ಛಾಯಾಗ್ರಾಹಕರನ್ನು ಅತ್ಯಂತ ಗೌರವದಿಂದ ಕಾಣಲಿ: ಕರಿಬಸವಶ್ರೀ

| Published : Sep 02 2024, 02:13 AM IST

ಸಾರಾಂಶ

ನಮ್ಮ ಜೀವನದಲ್ಲಿ ಛಾಯಾಗ್ರಾಹಕರ ಅವಶ್ಯಕತೆ ಬಹಳಷ್ಟಿದ್ದು, ಅವರ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಕುಷ್ಟಗಿ: ನಮ್ಮ ಜೀವನದಲ್ಲಿ ಛಾಯಾಗ್ರಾಹಕರ ಅವಶ್ಯಕತೆ ಬಹಳಷ್ಟಿದ್ದು, ಅವರ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಎನ್‌ಸಿಎಚ್ ಪ್ಯಾಲೇಸ್‌ನಲ್ಲಿ ನಡೆದ ಕುಷ್ಟಗಿ ತಾಲೂಕು ಛಾಯಾಗ್ರಾಹಕರ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಸಂಘದ 25ನೇ ವಾರ್ಷೀಕೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.

ನಿಡಶೇಸಿಯ ಅಭಿನವ ಕರಿಬಸವ ಶಿವಾಚಾರ್ಯರು ಮಾತನಾಡಿ, ಛಾಯಾಗ್ರಾಹಕರ ಕುಟುಂಬದಲ್ಲಿ ಅನೇಕ ಕಷ್ಟನಷ್ಟಗಳಿದ್ದರೂ ಸ್ಮೈಲ್ ಪ್ಲೀಸ್ ಎನ್ನುತ್ತ ತಮ್ಮ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಬೆಂಗಳೂರು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಚ್.ಎಸ್ ನಾಗೇಶ ಮಾತನಾಡಿ, ನಾವು ತೆಗೆಯುವ ಒಂದು ಫೋಟೋ ಸಾವಿರ ಪದಗಳಿಗೆ ಸಮವಾಗಿದೆ. ನಮ್ಮ ವೃತ್ತಿ ಬದುಕಿನ ಉಳಿವಿಗಾಗಿ ರಾಜ್ಯದ ತುಂಬೆಲ್ಲ ಛಾಯಾಗ್ರಾಹಕರ ಸಂಘಗಳು, ಸಹಕಾರಿ ಸಂಘಗಳನ್ನು ನಿರ್ಮಾಣ ಮಾಡುವ ಮೂಲಕ ಉಳಿವಿಗಾಗಿ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಡಿಜಿ ಇಮೇಜ್ ಕಾರ್ಯಾಗಾರ ಮಾಡುತ್ತಿದ್ದು, ಇದರಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು. ಛಾಯಾಗ್ರಾಹರಕನ್ನು ಕರ್ನಾಟಕ ಸರಕಾರ ಅಸಂಘಟಿತ ಕಾರ್ಮಿಕರೆಂದು ಗುರುತಿಸಿ ಸೌಲಭ್ಯಗಳನ್ನು ನೀಡಿದ್ದು ಉಪಯೋಗ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಫೋಟೋ ಮಳಿಗೆಯನ್ನು ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು. ಮೃತಪಟ್ಟ ಛಾಯಾಗ್ರಾಹಕರಿಗೆ ಮೌನಾಚರಣೆ ಮಾಡುವ ಮೂಲಕ ಶಾಂತಿ ಕೋರಲಾಯಿತು.

ಈ ಸಂದರ್ಭದಲ್ಲಿ ರವಿಕುಮಾರ ಹಿರೇಮಠ, ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಬಸವರಾಜ ಹಳ್ಳೂರು, ಅಣ್ಣಿರಯ್ಯ ಹಿರೇಮಠ, ವಿಜಯಕುಮಾರ ವಸ್ತ್ರದ, ಬಸವರಾಜ ಕಂಪ್ಲಿ, ಚಾಂದಪಾಷಾ ಗಡಾದ, ಉಮಾಪತಿ ಹೊಸಮನಿ, ನಾರಾಯಣ ಅಜ್ಜಣ್ಣನವರು, ತಿರುಪತಿ ಎಲಿಗಾರ, ಬೀಮಸೇನರಾವ್ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.