ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ
ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಹೆಚ್ಚಿಸುವ ಸಲುವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ದೈಹಿಕ ಶಿಕ್ಷಕರು ಹಾಗೂ ಚಿತ್ರಕಲಾ ಶಿಕ್ಷಕರು ಸೇರಿಕೊಂಡು ಕ್ರೀಡೆ ಹಾಗೂ ಚಿತ್ರಕಲೆಯಲ್ಲಿ ಪ್ರೋತ್ಸಾಹಿಸಿದಂತೆ ಪರೀಕ್ಷೆ ಕುರಿತು ಮೊಟಿವೇಶನ್ ಮಾಡಬೇಕು ಎಂದು ಬಸವನಬಾಗೇವಾಡಿ ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.ಪಟ್ಟಣದಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬಸವನ ಬಾಗೇವಾಡಿ ಹಾಗೂ ಸಿಕ್ಯಾಬ್ ಸಂಯುಕ್ತ ಪ.ಪೂ ಕಾಲೇಜು( ಪ್ರೌಢಶಾಲಾ ವಿಭಾಗ) ಕೊಲ್ಹಾರ ಸಹಯೋಗದೊಂದಿಗೆ ಹಮ್ಮಿಕೊಂಡ ದೈಹಿಕ ಶಿಕ್ಷಣ ಹಾಗೂ ಚಿತ್ರಕಲಾ ಶಿಕ್ಷಣ ಶಿಕ್ಷಕರ ಕಾರ್ಯಾಗಾರಕ್ಕೆ ಭೇಟಿ ನೀಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹಾಗೂ ಚಿತ್ರಕಲಾ ಶಿಕ್ಷಕರ ಪಾತ್ರ ದೊಡ್ಡದಿದೆ. ದೈಹಿಕ ಶಿಕ್ಷಕರು ಕ್ರೀಡೆಗಳಲ್ಲಿ ಪ್ರೋತ್ಸಾಹಿಸಿ ಆಟೋಟಗಳಲ್ಲಿ ಗೆಲ್ಲಿಸಿದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮೊಟಿವೇಷನ್ ಮಾಡಬೇಕು. ಚಿತ್ರಕಲಾ ಶಿಕ್ಷಕರು ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಬರುವ ಚಿತ್ರಪಟಗಳನ್ನು ಸರಳವಾಗಿ ತೆಗೆಯುವಂತೆ ಕಲಿಸಬೇಕು. ನಮ್ಮ ರಾಷ್ಟ್ರೀಯ ಕ್ರೀಡೆ ಹಾಕಿ ಇರುವುದರಿಂದ ಕ್ರಿಕೆಟ್‌ಕ್ಕಿಂತ ಹೆಚ್ಚು ಹಾಕಿ ಆಟಕ್ಕೆ ಪ್ರೋತ್ಸಾಹ ನೀಡಲಾಗುವುದು ತಾವೆಲ್ಲ ಮಕ್ಕಳನ್ನು ಹಾಕಿ ಆಟಕ್ಕೆ ಸಿದ್ಧಗೊಳಿಸಬೇಕು ಎಂದರು.ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ ಮಾತನಾಡಿ, ಮರೆತಂತ ವಿಷಯವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಸಲುವಾಗಿ ಇಲಾಖೆ ವತಿಯಿಂದ ಪುನಶ್ಚೇತನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ದೈಹಿಕ ಶಿಕ್ಷಕರು ಹಾಗೂ ಚಿತ್ರಕಲಾ ಶಿಕ್ಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್.ಅವಟಿ ಮಾತನಾಡಿ, ಪ್ರತಿ ಶನಿವಾರಕ್ಕೊಮ್ಮೆ ಎಲ್ಲ ಮಕ್ಕಳಿಗೆ ಬಿಳಿ ಸಮವಸ್ತ್ರ ಹಾಕುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ದೈಹಿಕ ಶಿಕ್ಷಕರು ಶಾಲೆಯಲ್ಲಿ ಕಡ್ಡಾಯವಾಗಿ ಶಿಸ್ತು ಸಮಯ ಪ್ರಜ್ಞೆಯನ್ನು ಬೆಳಿಸಬೇಕು ಎಂದರು.ಕಾರ್ಯಾಗಾರದಲ್ಲಿ ನಿವೃತ್ತಿ ಹೊಂದಿದ ಹಾಗೂ ನಿವೃತ್ತಿ ಹೊಂದುತ್ತಿರುವ ದೈಹಿಕ ಶಿಕ್ಷಕರನ್ನು ಹಾಗೂ ಚಿತ್ರಕಲಾ ಶಿಕ್ಷಕರನ್ನು ಸಿಕ್ಯಾಬ್ ಪ.ಪೂ ಕಾಲೇಜ (ಪ್ರೌಢಶಾಲಾ ವಿಭಾಗ)ದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಿಕ್ಯಾಬ್ ಕಾಲೇಜಿನ ಪ್ರಾಚಾರ್ಯ ಎಸ್.ಎಂ.ಹಳ್ಳೂರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್.ಅವಟಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಸಿ.ಎಸ್.ಹಿರೇಮಠ, ಜಿಲ್ಲಾ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಂ.ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹಾಗೂ ಚಿತ್ರಕಲಾ ಶಿಕ್ಷಕರ ಪಾತ್ರ ದೊಡ್ಡದಿದೆ. ದೈಹಿಕ ಶಿಕ್ಷಕರು ಕ್ರೀಡೆಗಳಲ್ಲಿ ಪ್ರೋತ್ಸಾಹಿಸಿ ಆಟೋಟಗಳಲ್ಲಿ ಗೆಲ್ಲಿಸಿದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮೊಟಿವೇಷನ್ ಮಾಡಬೇಕು. ಚಿತ್ರಕಲಾ ಶಿಕ್ಷಕರು ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಬರುವ ಚಿತ್ರಪಟಗಳನ್ನು ಸರಳವಾಗಿ ತೆಗೆಯುವಂತೆ ಕಲಿಸಬೇಕು.-ವಸಂತ ರಾಠೋಡ,
ಬಸವನಬಾಗೇವಾಡಿ ಕ್ಷೇತ್ರಶಿಕ್ಷಣಾಧಿಕಾರಿ.