ಸಾರ್ವಜನಿಕರ ರಕ್ಷಣೆಗೆ ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ವಾಸಿಸುವ ಈ ವಸತಿ ಗೃಹಗಳ ಪರಿಸರವೇ ಇಂದು ನರಕಸದೃಶವಾಗಿ ಮಾರ್ಪಟ್ಟಿರುವುದು ದುರದೃಷ್ಟಕರವಾಗಿದೆ.

ಕನ್ನಡಪ್ರಭ ವಾರ್ತೆ, ಬಂಗಾರಪೇಟೆ

ನಗರದ ಪೊಲೀಸ್ ವಸತಿ ಗೃಹಗಳ ಬಳಿ ದಿನೇ ದಿನೇ ಕಸದ ರಾಶಿ ಹೆಚ್ಚಾಗುತ್ತಿದ್ದರೂ, ಪುರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛಗೊಳಿಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಇಡೀ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳ ಕಾಟ ವಿಪರೀತವಾಗಿದೆ ಎಂದು ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾರ್ವಜನಿಕರ ರಕ್ಷಣೆಗೆ ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ವಾಸಿಸುವ ಈ ವಸತಿ ಗೃಹಗಳ ಪರಿಸರವೇ ಇಂದು ನರಕಸದೃಶವಾಗಿ ಮಾರ್ಪಟ್ಟಿರುವುದು ದುರದೃಷ್ಟಕರವಾಗಿದೆ.ದಿನಗಟ್ಟಲೆ ಬಿದ್ದಿರುವ ಹಸಿ ಮತ್ತು ಒಣ ಕಸ ಕೊಳೆತು ನಾರುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ಇಲ್ಲಿನ ಸೊಳ್ಳೆಗಳ ಕಾಟದಿಂದಾಗಿ ಮಕ್ಕಳು ಹಾಗೂ ವೃದ್ಧರು ಡೆಂಘಿ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾದಂತಹ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಭೀತಿ ಎದುರಾಗಿದೆ. ವಸತಿ ಗೃಹಗಳ ಆವರಣದಲ್ಲಿ ಬೀಸುವ ತೀವ್ರ ದುರ್ವಾಸನೆಯಿಂದಾಗಿ ನಿವಾಸಿಗಳು ಮನೆಯ ಕಿಟಕಿ ಹಾಗೂ ಬಾಗಿಲುಗಳನ್ನು ಸದಾ ಮುಚ್ಚಿಕೊಂಡೇ ಕಾಲ ಕಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಸ್ವಚ್ಛ ಭಾರತ್ ಅಭಿಯಾನದ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುವ ಪುರಸಭೆ, ತನ್ನದೇ ನಗರದ ಪ್ರಮುಖ ವಸತಿ ಪ್ರದೇಶದ ಕಡೆಗೆ ಕಣ್ಣು ಹಾಯಿಸದಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹಲವು ಬಾರಿ ಮೌಖಿಕವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಪೊಲೀಸ್ ಕ್ವಾರ್ಟರ್ಸ್ ಬಳಿ ಸುರಿದಿರುವ ಕಸವನ್ನು ಪುರಸಭೆ ಅಧಿಕಾರಿಗಳು ತಕ್ಷಣವೇ ತೆರವುಗೊಳಿಸಬೇಕು. ಕೇವಲ ಕಸ ತೆಗೆಯುವುದಷ್ಟೇ ಅಲ್ಲದೆ, ಸೊಳ್ಳೆಗಳ ನಿಯಂತ್ರಣಕ್ಕೆ ಆ ಪ್ರದೇಶದಲ್ಲಿ ತಕ್ಷಣವೇ ಫಾಗಿಂಗ್ ಮಾಡಬೇಕು ಮತ್ತು ಜಿಟಿಜಿಟಿ ಪೌಡರ್ ಸಿಂಪಡಿಸಿ ಪರಿಸರವನ್ನು ಸ್ಯಾನಿಟೈಸ್ ಮಾಡಬೇಕು, ಮಳೆಗಾಲ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಕಸ ಹೀಗೆಯೇ ಬಿದ್ದಿದ್ದರೆ ಪರಿಸ್ಥಿತಿ ಕೈಮೀರಬಹುದು. ಇನ್ನಾದರೂ ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳು ಹಾಗೂ ಪುರಸಭೆ ಆಡಳಿತ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ನಿವಾಸಿಗಳು ಆಗ್ರಹಿಸಿದರು.

ಫೋಟೋ...211ಕೆಬಿಪಿಟಿ.1.

ಬಂಗಾರಪೇಟೆ ನಗರದ ಪೊಲೀಸ್ ವಸತಿ ಗೃಹಗಳ ಮುಂದೆ ಕಸದ ರಾಶಿ.