ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರರಂಗಭೂಮಿಯ ಸಾಂಸ್ಕೃತಿಕ ಜಗತ್ತಿನಲ್ಲಿ ಪಿಚ್ಚಳ್ಳಿ ಶ್ರೀನಿವಾಸ್ ತಮ್ಮದೇಯಾದ ಛಾಪನ್ನು ಮೂಡಿಸಿ, ಜನರ ಪ್ರೀತಿಯೆಂಬ ದೊಡ್ಡ ಪ್ರಶಸ್ತಿಗೆ ಭಾಜನವಾಗಿರುವ ಕಲಾವಿದ ಹಾಗೂ ಗಾಯಕ ಎಂದು ಚಿತ್ರನಟಿ ಉಮಾಶ್ರೀ ತಿಳಿಸಿದರು.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾನ ಗಾರುಡಿಗ ಸಂಗೀತ ನಿರ್ದೇಶಕ, ರಂಗಕರ್ಮಿ ಪಿಚ್ಚಳ್ಳಿ ಶ್ರೀನಿವಾಸ್‌ರಿಗೆ ಹೋರಾಟದ ಹಾಡುಗಾರರ ಬಳಗದಿಂದ ಅಭಿನಂದನಾ ಸಮಾರಂಭವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಸಮಾನತೆಯ ಪ್ರತಿಪಾದಕ
ಸಾಂಸ್ಕೃತಿಕ ಕ್ಷೇತ್ರದ ಜನರ ಜೊತೆಗೆ ನಮಗಾಗಿ ಅವರು, ಅವರಿಗಾಗಿ ನಾವು ಎಂಬಂತೆ ಬೆಸೆದುಕೊಂಡಿರುವ ಪಿಚ್ಚಳ್ಳಿ ಶ್ರೀನಿವಾಸ್‌ರಿಗೆ ರಾಜ್ಯೋತ್ಸವ, ಅಕಾಡೆಮಿ ಹೀಗೆ ಅನೇಕ ಪ್ರಶಸ್ತಿಗಳು ದೊರಕಿದ್ದರೂ ಜನರ ಪ್ರೀತಿ ಪ್ರಶಸ್ತಿಯೇ ದೊಡ್ಡದು ಎಂಬುದು ತಮ್ಮ ಭಾವನೆ. ಜಾನಪದ ಅಭಿಲಾಷೆಯೊಂದಿಗೆ ನಟನಾಗಲು ಬಂದು ರಂಗಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿ ಹೆಸರು ಮಾಡಿರುವ ಪಿಚ್ಚಳ್ಳಿಗೆ ಅನೇಕ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯ ಜೊತೆಗೆ ಉಳ್ಳವರ ಮುಂದೆ ಇಲ್ಲದವರು ಸೆಟೆದುನಿಂತು ಸಮನಾಗಿ ಬದುಕು ಸಾಗಿಸಬೇಕೆಂಬ ಹೋರಾಟ ಧ್ಯೇಯವನ್ನು ಹೊಂದಿರುವ ಕಲಾವಿದ ಎಂದು ಬಣ್ಣಿಸಿದರು.ನೇರವಾದ ನುಡಿ, ಜನಪರ ಚಿಂತನೆ, ಹೋರಾಟ ಅವರನ್ನು ಎಲ್ಲರೂ ಪ್ರೀತಿಸುವಂತೆ ಮಾಡಿದೆ, ಅವರನ್ನು ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವ ಸಂದರ್ಭದಲ್ಲಿ ನಾವೆಲ್ಲರೂ ಹರಸಲು ಬಂದಿಲ್ಲ, ಸಂಭ್ರಮಿಸಲು ಬಂದಿದ್ದೇವೆ. ಕೇವಲ ಕನ್ನಡ ಮತ್ತು ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯ ಮತ್ತು ಭಾಷೆಗಳ ಜನರ ನಡುವೆಯೂ ಪಿಚ್ಚಳ್ಳಿ ಶ್ರೀನಿವಾಸ್ ಜನಪ್ರಿಯತೆಯನ್ನು ಸಾರಿರುವುದು ಅವರ ಕಲಾ ಸಹೃದಯರಾಗಿದ್ದಾರೆಂದರು.
