರಕಾಶ್ ಕಂದಕೂರ ಅವರ ಬರದ ಬವಣೆಯನ್ನು ಬಿಂಬಿಸುವ "ನೀರನರಸುತ್ತಾ.. " ಎಂಬ ಶೀರ್ಷಿಕೆಯ ಛಾಯಾಚಿತ್ರಕ್ಕೆ ದ್ವಿತೀಯ ಬಹುಮಾನ ಲಭಿಸಿದೆ. ಕೊಪ್ಪಳದ ಭರತ್ ಕಂದಕೂರ ಅವರ ಜಲಮಾಲಿನ್ಯದ ಕರಾಳ ರೂಪ ತೋರಿಸುವ "ತುಂಗಭದ್ರೆಯ ಮೂಕರೋದನೆ " ಚಿತ್ರಕ್ಕೆ ತೃತೀಯ ಬಹುಮಾನ ದೊರೆತಿದೆ. ಕೊಪ್ಪಳದ ಕನ್ನಡಪ್ರಭದ ಛಾಯಾಗ್ರಾಹಕ ನಾಭಿರಾಜ ದಸ್ತೇನವರ, ವಿಜಯಪುರದ ಸುಧೀಂದ್ರ ಕುಲಕರ್ಣಿ ಹಾಗೂ ಧಾರವಾಡದ ಬಿ.ಎಂ. ಕೇದಾರನಾಥ್ ಛಾಯಾಚಿತ್ರಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ.