ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶಿಸುವವರು ವೃತ್ತಿಪರ ಬದ್ಧತೆ ಮತ್ತು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಬೇಕು.
ಬಳ್ಳಾರಿ: ಛಾಯಾಗ್ರಹಣ ಎನ್ನುವುದು ಕೇವಲ ಕ್ಯಾಮೆರಾದ ಬಟನ್ ಒತ್ತಿ ಚಿತ್ರ ಸೆರೆಹಿಡಿಯುವ ತಾಂತ್ರಿಕ ಪ್ರಕ್ರಿಯೆಯಲ್ಲ. ಅದೊಂದು ಸೃಜನಶೀಲ ಕಲೆ. ಪ್ರತಿಯೊಬ್ಬ ಛಾಯಾಚಿತ್ರಗಾರನಲ್ಲೂ ಚಿತ್ರ ಸೆರೆಹಿಡಿಯುವ ಆಸಕ್ತಿ, ಕಲ್ಪನಾಶಕ್ತಿ, ಸೂಕ್ಷ್ಮ ಅವಲೋಕನ ಮತ್ತು ಸತ್ಯ ಹುಡುಕುವ ಮನೋಭಾವ ಇರಬೇಕು. ಸುತ್ತಮುತ್ತ ನಡೆಯುವ ಘಟನೆ ಸಾಮಾನ್ಯ ದೃಷ್ಟಿಯಿಂದ ನೋಡದೆ ಅವುಗಳ ಹಿಂದಿರುವ ವಿಶೇಷತೆ ಗುರುತಿಸುವ ಕಣ್ಣು ಛಾಯಾಗ್ರಾಹಕನಿಗೆ ಇರಬೇಕು ಎಂದು ಹಿರಿಯ ಪತ್ರಿಕಾ ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳು ತಿಳಿಸಿದರು.
ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ್ದ ಪತ್ರಿಕೋದ್ಯಮದಲ್ಲಿ ಛಾಯಾಚಿತ್ರದ ಅಗತ್ಯತೆ ಮತ್ತು ಮಹತ್ವ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶಿಸುವವರು ವೃತ್ತಿಪರ ಬದ್ಧತೆ ಮತ್ತು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಬೇಕು. ಜನರ ಬದುಕು, ನೋವು, ನಲಿವು, ಹೋರಾಟ ಹಾಗೂ ಸಮಾಜದ ವಾಸ್ತವಿಕತೆ ಪ್ರತಿಬಿಂಬಿಸುವ ಚಿತ್ರ ಸೆರೆಹಿಡಿಯುವ ಹಂಬಲ ಹೊಂದಿರಬೇಕು. ಒಂದು ಉತ್ತಮ ಛಾಯಾಚಿತ್ರ ಸಾವಿರ ಪದಗಳಲ್ಲಿ ಹೇಳಲಾಗದ ವಿಚಾರ ಕ್ಷಣ ಮಾತ್ರದಲ್ಲಿ ಜನರಿಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಪತ್ರಿಕೋದ್ಯಮದಲ್ಲಿ ಛಾಯಾಚಿತ್ರಕ್ಕೆ ವಿಶೇಷ ಸ್ಥಾನವಿದೆ ಎಂದು ತಿಳಿಸಿದರು.
