ನಗರದ ವಿವಿಧೆಡೆ ರಸ್ತೆ ಬದಿಯಲ್ಲಿ ಸಾರ್ವಜನಿಕರು ಎಸೆಯುವ ಕಸ ವಿಲೇವಾರಿಯಾಗದೆ ಬ್ಲ್ಯಾಕ್‌ ಸ್ಪಾಟ್‌ಗಳು ದೊಡ್ಡದಾಗುತ್ತಿದ್ದು, ಕಸದ ಸಮಸ್ಯೆ ದಿನೇ ದಿನೇ ತೀವ್ರವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ವಿವಿಧೆಡೆ ರಸ್ತೆ ಬದಿಯಲ್ಲಿ ಸಾರ್ವಜನಿಕರು ಎಸೆಯುವ ಕಸ ವಿಲೇವಾರಿಯಾಗದೆ ಬ್ಲ್ಯಾಕ್‌ ಸ್ಪಾಟ್‌ಗಳು ದೊಡ್ಡದಾಗುತ್ತಿದ್ದು, ಕಸದ ಸಮಸ್ಯೆ ದಿನೇ ದಿನೇ ತೀವ್ರವಾಗುತ್ತಿದೆ.ಬನಶಂಕರಿಯ ಶಾಖಾಂಬರಿ ನಗರ 4ನೇ ಮೇನ್ 9ನೇ ಕ್ರಾಸ್‌ನಲ್ಲಿ ಭಾರಿ ಪ್ರಮಾಣದ ಕಸದ ರಾಶಿ ರಸ್ತೆ ಬದಿ ಮತ್ತು ಫುಟ್‌ಪಾತ್ ಮೇಲೆ ಬಿದ್ದಿದೆ. ಕಳೆದ ಕೆಲವು ದಿನಗಳಿಂದ ಕಸವನ್ನು ಸಾಗಿಸದ ಕಾರಣ ಕಸದ ರಾಶಿ ಹೆಚ್ಚಾಗುತ್ತಿದೆ. ಇದರಿಂದ ರಸ್ತೆಯಲ್ಲಿ ಸಾರ್ವಜನಿಕರು, ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಬೀದಿ ನಾಯಿಗಳು, ದನಗಳು ಮೇಯುವ ತಾಣವಾಗಿ ಪರಿವರ್ತನೆಯಾಗುತ್ತಿದೆ.

ಜಯನಗರ ವಿಧಾನಸಭಾ ಕ್ಷೇತ್ರದ ಹಳೇ ಗುರಪ್ಪನಪಾಳ್ಯದ ವಿವಿಧೆಡೆಯು ರಸ್ತೆ ಬದಿಯಲ್ಲಿ ಬಿದ್ದಿರುವ ಕಸ ವಿಲೇವಾರಿಯಾಗದೆ ರಾಶಿ ರಾಶಿಯಾಗಿ ಒಂದೆಡೆ ಉಳಿಯುತ್ತಿದೆ. ಕಸ ತೆರವುಗೊಳಿಸುವಂತೆ ಕೋರಿ ಸಾರ್ವಜನಿಕರು ಫಲಕವನ್ನು ಹಿಡಿದುಕೊಂಡು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಬ್ದುಲ್ ಕಲಾಂ ವಾರ್ಡ್‌ನ 10-15 ಸ್ಥಳಗಳಲ್ಲಿ ಕಸ ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಕಸವನ್ನು ಸಾಗಿಸದ ಕಾರಣ ನೊಣ, ಸೊಳ್ಳೆ, ಹುಳುಗಳ ಕಾಟ ಹೆಚ್ಚಾಗಿದೆ. ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಆಗುತ್ತಿದೆ. ಹೀಗಾಗಿ, ಜೆಸಿಬಿ ಬ‍ಳಸಿ ಲಾರಿಯಲ್ಲಿ ಕಸವನ್ನು ಸಾಗಿಸಲು ನಾವೇ ವ್ಯವಸ್ಥೆ ಮಾಡಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ.

