ಪುರಿ ಜಗನ್ನಾಥನ ಸನ್ನಿಧಿಗೆ ಹುಬ್ಬಳ್ಳಿ ಭಕ್ತರ ಧಾರ್ಮಿಕ ಯಾತ್ರೆ

| Published : Nov 23 2024, 12:32 AM IST

ಪುರಿ ಜಗನ್ನಾಥನ ಸನ್ನಿಧಿಗೆ ಹುಬ್ಬಳ್ಳಿ ಭಕ್ತರ ಧಾರ್ಮಿಕ ಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಯಾತ್ರೆಯಲ್ಲಿ ವಜ್ರ ಎನ್ನುವ ಎಳೆಯ ಬಾಲಕಿ ಸೇರಿದಂತೆ 78 ವರ್ಷದ ವಯೋವೃದ್ಧರೂ ಇದ್ದರು. ಅದರಲ್ಲೂ ನಿತ್ಯ ಬಿಡುವಿಲ್ಲದೇ ತಮ್ಮ ಕರ್ತವ್ಯದಲ್ಲಿ ತೊಡಗುವ ಹೆಸರಾಂತ ವೈದ್ಯರು, ಹಿರಿಯ ಪತ್ರಕರ್ತರು, ಪ್ರಾಧ್ಯಾಪಕರು, ಉದ್ಯಮಿಗಳು, ವಕೀಲರು, ಕಲಾವಿದರು ಇದ್ದರು.

ಹುಬ್ಬಳ್ಳಿ:

ಆಧುನಿಕ ಜೀವನದ ಭರಾಟೆಗೆ ಸಿಲುಕಿ ನಗರವಾಸಿಗಳಲ್ಲಿ ಧಾರ್ಮಿಕತೆ ಕುಸಿಯುತ್ತಿದೆ ಎನ್ನುವ ಅಪವಾದದ ಮಧ್ಯೆ ಹುಬ್ಬಳ್ಳಿಯ ಮಹಿಳೆಯರು, ಪುರುಷರು ಸೇರಿದಂತೆ ಬರೋಬ್ಬರಿ 123 ಜನ ಭಕ್ತರು ಒಡಿಶಾ ರಾಜ್ಯದ ಪುರಿ ಜಗನ್ನಾಥನ ಸನ್ನಿಧಿಗೆ ಯಾತ್ರೆ ಕೈಕೊಂಡು ಯಶಸ್ವಿಗೊಳಿಸುವ ಮೂಲಕ ಆ ಅಪವಾದವನ್ನು ಹುಸಿಗೊಳಿಸಿದ್ದಾರೆ.

ಇಂಥದೊಂದು ಬೃಹತ್‌ ಧಾರ್ಮಿಕ ಯಾತ್ರೆ ಕೈಗೂಡಿದ್ದು ಇಲ್ಲಿನ ಗೀತಾ-ಶಿವಯೋಗಿ ಗದ್ದಗಿಮಠ ದಂಪತಿಗಳ ಹರಕೆಯಿಂದಾಗಿ ಎನ್ನುವುದು ವಿಶೇಷ. ಲೈಯನ್ಸ್‌ ಕ್ಲಬ್‌ ಆಫ್‌ ಹುಬ್ಬಳ್ಳಿ ಪರಿವಾರದ ಸಹಯೋಗದಲ್ಲಿ ಗದ್ದಗಿಮಠ ಕುಟುಂಬ ಎಲ್ಲ ಭಾರವನ್ನು ಹೊತ್ತುಕೊಂಡು ಪುರಿ ಜಗನ್ನಾಥನ ದರ್ಶನ ಮಾಡಿಸಿ ಧನ್ಯತೆ ಮೆರೆದಿದೆ.

ಅಚ್ಚರಿಯೆಂದರೆ ಈ ಯಾತ್ರೆಯಲ್ಲಿ ವಜ್ರ ಎನ್ನುವ ಎಳೆಯ ಬಾಲಕಿ ಸೇರಿದಂತೆ 78 ವರ್ಷದ ವಯೋವೃದ್ಧರೂ ಇದ್ದರು. ಅದರಲ್ಲೂ ನಿತ್ಯ ಬಿಡುವಿಲ್ಲದೇ ತಮ್ಮ ಕರ್ತವ್ಯದಲ್ಲಿ ತೊಡಗುವ ಹೆಸರಾಂತ ವೈದ್ಯರು, ಹಿರಿಯ ಪತ್ರಕರ್ತರು, ಪ್ರಾಧ್ಯಾಪಕರು, ಉದ್ಯಮಿಗಳು, ವಕೀಲರು, ಕಲಾವಿದರು ಇದ್ದರು. ವಿಭಿನ್ನ, ವಿಶೇಷ ವೃತ್ತಿಯಲ್ಲಿದ್ದ ಇವರೆಲ್ಲ ತಮ್ಮ ಹಮ್ಮು-ಬಿಮ್ಮು ಬದಿಗಿಟ್ಟು ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತಿದ್ದರಿಂದ ನಾಲ್ಕು ದಿನಗಳ ಈ ಯಾತ್ರೆ ಅತ್ಯಂತ ಸಂಭ್ರಮ, ಸಂತಸದಿಂದ ಕೈಗೂಡಿತು.

