ಸಾರಾಂಶ
ಪಿಂಜಾರ ಸಂಘದಿಂದ ಜಿಲ್ಲಾ ಮಟ್ಟದ ಕ್ರಿಕೆಟ್
ಕನ್ನಡಪ್ರಭ ವಾರ್ತೆ ಹೊಸಕೋಟೆಪಿಂಜಾರ ಸಮುದಾಯದ ಸಮಾಜದ ಮುಖ್ಯವಾಹಿನಿಗೆ ಬರಬೇಕಿದ್ದು ಈ ನಿಟ್ಟಿನಲ್ಲಿ ಕ್ರೀಡೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪರಸ್ಪರ ಬಾಂಧವ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಪಿಂಜಾರ ಸಮುದಾಯದ ರಾಜ್ಯ ಸಮಿತಿ ಸದಸ್ಯ ಜೆ.ಎಂ.ಹಸೇನ್ ತಿಳಿಸಿದರು .
ಹೊಸಕೋಟೆ ನಗರದಲ್ಲಿ ಪಿಂಜಾರ ಸಮುದಾಯದ ವತಿಯಿಂದ ಆಯೋಜನೆ ಮಾಡಲಾಗಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ವಿಜೇತ ತಂಡಗಳಿಗೆ ಬಹುಮಾನ ಹಾಗೂ ಟ್ರೋಫಿ ವಿತರಿಸಿ ಮಾತನಾಡಿದರು.ಪಿಂಜಾರ ಸಮುದಾಯ ಇದೇ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ದು ಸಮುದಾಯದ ಯುವಕರು ಪರಸ್ಪರ ಒಂದೆಡೆ ಸೇರಿ ಬಾಂಧವ್ಯ ವೃದ್ಧಿಸುವುದರ ಜತೆಗೆ ಸಮುದಾಯದ ಸಮಾಜದ ಮುಖ್ಯವಾಹಿನಿಗೆ ಬರಲು ಕೂಡ ಸಾಧ್ಯವಾಗುತ್ತದೆ. ಆದ್ದರಿಂದ ಈ ಕ್ರೀಡೆಯಲ್ಲಿ ಸೋಲು ಗೆಲುವನ್ನು ಲೆಕ್ಕಿಸದೆ ಪರಸ್ಪರ ಸಂತೋಷದಿಂದ ಸ್ನೇಹಮಯಿಯಾಗಿ ಭಾಗವಹಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಈ ಕ್ರೀಡೆಯನ್ನು ರಾಜ್ಯ ಮಟ್ಟಕ್ಕೆ ಸಮುದಾಯದ ವತಿಯಿಂದ ವಿಸ್ತರಿಸಬೇಕು. ಪ್ರಮುಖವಾಗಿ ಪಿಂಜಾರ ಸಮುದಾಯ ರಾಜ್ಯದಲ್ಲಿ ಅಲ್ಪಸಂಖ್ಯಾತವಾಗಿದ್ದು ಅವರಿಗೆ ಅಗತ್ಯ ಸ್ಥಾನಮಾನವನ್ನು ಸರ್ಕಾರಗಳು ಕೊಟ್ಟು ಸಮಾಜದ ವಿವಿಧ ಸ್ಥರಗಳಲ್ಲಿ ಗುರ್ತಿಸಿಕೊಳ್ಳಲು ಸಹಕಾರ ನೀಡಬೆಕು ಎಂದರು.ಉದ್ಯಮಿ ಹಾಗೂ ಸಮಾಜ ಸೇವಕ ಸೋಮಶೇಖರ್ ಮಾತನಾಡಿ, ಪಿಂಜಾರ ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು ಸಂಘಟನೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಸರ್ಕಾರದ ಸವಲತ್ತುಗಳನ್ನು ಸಹ ಪಡೆಯಲು ಮುಂದಡಿ ಇಡಬೇಕು ಎಂದರು.
ಟೌನ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಲಚಂದ್ರ, ಸಮಾಜ ಸೇವಕ ಶ್ರೀನಿವಾಸ್, ಪಿಂಜಾರ ಸಮುದಾಯದ ಮುಖಂಡ ಸಲೀಂ, ನೌಶಾದ್, ನೂರುಲ್ಲಾ, ಮುಸ್ತಫ, ಸಮೀರ್ ಸೇರಿ ಸಮುದಾಯದ ಎಲ್ಲಾ ಮುಖಂಡರು ಹಾಜರಿದ್ದರು.