ಸಮುದಾಯದ ಗಾಯಕಅಧ್ಯಕ್ಷತೆ ವಹಿಸಿದ್ದ ಸಾಹಿತಿ ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಪಿಚ್ಚಳ್ಳಿ ಶ್ರೀನಿವಾಸ್ ಹೋರಾಟದ ಹಾಡುಗಾರನಾಗಿ ಬಂದು ಸಮುದಾಯದ ಮೂಲಕ ಗಾಯಕರಾಗಿ ರೂಪುಗೊಂಡು, ರಂಗಾಯಣದ ನಂಟಿನಿಂದ ರಂಗಕರ್ಮಿಯಾಗಿ ಸಾಗಿ ಬಂದಿದ್ದಾರೆ, ಮೈಕೆಲ್ ಜಾಕ್ಸನ್‌ರಂತೆ ವಿಶ್ವದ ಸಾಂಸ್ಕೃತಿಕ ಲೋಕದಲ್ಲಿ ಮೇರು ಶಿಖರವೇರವಾಗಿ ಪಿಚ್ಚಳ್ಳಿ ಶ್ರೀನಿವಾಸ್‌ರನ್ನು ತಾವು ಕಾಣಬೇಕಾಗಿದೆ, ಈ ಕುರಿತು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.ಚಿತ್ರನಟ ಮಂಡ್ಯ ರಮೇಶ್ ಮಾತನಾಡಿ, ಕೋಲಾರ ಜಿಲ್ಲೆಯ ಕುಗ್ರಾಮ ಪಿಚ್ಚಳ್ಳಿಯಿಂದ ದಲಿತ ಹೋರಾಟದ ಹಿನ್ನೆಲೆಯಿಂದ ರಂಗಾಯಣಕ್ಕೆ ನೂರಾರು ಅಭ್ಯರ್ಥಿಗಳ ನಡುವೆ ಆಯ್ಕೆಗೊಂಡು ಬಿ.ವಿ.ಕಾರಂತರ ಗರಡಿಯಲ್ಲಿ ಪಳಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಿರುವ ಪಿಚ್ಚಳ್ಳಿ ಶ್ರೀನಿವಾಸ್ ತಮಗೆ ಆಪ್ತ ರಂಗಕರ್ಮಿ ಸ್ನೇಹಿತ ಎಂದು ವಿವರಿಸಿದರು.ಸಾಂಸ್ಕೃತಿಕ ಲೋಕದ ಬೆಳಕು
ಜಿಲ್ಲಾ ಕಾಂಗ್ರೆಸ್ ಮತ್ತು ಸಾರಂಗರಂಗ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ಪಿಚ್ಚಳ್ಳಿ ಶ್ರೀನಿವಾಸ್ ಕೋಲಾರ ಜಿಲ್ಲೆಯಿಂದ ಹೊರಹೊಮ್ಮಿ ಕಲೆ ಗಾಯನ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಬೆಳಗುತ್ತಿದ್ದಾರೆ ಎಂದರು. ಕರ್ನಾಟಕ ದಲಿತ ಕ್ರಿಯಾ ಸಮಿತಿ ರಾಜ್ಯ ಸಂಚಾಲಕ ಡಾ.ಎಂ.ಚಂದ್ರಶೇಖರ್ ಮಾತನಾಡಿ, ಪಿಚ್ಚಳ್ಳಿ ಹಾಗೂ ತಾವು ಹೇಗೆ ಬಾಲ್ಯದಿಂದಲೂ ಹೋರಾಟದ ಮೂಲಕ ಒಂದಾಗಿರುವ ಸಂಗತಿಗಳನ್ನು ನೆನಪಿಸಿಕೊಂಡರು. ನಾಟಕರಾದ ಕುಪ್ಪಣ್ಣ ಮಾತನಾಡಿ, ಪಿಚ್ಚಳ್ಳಿ ಶ್ರೀನಿವಾಸ್‌ರಿಗೆ ಕೇವಲ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗೌರವ ಸಿಗಬೇಕಿದೆ ಎಂದು ಆಶಿಸಿದರು.ಪಿಚ್ಚಳ್ಳಿ ಜತೆ ಸಂವಾದ
ಕಾರ್ಯಕ್ರಮದ ಭಾಗವಾಗಿ ಬಹುಮುಖ ಪ್ರತಿಭೆಯ ಪಿಚ್ಚಳ್ಳಿ, ದೇಸಿ ಗಾಯನ ಸತ್ವದ ವಿವಿಧ ಆಯಾಮಗಳು ಮತ್ತು ಪಿಚ್ಚಳ್ಳಿ, ದಲಿತ ದಲಾ ಮಂಡಳಿ ಹೋರಾಟದ ಹಾಡುಗಳು ಹಾಗೂ ಪಿಚ್ಚಳ್ಳಿ, ರಂಗಭೂಮಿ ಸಂಘಟಕ ಹಾಗೂ ನಟ ನಿರ್ದೇಶಕ ಪಿಚ್ಚಳ್ಳಿ ವಿಷಯಗಳ ಕುರಿತು ಕಾರ್ಯಾಗಾರ ಜರುಗಿತು. ಅಭಿನಂದನಾರ್ಹ ಪಿಚ್ಚಳ್ಳಿ ಶ್ರೀನಿವಾಸ್‌ರೊಂದಿಗೆ ಸಂವಾದ ಕಾರ್ಯಕ್ರಮವು ಜರುಗಿತು.ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಇತರರು ಜಾನಪದ ಗಾನ ಗಾರುಡಿಗ ಪಿಚ್ಚಳ್ಳಿ ಶ್ರೀನಿವಾಸ್‌ರನ್ನು ಅಭಿನಂದಿಸಿದರು. ವಿವಿಧ ಗಾಯಕರಿಂದ ಕ್ರಾಂತಿಗೀತೆಗಳ ಗಾಯನ ನೆರವೇರಿತು. ಪಿಚ್ಚಳ್ಳಿ ಶ್ರೀನಿವಾಸ್ ಸಂಗ್ರಹಿಸಿರುವ ಹೋರಾಟದ ಹಾಡುಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಇಂದುದರ ಹೋನ್ನಾಪುರ, ಎನ್. ಮುನಿಸ್ವಾಮಿ ಸಿ.ಎಂ. ಮುನಿಯಪ್ಪ ಇದ್ದರು.