ಪಾಲಿಕೆ-ಗುತ್ತಿಗೆದಾರರ ಸಂಘರ್ಷ: ಎಲ್ಲೆಂದರಲ್ಲೇ ಬಿಸಾಡುವ ಕಸ ಮತ್ತು ವಿಂಗಡಣೆ ಮಾಡದೇ ಇರುವ ಕಸವನ್ನು ಸಾಗಿಸಲು ಗುತ್ತಿಗೆದಾರರ ನಿರಾಕರಿಸಿದ್ದರು. ಹೀಗಾಗಿ, ಒಂದು ತಿಂಗಳ ಹಿಂದೆಯೂ ಇದೇ ಸಮಸ್ಯೆ ಎದುರಾಗಿತ್ತು. ನಗರದ ಅನೇಕ ಕಡೆಗಳಲ್ಲಿ ರಸ್ತೆ ಬದಿ ಕಸ ಹಾಗೆಯೇ ಬಿದ್ದಿತ್ತು.

ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ನೀಡಿದರೆ ಅದನ್ನು ಸಂಸ್ಕರಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕಸ ವಿಲೇವಾರಿ ಘಟಕಗಳಲ್ಲಿ ಸಮಸ್ಯೆಯಾಗುತ್ತದೆ. ಡಂಪಿಂಗ್ ಯಾರ್ಡ್‌ಗಳಿಗೆ ಸುರಿಯಬೇಕಾಗುತ್ತದೆ. ಇನ್ನು ಮಿಶ್ರ ಕಸವನ್ನು ಸಾಗಣೆ ಮಾಡುವ ವೇಳೆ ಪೌರ ಕಾರ್ಮಿಕರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಹೀಗಾಗಿ, ವಿಂಗಡಿಸಿದ ಕಸ ನೀಡುವಂತೆ ಸಾರ್ವಜನಿಕರಲ್ಲಿ ಸರಿಯಾಗಿ ಜಾಗೃತಿ ಮೂಡಿಸಿ ಎಂದು ಗುತ್ತಿಗೆದಾರರು ಘನ ತ್ಯಾಜ್ಯ ನಿರ್ವಹಣೆ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯೆಗೆ ಲಭ್ಯವಿಲ್ಲ: ನಗರದ ವಿವಿಧೆಡೆ ಕಸ ವಿಲೇವಾರಿಯಾಗದ ಕುರಿತು ಪ್ರತಿಕ್ರಿಯೆಗಾಗಿ ಹಲವು ಬಾರಿ ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ಕಂಪನಿಯ ಸಿಇಒ ಕರೀಗೌಡ ಅವರನ್ನು ಸಂಪರ್ಕಿಸಿದಾಗ, ಅವರ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.

ಯುವಕರಿಂದ ಸ್ವಯಂ ಸೇವೆತಂತ್ರಜ್ಞಾನ ನಗರವಾಗಿರುವ ಬೆಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರಗಳು ಪ್ರಸ್ತಾಪಿಸಿದ್ದರೂ ಸ್ಥಳೀಯ ಸಂಸ್ಥೆಗಳು ಕಸದ ವಿಚಾರದಲ್ಲಿ ವಿಫಲವಾಗುತ್ತಿವೆ. ಬೆಳಗ್ಗೆ ಯುವಕರು ಭಾನುವಾರ ಆಟವಾಡುತ್ತಾ ಕಾಲ ಕಳೆಯುವುದನ್ನು ಬಿಟ್ಟು ಸ್ವಯಂ ಸೇವಕರಾಗಿ ಸ್ವಚ್ಛತಾ ಸಲಕರಣೆ ಹಿಡಿದುಕೊಂಡು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಕಿರಣ್ ಕುಮಾರ್ ಎಂಬುವರು ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ನಾಗರಿಕರ ಜವಾಬ್ದಾರಿ: ಕಸದ ವಿಚಾರದಲ್ಲಿ ನಾಗರಿಕರು ಕೂಡ ಜವಾಬ್ದಾರಿಯಿಂದ ವರ್ತಿಸಬೇಕು. ಎಲ್ಲೆಂದರಲ್ಲೇ ಕಸವನ್ನು ಬಿಸಾಡುವ ಬದಲು ಕಸ ಸಾಗಿಸುವ ವಾಹನಗಳ ಸಿಬ್ಬಂದಿಗೆ ನೀಡಬೇಕು. ಕಸದ ವಿಚಾರದಲ್ಲಿ ನಾಗರಿಕರ ಜವಾಬ್ದಾರಿಯು ಇದೆ ಎಂದು ಕುಮಾರ್ ಎಂಬುವರು ಪೋಸ್ಟ್ ಮಾಡಿದ್ದಾರೆ.