ಇತರ ಇಲಾಖೆಗಳ ಅಧಿಕಾರಿಗಳಿಗೆ ಹೋಲಿಸಿದರೆ ಪೊಲೀಸರ ಕರ್ತವ್ಯದ ಸ್ವರೂಪ ಭಿನ್ನವಾಗಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕರ್ತವ್ಯದ ಸ್ಥಳದಲ್ಲಿ ಹಾಜರಿರಬೇಕು. ಕೆಲವೊಮ್ಮೆ ನಿಯೋಜಿತ ಅವಧಿ ಮೀರಿಯೂ ಕೆಲಸ ಮಾಡಬೇಕಾಗುತ್ತದೆ.

ಕೊಪ್ಪಳ: ನಿತ್ಯದ ಕೆಲಸದ ಒತ್ತಡದ ನಡುವೆಯೂ ಪೊಲೀಸರು ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ದೇಹದ ಸದೃಢತೆ ಕಾಪಾಡಿಕೊಳ್ಳಲು ನಿರಂತರ ವ್ಯಾಯಾಮ ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ವರ್ಷವೂ ಪೊಲೀಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದೆ. ಪೊಲೀಸರ ದೈಹಿಕ ಸದೃಢತೆ ಕಂಡು ನಾನೂ ನನ್ನ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಜನನದಿಂದ ಮರಣದವರೆಗೂ ಸಾರ್ವಜನಿಕ ಸೇವೆಯಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಹಬ್ಬ- ಹರಿದಿನಗಳು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಬಂದೋಬಸ್ತ್ ಸೇರಿದಂತೆ ಹಲವು ಸಂದರ್ಭಗಳಲ್ಲಿ ಪೊಲೀಸರು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂದರು.

ಇತರ ಇಲಾಖೆಗಳ ಅಧಿಕಾರಿಗಳಿಗೆ ಹೋಲಿಸಿದರೆ ಪೊಲೀಸರ ಕರ್ತವ್ಯದ ಸ್ವರೂಪ ಭಿನ್ನವಾಗಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕರ್ತವ್ಯದ ಸ್ಥಳದಲ್ಲಿ ಹಾಜರಿರಬೇಕು. ಕೆಲವೊಮ್ಮೆ ನಿಯೋಜಿತ ಅವಧಿ ಮೀರಿಯೂ ಕೆಲಸ ಮಾಡಬೇಕಾಗುತ್ತದೆ. ಕುಟುಂಬ ಜೀವನಕ್ಕಿಂತ ಸಾರ್ವಜನಿಕ ಸೇವೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುವ ಪೊಲೀಸರಿಗೆ ವಾರ್ಷಿಕ ಕ್ರೀಡಾಕೂಟ ಆಯೋಜಿಸಿರುವುದು ಸಂತೋಷದ ಸಂಗತಿ. ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಆಟದ ಭರದಲ್ಲಿ ಗಾಯ ಮಾಡಿಕೊಳ್ಳದೆ, ಕ್ರೀಡಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಮಾತನಾಡಿ, ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವು ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಹಬ್ಬದ ವಾತಾವರಣ ನಿರ್ಮಿಸುತ್ತದೆ. ಎಲ್ಲರೂ ಸಂತೋಷದಿಂದ ಪಾಲ್ಗೊಳ್ಳಬೇಕು. ಕ್ರೀಡಾಕೂಟಕ್ಕೆ ಮಾತ್ರ ದೈಹಿಕ ಸದೃಢತೆ ಸೀಮಿತವಾಗದೆ, ನಿತ್ಯದ ಜೀವನದಲ್ಲಿಯೂ ವ್ಯಾಯಾಮ ರೂಢಿಸಿಕೊಳ್ಳಬೇಕು. ಇಂದಿನ ಜೀವನಶೈಲಿಯಿಂದ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಕೆಲಸದ ಒತ್ತಡದ ನಡುವೆಯೂ ಯೋಗ, ವಾಕಿಂಗ್, ರನ್ನಿಂಗ್‌ಗೆ ಆದ್ಯತೆ ನೀಡಬೇಕು. ಪ್ರತಿದಿನ ಕನಿಷ್ಠ ಅರ್ಧ ಗಂಟೆಯನ್ನಾದರೂ ಆರೋಗ್ಯಕ್ಕಾಗಿ ಮೀಸಲಿಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಮಾತನಾಡಿ, ಪ್ರತಿಯೊಬ್ಬರೂ ಕ್ರೀಡಾ ಮನೋಭಾವದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಆಟದ ಉತ್ಸಾಹದಲ್ಲಿ ದೇಹಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಹೆಚ್ಚುವರಿ ಎಸ್ಪಿ ಹೇಮಂತಕುಮಾರ ಮಾತನಾಡಿದರು. ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಆಗಮಿಸಿತು. ಬಳಿಕ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ರನ್ನಿಂಗ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.

ಪೊಲೀಸರ ವಿರುದ್ಧ ಗೆದ್ದ ಪತ್ರಕರ್ತರು: ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ತಂಡಗಳ ನಡುವೆ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು. ಮೊದಲ ಪಂದ್ಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಂಡ ಗೆಲುವು ಸಾಧಿಸಿತು. ಬಳಿಕ ಪೊಲೀಸ್ ತಂಡದ ವಿರುದ್ಧವೂ ಸೆಣಸಿದ ಪತ್ರಕರ್ತರ ತಂಡ ಗೆಲುವಿನ ನಗೆ ಬೀರಿತು. ಪೊಲೀಸರ ವಿರುದ್ಧ ಪತ್ರಕರ್ತರು ಜಯಭೇರಿ ಬಾರಿಸಿದ್ದು ವಿಶೇಷವಾಗಿತ್ತು.