ಇಂದು ನಾವು ಸೆರೆಹಿಡಿಯುವ ಛಾಯಾಚಿತ್ರಗಳು ಕೇವಲ ಇಂದಿನ ಸುದ್ದಿಗೆ ಪೂರಕವಾಗಿರುವುದಿಲ್ಲ. ಅವು ಮುಂದಿನ ಪೀಳಿಗೆಗೆ ಇತಿಹಾಸದ ದಾಖಲೆಗಳಾಗಿ ಉಳಿಯುತ್ತವೆ. ಸಮಾಜದಲ್ಲಿ ನಡೆಯುವ ಮಹತ್ವದ ಘಟನೆ, ಬದಲಾವಣೆ, ಜನ ಜೀವನದ ಚಿತ್ರಣ ಹಾಗೂ ಕಾಲಘಟ್ಟದ ಸಾಮಾಜಿಕ ಸ್ಥಿತಿಗತಿಗಳಿಗೆ ಛಾಯಾಚಿತ್ರಗಳು ಸಾಕ್ಷಿಯಾಗುತ್ತವೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಪ್ರತಿದಿನವೂ ಅನೇಕ ಆಸಕ್ತಿದಾಯಕ ಘಟನೆಗಳು ನಡೆಯುತ್ತಿರುತ್ತವೆ. ಅವುಗಳನ್ನು ಛಾಯಾಚಿತ್ರಗಾರನ ದೃಷ್ಟಿಕೋನದಿಂದ ಅವಲೋಕಿಸಿ ಸೂಕ್ತ ಸಮಯದಲ್ಲಿ ಸೆರೆಹಿಡಿದಾಗ ಆ ಚಿತ್ರಗಳು ವಿಶೇಷ ಮೆಚ್ಚುಗೆಗೆ ಪಾತ್ರವಾಗುತ್ತವೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ರಾಕೇಶ ವಿ.ತಾಳಿಕೋಟಿ ಮಾತನಾಡಿ, ಛಾಯಾಚಿತ್ರಗಳು ಕೇವಲ ದೃಶ್ಯಗಳಾಗಿರದೆ ಕಥೆ ಹೇಳುವಂತಿರಬೇಕು. ಚಿತ್ರವೊಂದು ತನ್ನದೇ ಆದ ಭಾಷೆ ಹೊಂದಿರುತ್ತದೆ. ಅನೇಕರು ಚಿತ್ರ ತೆಗೆಯುವುದನ್ನೇ ಛಾಯಾಗ್ರಹಣ ಎಂದು ಭಾವಿಸುತ್ತಾರೆ. ಆದರೆ ಛಾಯಾಗ್ರಹಣದ ಆಳ ಮತ್ತು ಅಗಲ ಅರಿತು ಅದರ ಸಾಮಾಜಿಕ ಹಾಗೂ ಸೃಜನಶೀಲ ಆಯಾಮ ಗ್ರಹಿಸುವವನೇ ನಿಜವಾದ ಛಾಯಾಚಿತ್ರಗಾರ ಎಂದು ಹೇಳಿದರು. ಛಾಯಾಚಿತ್ರ ಸೆರೆಹಿಡಿಯುವಾಗ ಸಂದರ್ಭ, ಸಮಯ, ಬೆಳಕು, ಹಿನ್ನೆಲೆ ಮತ್ತು ಚಿತ್ರದ ಉದ್ದೇಶದ ಬಗ್ಗೆ ಅರಿವು ಹೊಂದಿರಬೇಕು. ಛಾಯಾಚಿತ್ರಗಾರನಿಗೆ ತಾಳ್ಮೆ ಅತ್ಯಂತ ಮುಖ್ಯ. ಕೆಲವೊಮ್ಮೆ ಒಂದು ಅಪರೂಪದ ಕ್ಷಣಕ್ಕಾಗಿ ದೀರ್ಘಕಾಲ ಕಾಯಬೇಕಾಗುತ್ತದೆ. ಅಂತಹ ತಾಳ್ಮೆ ಮತ್ತು ನಿರಂತರ ಅಭ್ಯಾಸದಿಂದ ಮಾತ್ರ ಉತ್ತಮ ಛಾಯಾಚಿತ್ರಗಾರನಾಗಿ ರೂಪುಗೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉಪನ್ಯಾಸಕ ಡಾ.ಜಯರಾಜ್ ಹಾಗೂ ಶಂಕರ್ ಕಾರ್ಯಕ್ರಮ ನಿರ್ವಹಿಸಿದರು. ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.