ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲವೆಂಬ ಹೇಳಿಕೆ, ಸ್ಪಷ್ಟನೆ ನೀಡುತ್ತಿರುವ ರಾಜ್ಯ ಸರ್ಕಾರ 40 ಸಾವಿರ ಸರ್ಕಾರಿ ಶಾಲೆಗಳ ಪಟ್ಟಿ ಬಿಡುಗಡೆ ಮಾಡಿ, ಕೆಪಿಎಸ್‌-ಮ್ಯಾಗ್ನೆಟ್ ಯೋಜನೆ ಕರಾಳತೆಯಲ್ಲಿ ಸರ್ಕಾರಿ ಶಾಲೆಗಳು, ಬಿಸಿಯೂಟ ತಯಾರಕರು, ಶಿಕ್ಷಕರು ಕಳೆದುಹೋಗುವಂತೆ ಮಾಡಲು ಹೊರಟಿದೆ. ಸರ್ಕಾರದ ಈ ನಡೆ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಲು ಚಿಂತನೆ ನಡೆಸಲಾಗಿದೆ ಎಂದು ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಪೂಜಾ ನಂದಿಹಳ್ಳಿ ಆರೋಪಿಸಿದ್ದಾರೆ.

- ಸರ್ಕಾರಿ ಶಾಲೆಗಳ ವಿಲೀನ, ಬಂದ್‌ ವಿರುದ್ಧ ಜಾಗೃತಿಗೂ ಕ್ರಮ: ಎಐಡಿಎಸ್‌ಒ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲವೆಂಬ ಹೇಳಿಕೆ, ಸ್ಪಷ್ಟನೆ ನೀಡುತ್ತಿರುವ ರಾಜ್ಯ ಸರ್ಕಾರ 40 ಸಾವಿರ ಸರ್ಕಾರಿ ಶಾಲೆಗಳ ಪಟ್ಟಿ ಬಿಡುಗಡೆ ಮಾಡಿ, ಕೆಪಿಎಸ್‌-ಮ್ಯಾಗ್ನೆಟ್ ಯೋಜನೆ ಕರಾಳತೆಯಲ್ಲಿ ಸರ್ಕಾರಿ ಶಾಲೆಗಳು, ಬಿಸಿಯೂಟ ತಯಾರಕರು, ಶಿಕ್ಷಕರು ಕಳೆದುಹೋಗುವಂತೆ ಮಾಡಲು ಹೊರಟಿದೆ. ಸರ್ಕಾರದ ಈ ನಡೆ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಲು ಚಿಂತನೆ ನಡೆಸಲಾಗಿದೆ ಎಂದು ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಪೂಜಾ ನಂದಿಹಳ್ಳಿ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲವೆಂಬ ಮಾತನ್ನೇ ಪುನರುಚ್ಛರಿಸುತ್ತಿರುವ ಸರ್ಕಾರ ಎಡಿಬಿಯಿಂದ ₹2500 ಕೋಟಿ ಸಾಲ ಪಡೆದು, ರಾಜ್ಯದಲ್ಲಿ 700 ಕೆಪಿಸಿ ಮ್ಯಾಗ್ನೆಟ್ ಶಾಲೆ ಮಾಡಲು ಮುಂದಾಗಿದೆ. ಇದು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ. ಸರ್ಕಾರದ ದಾಖಲೆಗಳ ಆಧಾರದಲ್ಲಿ ಪರಿಶೀಲಿಸಿ, ವಾಸ್ತವಾಂಶವನ್ನು ರಾಜ್ಯದ ಜನರ ಮುಂದಿಡಲು ಎಐಡಿಎಸ್‌ಒ ಮುಂದಾಗಿದೆ ಎಂದರು.

ಕೆಪಿಎಸ್‌ ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಮುಚ್ಚಲು ಸರ್ಕಾರ ಮುಂದಾಗಿದೆ. ಗ್ರಾ.ಪಂ.ಗೊಂದರಂತೆ ರಾಜ್ಯದಲ್ಲಿ 6 ಸಾವಿರ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಮೊದಲ ಹಂತದಲ್ಲಿ ರಾಜ್ಯದ 800 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳೆಂದು ಗುರುತಿಸಿದೆ. ಗಣಿಬಾಧಿತ ಜಿಲ್ಲೆಗಳಲ್ಲಿ 100, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 200 ಹಾಗೂ ಇತರೆ ಭಾಗದಲ್ಲಿ 500 ಶಾಲೆಗಳು ಅ.15ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಆದೇಶಿಸಲಾಗಿದೆ ಎಂದರು.

