ಸಾರಾಂಶ
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವವನ್ನು ನೀಡುವುದು ಅವಶ್ಯಕ
ಕನ್ನಡಪ್ರಭ ವಾರ್ತೆ ಮೈಸೂರು
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಂದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೀಡಿದ ಪ್ರಾಮುಖ್ಯತೆಯಿಂದ ಇಂದಿಗೂ ಲಕ್ಷಾಂತರ ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆಯುವಂತಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ತಿಳಿಸಿದರು.ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಾಂಸ್ಕೃತಿಕ ವೇದಿಕೆ, ಎನ್ಎಸ್ಎಸ್, ಎನ್.ಸಿ.ಸಿ, ಯುವ ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರಕ್ಕೆ ಮೈಸೂರು ಮಹಾರಾಜರ ಕೊಡುಗೆ ಅಪಾರವಾದದ್ದು. ಜ್ಞಾನವನ್ನು ಹೊಂದುವಲ್ಲಿ ಅವರು ಅಂದು ಹಾಕಿದ ಅಡಿಪಾಯ ಮಹತ್ತರವಾದದ್ದು ಎಂದು ಹೇಳಿದರು.ನಟ ನಿರಂಜನ್ ದೇಶಪಾಂಡೆ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವವನ್ನು ನೀಡುವುದು ಅವಶ್ಯಕ. ಕನಸು ಕಂಡರೆ ಸಾಲದು, ಅದನ್ನು ನನಸಾಗಿಸಲು ಪ್ರತಿನಿತ್ಯ ಶ್ರಮಿಸುವುದು ಅಗತ್ಯ. ಕನ್ನಡ ಭಾಷೆಯನ್ನು ನಾವು ಬಳಸಿದರೆ ಸಾಕು. ಅದು ಬೆಳೆಯುತ್ತದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಎಂ. ಬಸವರಾಜು ಮಾತನಾಡಿ, ವಿದ್ಯಾರ್ಥಿಗಳ ಸರ್ತೋಮುಖ ಅಭಿವೃದ್ಧಿ ಆಗುವುದು ಪಠ್ಯೇತರ ಚಟುವಟಿಕೆಗಳಿಂದ. ಅಂತಹ ವೇದಿಕೆಯನ್ನು ವಿದ್ಯಾರ್ಥಿನಿಯರಿಗೆ ಸೃಷ್ಟಿ ಮಾಡುವುದು ವಿದ್ಯಾಸಂಸ್ಥೆಗಳ ಜವಾಬ್ದಾರಿ ಎಂದರು.ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಮಾತನಾಡಿ, ವಿದ್ಯಾರ್ಥಿನಿಯರು ಶಿಕ್ಷಣಕ್ಕೆ ಮಹತ್ವವನ್ನು ನೀಡುವುದು ಅತ್ಯವಶ್ಯಕ. ಸಮ ಸಮಾಜವನ್ನು ಸೃಷ್ಟಿ ಮಾಡುವಲ್ಲಿ ಸರ್ವರು ಶಿಕ್ಷಣವನ್ನು ಪಡೆಯುವಂತಹ ಸ್ಥಿತಿ ನಿರ್ಮಾಣವಾಗುವಲ್ಲಿ ಡಾ. ಅಂಬೇಡ್ಕರ್ ಅವರ ಪಾತ್ರ ಮಹತ್ವದ್ದು ಎಂದು ಹೇಳಿದರು.ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಡಾ.ಬಿ.ಜಿ. ದೊರೆಸ್ವಾಮಿ, ಖಜಾಂಚಿ ಅಶ್ವಿನಿ, ಸಹ ಕಾರ್ಯದರ್ಶಿ ಡಾ.ಡಿ. ಸುಂದರಿ,ವಿದ್ಯಾರ್ಥಿ ಅಧ್ಯಕ್ಷೆ ಎನ್. ಅನುಷಾ, ವಿದ್ಯಾರ್ಥಿ ಕಾರ್ಯದರ್ಶಿ ಎಂ.ಎಸ್. ಹರ್ಷಿತಾ ಮೊದಲಾದವರು ಇದ್ದರು.