ಬೆಣ್ಣಿಹಳ್ಳಕ್ಕೆ ಹೆಚ್ಚಿದ ನೀರಿನ ಪ್ರಮಾಣ

| Published : Jun 08 2024, 12:34 AM IST

ಸಾರಾಂಶ

ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ನವಲಗುಂದ ತಾಲೂಕಿನ ಬೆಣ್ಣಿಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇನ್ನು ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪುರದಲ್ಲಿನ ದೇವಸ್ಥಾನಕ್ಕೆ ನುಗ್ಗಿದ ನೀರು ಇಳಿಮುಖವಾಗಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಶುಕ್ರವಾರ ಮಳೆ ಕೊಂಚ ಬಿಡುವು ನೀಡಿದೆ. ಆದರೆ ಮೋಡ ಕವಿದ ವಾತಾವರಣ ಮಾತ್ರ ಮುಂದುವರಿದಿತ್ತು. ಬೆಳಗಾವಿ ಜಿಲ್ಲೆಯ ವಿವಿಧೆಡೆ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಬೆಣ್ಣಿಹಳ್ಳಕ್ಕೆ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಕಳೆದ ಎರಡ್ಮೂರು ದಿನಗಳಿಂದ ಮಧ್ಯಾಹ್ನದ ನಂತರ ಸುರಿಯುತ್ತಿದ್ದ ಮಳೆ ಶುಕ್ರವಾರ ಕೊಂಚ ಬಿಡುವು ನೀಡಿತ್ತು. ಆದರೆ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಆವರಿಸಿತ್ತು.

ಅತ್ತ ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ನವಲಗುಂದ ತಾಲೂಕಿನ ಬೆಣ್ಣಿಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇನ್ನು ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪುರದಲ್ಲಿನ ದೇವಸ್ಥಾನಕ್ಕೆ ನುಗ್ಗಿದ ನೀರು ಇಳಿಮುಖವಾಗಿದೆ.

ಈ ನಡುವೆ ನವಲಗುಂದ ತಾಲೂಕಿನಲ್ಲಿ ಶುಕ್ರವಾರ ಮಳೆಯಾಗಿಲ್ಲ. ಆದರೂ ನಿನ್ನೆ, ಮೊನ್ನೆ ಸುರಿದ ಮಳೆಯಿಂದ ಈ ವರೆಗೆ 31 ಮನೆಗಳು ಭಾಗಶಃ ಕುಸಿದಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಣ್ಣಿನ ಮನೆಗಳಲ್ಲಿ ವಾಸವಾಗಿರುವವರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ತಾಲೂಕಾಡಳಿತ ಸೂಚನೆ ನೀಡಿದೆ.

31 ಮನೆಗಳಿಗೆ ಭಾಗಶಃ ಹಾನಿ:

ನವಲಗುಂದತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ತಾಲೂಕಿನಲ್ಲಿ 31 ಮನೆಗಳು ಭಾಗಶಃ ಧರೆಗುರುಳಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಾಲೂಕಿನ ಶಿರಕೋಳದಲ್ಲಿ 13, ಜಾವೂರ 10, ಹನಸಿ 6, ಆರೇಕುರಹಟ್ಟಿ ಮತ್ತು ಅಮರಗೋಳ ಗ್ರಾಮಗಳಲ್ಲಿ ತಲಾ 1 ಮನೆಗಳು ಭಾಗಶಃ ಬಿದ್ದಿವೆ ಎಂದು ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗೆಣ್ಣವರ ಮಾಹಿತಿ ನೀಡಿದ್ದಾರೆ.