ಪ್ರಾಯೋಗಿಕ ಯೋಜನೆಯಾಗಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾ. ಹೊಂಗನೂರಿನ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲಲೆಯೆಂದು ಗುರುತಿಸಿದೆ. ಹೊಂಗನೂರಿನಿಂದ 6 ಕಿಮೀ ವ್ಯಾಪ್ತಿಯೊಳಗಿನ 77 ಮಕ್ಕಳಿರುವ ಹೊಡಿಕೆ ಹೊಸಹಳ್ಳಿ ಸಪ್ರಾ ಶಾಲೆ, 82 ಮಕ್ಕಳಿರುವ ಕನ್ನಿದೊಡ್ಡಿ ಶಾಲೆ, 31 ಮಕ್ಕಳಿರುವ ಅಮ್ಮಳ್ಳಿ ದೊಡ್ಡಿಶಾಲೆ, 100 ಮಕ್ಕಳಿರುವ ಸಂತೆಮೊಗೇನಹಳ್ಳಿ ಶಾಲೆ, 20 ಮಕ್ಕಳ ಮೊಗೇನಹಳ್ಳಿ ದೊಡ್ಡಿ ಶಾಲೆ, 80 ಮಕ್ಕಳ ಸುಣ್ಣಘಟ್ಟ ಶಾಲೆಗಳನ್ನು ಹೊಂಗನೂರಿನ ಕೆಪಿಎಸ್‌ಗೆ ತುರ್ತಾಗಿ ವಿಲೀನಗೊಳಿಸಿ, ಕ್ರಮ ಕೈಗೊಳ್ಳಲು ಕಳೆದ ಅ.23ಕ್ಕೆ ಆದೇಶ ಹೊರಡಿಸಿದೆ ಎಂದು ಹೇಳಿದರು.

ವಿಲೀನದ ನೆಪದಲ್ಲಿ ಮುಚ್ಚುವ ಶಾಲಾ ಕಟ್ಟಡಗಳನ್ನು ಇತರೆ ಕೆಲಸಗಳಿಗೆ ವಿನಿಯೋಗಿಸಲು ಸರ್ಕಾರ ಮುಂದಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಮಸೂದೆ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದರ ವಿರುದ್ಧ ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟಕ್ಕೆ ಮುಂದಾಗುವಂತೆ ಸಂಘಟನೆಯು ರಾಜ್ಯವ್ಯಾಪಿ ಮಕ್ಕಳು, ಪಾಲಕರು, ಆಯಾ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳನ್ನು ಸಂಘಟಿಸುವ ಮೂಲಕ ದೊಡ್ಡಮಟ್ಟದ ಹೋರಾಟಕ್ಕೆ ಸಜ್ಜಾಗುತ್ತಿದೆ. ಹೈಕೋರ್ಟ್‌ನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವಂತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸುವ ಬಗ್ಗೆಯೂ ಆಲೋಚನೆ ನಡೆಸಲಾಗಿದೆ ಎಂದು ಪೂಜಾ ನಂದಿಹಳ್ಳಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಮುಖಂಡರಾದ ಎಚ್.ಡಿ.ಗಂಗಾಧರ, ಶಿವಕುಮಾರ ಇತರರು ಇದ್ದರು.

- - -

(ಬಾಕ್ಸ್‌) * ಸರ್ಕಾರಿ ಪಿಯು ಕಾಲೇಜುಗಳಿಗೂ ಸರ್ಕಾರ ಕಂಟಕಕೇವಲ ಶಾಲೆಗಳಷ್ಟೇ ಅಲ್ಲ, ರಾಜ್ಯದ ಸಾವಿರಾರು ಸರ್ಕಾರಿ ಪಿಯು ಕಾಲೇಜುಗಳೂ ಮುಚ್ಚುವ, ಶಾಲಾ-ಕಾಲೇಜು ಶಿಕ್ಷಕರು, ಉಪನ್ಯಾಸಕರು ಉದ್ಯೋಗ ಕಳೆದುಕೊಳ್ಳುವ, ಬಿಸಿಯೂಟ ತಯಾರಕ ಮಹಿಳೆಯರನ್ನು ಬೀದಿಪಾಲು ಮಾಡುವ ಹುನ್ನಾರ ಇದಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹೇಳುವ ಮಾತು ಸತ್ಯಕ್ಕೆ ದೂರವಾಗಿದೆ. ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಯಾವ್ಯಾವ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆ ಮಾಡಬೇಕೆಂಬ ಬಗ್ಗೆ, ಯಾವ ಶಾಲೆಗೆ ಯಾವ ಶಾಲೆಗಳನ್ನು ಸೇರಿಸಬೇಕೆಂಬ ಪಟ್ಟಿಯನ್ನೂ ಸರ್ಕಾರ ಸಿದ್ಧಪಡಿಸಿಕೊಂಡಿದೆ ಎಂದು ಪೂಜಾ ನಂದಿಹಳ್ಳಿ ಆಕ್ರೋಶ ಹೊರಹಾಕಿದರು.

- - -

-26ಕೆಡಿವಿಜಿ5:

ದಾವಣಗೆರೆಯಲ್ಲಿ ಬುಧವಾರ ಎಐಡಿಎಸ್ಒ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.