ಸಾವಿತ್ರಿಬಾಯಿ ಫುಲೆ ಅವರು ಭಾರತ ದೇಶದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದರು ಎಂದು ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಕಾಂತ್ ತಿಳಿಸಿದರು.
ನರಸಿಂಹರಾಜಪುರ: ಸಾವಿತ್ರಿಬಾಯಿ ಫುಲೆ ಅವರು ಭಾರತ ದೇಶದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದರು ಎಂದು ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಕಾಂತ್ ತಿಳಿಸಿದರು.
ಬುಧವಾರ ಮೂಡಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮೂಡಬಾಗಿಲು ಸರ್ಕಾರಿ ಶಾಲೆಯ ಸಂಯುಕ್ತಾಶ್ರಯದಲ್ಲಿ ನಡೆದ ಸಾವಿತ್ರಿಬಾಯಿ ಫುಲೆಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ "ಸಾವಿತ್ರಿ ಬಾಯಿ ಜೀವನ ಸಂಘರ್ಷಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಾವಿತ್ರಿಬಾಯಿ ಫುಲೆ ಅವರು ಮಹಾರಾಷ್ಟ ರಾಜ್ಯದಲ್ಲಿ ಜನಿಸಿದ್ದರು. ಆಗಿನ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಅವರಿಗೆ 9 ವರ್ಷಕ್ಕೆ ಮದುವೆ ಮಾಡಿದ್ದರು. ಆಗಿನ ಸಮಾಜದಲ್ಲಿ ಮಹಿಳೆಯರು ಶಿಕ್ಷಣ ಕಲಿಯುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೂ ಸಾವಿತ್ರಿಬಾಯಿ ಫುಲೆ ಅವರ ಪತಿ ಜ್ಯೋತಿ ಬಾಫುಲೆ ಅವರು ಮನೆಯಲ್ಲೇ ಶಿಕ್ಷಣ ಕಲಿಸಿದ್ದರು. ಶಿಕ್ಷಣ ಕಲಿತ ನಂತರ ಮೊದಲ ಮಹಿಳಾ ಶಿಕ್ಷಕಿಯಾಗಿ ಕೆಲಸ ಮಾಡಿದರು. ಮುಂದೆ 5 ವರ್ಷದಲ್ಲಿ 18 ಶಾಲೆಗಳನ್ನು ಕಟ್ಟಿಸಿ ಶಿಕ್ಷಣದಲ್ಲಿ ಕ್ರಾಂತಿ ಮಾಡಿದರು. ಶಿಕ್ಷಣದ ಜೊತೆಗೆ ಸಮಾಜದಲ್ಲಿದ್ದ ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದರು. ಹಿಂದುಳಿದ ಜಾತಿಯವರಿಗೆ ದೇವಸ್ಥಾನಕ್ಕೆ ಪ್ರವೇಶ ಇರಲಿಲ್ಲ. ಇದರ ವಿರುದ್ಧ ಹೋರಾಟ ಮಾಡಿ ಶೋಷಿತ ವರ್ಗದವರ ಧ್ವನಿಯಾಗಿ ಕೆಲಸ ಮಾಡಿದರು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್, ಮಕ್ಕಳು ಚಿಕ್ಕವಯಸ್ಸಿನಲ್ಲೇ ಸಂಸ್ಕಾರ ಕಲಿಯಬೇಕು. ಸಂಸ್ಕಾರ ಕಲಿತ ಮಕ್ಕಳು ದೊಡ್ಡವರಾದ ಮೇಲೆ ಸಂಸ್ಕಾರವಂತರಾಗುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಹೆಚ್ಚು ಧೈರ್ಯ ಶಾಲಿಗಳಾಗುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ಮಾತನಾಡಿ, ಸಾವಿತ್ರಿಬಾಯಿ ಫುಲೆಯಂತೆ ಮಕ್ಕಳು ಶಿಕ್ಷಕಿಯಾಗಬೇಕು. ಶಿಕ್ಷಕರಾದವರನ್ನು ನಿವೃತ್ತ ನಂತರವೂ ಅವರ ಶಿಷ್ಯಂದಿರು ಗುರುತಿಸಿ ಗೌರವಿಸುತ್ತಾರೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೂಡಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಯೋಪಾಧ್ಯಾಯ ಜಯಣ್ಣ, ಸ್ವಾತಂತ್ರ ಪೂರ್ವದಲ್ಲಿ ಮೊದಲ ಮಹಿಳಾ ಶಿಕ್ಷಕಿಯಾಗಿ ಸಾವಿತ್ರಿ ಬಾಯಿ ಶಿಕ್ಷಣದಲ್ಲಿ ಕ್ರಾಂತಿ ಮಾಡಿದ್ದರು. ಮೇಲು, ಕೀಳು ಎಂಬ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದ್ದರು. ಬಾಲ್ಯ ವಿವಾಹ ವಿರೋಧಿಸಿದ್ದರು ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಶ್ರೀನಿವಾಸ್ ಮಾತನಾಡಿದರು.ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ರತಿ ಶ್ರೀನಿವಾಸ್, ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷೆ ಜಯಂತಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಸವರಾಜ್, ಸದಸ್ಯ ಅವಿನಾಶ್ ಇದ್ದರು.
ಇದೇ ಸಂದರ್ಭದಲ್ಲಿ ಮೂಡಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ಗ್ರೇಸಿ ಹಾಗೂ ಸಿಲ್ವಿ ಅವರಿಗೆ ತಾಲೂಕು ಕಸಾಪದಿಂದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಶಾಲೆಯ 44 ಮಕ್ಕಳಿಗೆ ಕನ್ನಡ ಶಾಲೆಯ ಭವಿಷ್ಯದ ಮಕ್ಕಳು ಎಂಬ ಅಭಿನಂದನಾ ಪತ್ರ ನೀಡಲಾಯಿತು. ಶಿಕ್ಷಕಿ ಅಖಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸಿಲ್ಪಿ ಸ್ವಾಗತಿಸಿದರು. ಶಿಕ್ಷಕಿ ನಯನ ಕಾರ್ಯಕ್ರಮ ನಿರೂಪಿಸಿದರು.
ಅತಿ ಶೀಘ್ರದಲ್ಲೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು. ಸಮ್ಮೇಳನ ನಡೆಸುವುದರ ಬಗ್ಗೆ ಜ.10ರ ಶನಿವಾರ ಮಧ್ಯಾಹ್ನ 2 ಗಂಟೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಪದಾಧಿಕಾರಿ ಹಾಗೂ ಸದಸ್ಯರ ಸಭೆ ಕರೆಯಲಾಗಿದೆ. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಹೆಚ್ಚು ಅವಕಾಶ ನೀಡಲಾಗುವುದು.
- ಪೂರ್ಣೇಶ್, ತಾಲೂಕು ಕಸಾಪ ಅಧ್ಯಕ್ಷ