ಹೀಗಿತ್ತು ಯಾತ್ರೆಯ ಸಂಭ್ರಮ:

2007ರಲ್ಲಿ ಶಿವಯೋಗಿ ಗದ್ದಗಿಮಠ ಅವರು ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿನ ಅಕ್ಕಕೋಟೆಯ ಮಹಾರಾಜರ ದರ್ಶನಕ್ಕೆ ಹೋಗಿದ್ದರು. ಅಲ್ಲಿ ಪೂಜೆ ಮಾಡಿಸಿದ ಬಳಿಕ ಮಹಾರಾಜರ ಜೀವನ ಚರಿತ್ರೆ ಖರೀದಿಸಿ ತಂದಿದ್ದರು. ವಾಪಸ್‌ ಬಂದ ಬಳಿಕ ಯಾವತ್ತೋ ವಿಜಯವಾಡಕ್ಕೆ ಹೋಗುವಾಗ ರೈಲಿನಲ್ಲಿ ಆ ಪುಸ್ತಕ ಓದುತ್ತಿದ್ದಾಗ ಅದರಲ್ಲಿ..ಮಹಾರಾಜರು ಪುರಿ ಜಗನ್ನಾಥ ದರ್ಶನಕ್ಕೆ ಹೋದಾಗ ಜನಜಂಗುಳಿಯಲ್ಲಿ ವೃದ್ಧೆಯೊಬ್ಬಳು ಕಳೆದುಕೊಂಡಿದ್ದನ್ನು ಆಕೆಯ ಪತಿ ಅತ್ಯಂತ ವ್ಯಾಕುಲತೆಯಿಂದ ನನ್ನ ಪತ್ನಿ ಕಳೆದುಹೋಗಿದ್ದಾಳೆ, ಯಾರಾದರೂ ಹುಡುಕಿಕೊಡಿ ಎಂದು ಗೋಗರೆಯುತ್ತಾನೆ. ಇದನ್ನು ಕಂಡ ಮಹಾರಾಜರು ಆ ವೃದ್ಧೆ ತಾವಿದ್ದಲ್ಲಿಗೆ ಬರುವಂತೆ ಮಾಡುತ್ತಾರೆ. ಇದು ಶಿವಯೋಗಿ ಮನದಲ್ಲಿ ಒಮ್ಮೆಯಾದರೂ ಪುರಿ ಜಗನ್ನಾಥನ ದರ್ಶನ ಮಾಡಬೇಕು ಎನ್ನುವ ಆಸೆ ಹುಟ್ಟಿಸುತ್ತದೆ. ಇದನ್ನು ಪತ್ನಿ ಗೀತಾ ಅವರೊಂದಿಗೆ ಹಂಚಿಕೊಂಡು ಇಬ್ಬರೂ ಸಂಕಲ್ಪ ಮಾಡುತ್ತಾರೆ.

ಬಳಿಕ ಈ ಸಂಗತಿಯನ್ನು ಉದ್ಯಮಿ ಮಹೇಂದ್ರ ಸಿಂಘಿ ಅವರಲ್ಲಿ ನಿವೇದಿಸಿಕೊಂಡಾಗ ತಕ್ಷಣ ಕಾರ್ಯಾಚರಣೆಗೆ ಇಳಿದ ಸಿಂಘಿ, ತಮ್ಮ ಲಯನ್ಸ್ ಪರಿವಾರ, ಹಿರಿಯ ಅಧಿಕಾರಿಗಳು, ರೈಲ್ವೆ ಮಂತ್ರಿಗಳು, ಹಿರಿಯ ಸಚಿವರು, ಶಾಸಕರು, ಉದ್ಯಮಿಗಳ ಸ್ನೇಹ ಬಳಸಿಕೊಂಡು 123 ಜನರಿಗೆ ಅಮರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸೀಟ್‌ ಬುಕ್‌, ವಾಸ್ತವ್ಯಕ್ಕೆ ಹೊಟೇಲ್‌, ಜಗನ್ನಾಥನ ಸನ್ನಿಧಿಯಲ್ಲಿ ವಿಶೇಷ ದರ್ಶನ, ತಿಂಡಿ, ಊಟೋಪಚಾರ ಎಲ್ಲವನ್ನು ಸಜ್ಜುಗೊಳಿಸಿದರು.

