ಹಿರಿಯೂರು ತಾಲೂಕಿನ ಗೊಲ್ಲಹಳ್ಳಿಯ ಜೆಟ್ ಸಿಬಿಎಸ್‌ಇ ಶಾಲೆಯಲ್ಲಿ ನಡೆದ ಕ್ರೀಡಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಪಿಎಸ್‌ಐ ದೀಪು ಅವರು ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ಮಕ್ಕಳು ಮಾನಸಿಕವಾಗಿ ಸದೃಢವಾಗಲು ದೈಹಿಕ ಪರಿಶ್ರಮವೂ ಅತ್ಯಗತ್ಯ ಎಂದು ಐಮಂಗಲ ಪೊಲೀಸ್ ಠಾಣೆಯ ಪಿಎಸ್ಐ ದೀಪುರವರು ಅಭಿಪ್ರಾಯಪಟ್ಟರು.ತಾಲೂಕಿನ ಗೊಲ್ಲಹಳ್ಳಿಯ ಜೆಟ್ ಸಿಬಿಎಸ್‌ಇ ಶಾಲೆಯಲ್ಲಿ ನಡೆದ ಕ್ರೀಡಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಿದಾಗ ಗೆಲುವು ಸೋಲುಗಳನ್ನು ಸಮಾನ ಮನೋಭಾವನೆಯಿಂದ ಸ್ವೀಕರಿಸಬೇಕು. ಗೆಲುವಿಗೆ ಬೀಗುವುದು, ಸೋಲಿಗೆ ಕುಗ್ಗುವುದು ಮಾಡಬಾರದು.ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ಗೆಲುವುಗಳನ್ನು ಮುನ್ನುಗ್ಗಲು ದಾರಿಯನ್ನಾಗಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.ರಾಷ್ಟ್ರೀಯ ಖೋಖೋ ಪಟು ಕುಮಾರಿ ಎಸ್ ಎನ್ ಪ್ರಕೃತಿ ಮಾತನಾಡಿ ಹಳ್ಳಿ ಮಕ್ಕಳು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಾನು ನನ್ನೂರು ಸೊಂಡೆಕೆರೆ ಗ್ರಾಮದ ಮೊದಲ ಗುರು ನರಸಿಂಹಣ್ಣನವರ ಬಳಿ ಖೋಖೋ ಕಲಿತು ನಂತರ ತೆಲಂಗಾಣ, ಓಡಿಶಾ ರಾಜ್ಯಗಳಲ್ಲಿ ಸ್ಪರ್ಧೆಗಳನ್ನು ಎದುರಿಸಿ ಬಂದಿದ್ದೇನೆ. ನನ್ನಂತೆ ಎಲ್ಲಾ ಹಳ್ಳಿ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಿ ಯಶಸ್ಸು ಕಾಣಬೇಕು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಚಂದ್ರಶೇಖರ ಬೆಳಗೆರೆ, ಕಾರ್ಯದರ್ಶಿ ಗಿರಿಜಾ ಎನ್, ಪ್ರಾoಶುಪಾಲ ಷಣ್ಮುಗ ಸುಂದರಂ, ಶಾಲೆಯ ಶಿಕ್ಷಣ ಸಂಯೋಜಕಿ ರಾಜೇಶ್ವರಿ, ರೂಪ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.