ಕಳೆದ ಮೂರು ತಿಂಗಳಿಂದ ನಡೆದ ಈ ಸಿದ್ಧತೆಯಲ್ಲಿ ಒಮ್ಮೆ ಈ ತಂಡ ಪುರಿ ವರೆಗೆ ಹೋಗಿ, ಕಣ್ಣಾರೆ ನೋಡಿ ಖಚಿತಪಡಿಸಿಕೊಂಡು ಬಂದಿತ್ತು. ಬಸವರಾಜ ಗದ್ದಗಿಮಠ, ಮಣಿಕಂಠ ಗದ್ದಗಿಮಠ ಅವರ ಯುವ ತಂಡ ಊಟ, ನಿದ್ರೆ ಮರೆತು ಯಾತ್ರಿಕರ ಸೇವೆಯಲ್ಲಿ ನಿರತವಾಗಿತ್ತು.

ಹಾಗಾಗಿ ನ. 17ರ ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿಯಿಂದ ಹೊರಟ ಅಮರಾವತಿ ಎಕ್ಸ್‌ಪ್ರೆಸ್‌ ಮರುದಿನ 4 ಗಂಟೆಗೆ ಭುವನೇಶ್ವರ ತಲುಪಿತು. ನ. 20ರ ಬೆಳಗ್ಗೆ 6 ಗಂಟೆಗೆ ಭುವನೇಶ್ವರ ಬಿಟ್ಟ ಅದೇ ಅಮರಾವತಿ ಎಕ್ಸ್‌ಪ್ರೆಸ್ ಮರುದಿನ ಬೆಳಗ್ಗೆ 9.30ಕ್ಕೆ ಹುಬ್ಬಳ್ಳಿ ತಲುಪಿತು. 56 ಗಂಟೆಗಳ ರೈಲು ಪ್ರಯಾಣ ಸಣ್ಣ ಮಾತೇನಲ್ಲ. ಇದನ್ನೆಲ್ಲ ಸಾಧ್ಯವಾಗಿಸಿದ್ದು ಸಿಂಘಿ-ಶಿವಯೋಗಿ ಗೆಳೆಯರ ಬಳಗ.

2013-ಶಿರಡಿ (100 ಜನ), 2014- ತಿರುಪತಿ (240 ಜನ), 2022-ಶಿರಡಿ (100 ಜನ), 2024-ಪುರಿ (123 ಜನ) ಯಾತ್ರೆಯನ್ನು ಮಾಡಿಸಿದ ಹಿರಿಮೆ ಈ ಬಳಗಕ್ಕಿದೆ.

ಹಳಿಯ ಮೇಲೆ ಹಾಡಿನ ಲಹರಿ:

ಅಮರಾವತಿ ಎಕ್ಸ್‌ಪ್ರೆಸ್‌ ನಾಗಾಲೋಟದಲ್ಲಿ ಓಡುತ್ತಿದ್ದರೆ ಒಳಗಿದ್ದ ಯಾತ್ರಾರ್ಥಿಗಳು ಜಗನ್ನಾಥನಿಗೆ ಜೈಕಾರ, ಭಕ್ತಿಸ್ಮರಣೆಯ ಜತೆಗೆ ತಮ್ಮಿಷ್ಟದ ಹಾಡಿಗೆ ದನಿಗೂಡಿಸಿದ್ದು ವಿಶೇಷವಾಗಿತ್ತು. ಸಂಗಮೇಶ ಮೆನಸಿಣಕಾಯಿ, ವಿಜಯ ಮದರಕಂಡಿ, ಗೀತಾ ಗದ್ದಗಿಮಠ, ಚನ್ನವೀರ ಮುಂಗರವಾಡಿ, ಗುರು ರಡ್ಡಿ ಹಾಗೂ ಇತರರು ಕರೋಕೆ ಆ್ಯಪ್‌ ಬಳಸಿ ಕನ್ನಡ, ಹಿಂದಿ ಗೀತೆಗಳನ್ನು ಹಾಡುವ ಮೂಲಕ ಯಾತ್ರಿಕರನ್ನು ರಂಜಿಸಿದರು. ಹಳಿಯ ಮೇಲೆ ವಾಗ್ದೇವಿಯ ಗಾನಯಾಣವೇ ಸಾಗಿದ ಅನುಭವ ಅದಾಗಿತ್ತು.

ಈ ಯಾತ್ರೆಯಲ್ಲಿ ಡಾ. ಸಂಜಯ ಗಣಶೇಖರ, ಡಾ. ಸಚಿನ್‌ ಹೊಸಕಟ್ಟಿ, ಅಭಯಕುಮಾರ ಸೂಜಿ, ಜಯಂತಿಲಾಲ ಚವ್ಹಾಣ, ಸುಭಾಷ್ ಡಂಕ, ಮೋಹನ ಹೆಗಡೆ, ಗಣಪತಿ ಗಂಗೊಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದು ಯಾತ್ರೆಯ ಹಿರಿಮೆ ಹೆಚ್ಚಿಸಿತ್ತು.

ಅದರಂತೆ ಸುಶಾಂತ ಸಾವು, ಸುಭಾಂಸು ಪಾಡಿ ಅವರ ಸಹಕಾರ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತದೆ.