ಗುಲಾಬಿ ಮಾರ್ಗದ ಮೆಟ್ರೋ ಡೆಡ್‌ಲೈನ್ ಮತ್ತೆ ಮುಂದಕ್ಕೆ : ಮಾರ್ಚ್‌ ಬದಲು ಮೇ ತಿಂಗಳಲ್ಲಿ ಆರಂಭ

| N/A | Published : Oct 16 2025, 02:00 AM IST / Updated: Oct 16 2025, 06:11 AM IST

Namma Metro Fares to Rise
ಗುಲಾಬಿ ಮಾರ್ಗದ ಮೆಟ್ರೋ ಡೆಡ್‌ಲೈನ್ ಮತ್ತೆ ಮುಂದಕ್ಕೆ : ಮಾರ್ಚ್‌ ಬದಲು ಮೇ ತಿಂಗಳಲ್ಲಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಮೆಟ್ರೋದ ಇತರೆಲ್ಲ ಯೋಜನೆಗಳಂತೆ ಕಾಳೇನ ಅಗ್ರಹಾರ-ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗದ ಡೆಡ್‌ಲೈನ್‌ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ. ಡಿಸೆಂಬರ್‌ನಲ್ಲಿ ಕಾರ್ಯಾಚರಣೆಗೆ ಮುಕ್ತವಾಗಬೇಕಿದ್ದ ಎತ್ತರಿಸಿದ ಮಾರ್ಗವನ್ನು 2026ರ ಮಾರ್ಚ್‌ ಬದಲು ಮೇ ತಿಂಗಳಲ್ಲಿ ಆರಂಭಿಸಲು ಬಿಎಂಆರ್‌ಸಿಎಲ್‌ ಯೋಜಿಸಿದೆ.

 ಬೆಂಗಳೂರು :  ನಮ್ಮ ಮೆಟ್ರೋದ ಇತರೆಲ್ಲ ಯೋಜನೆಗಳಂತೆ ಕಾಳೇನ ಅಗ್ರಹಾರ-ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗದ ಡೆಡ್‌ಲೈನ್‌ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ. ಡಿಸೆಂಬರ್‌ನಲ್ಲಿ ಕಾರ್ಯಾಚರಣೆಗೆ ಮುಕ್ತವಾಗಬೇಕಿದ್ದ ಎತ್ತರಿಸಿದ ಮಾರ್ಗವನ್ನು 2026ರ ಮಾರ್ಚ್‌ ಬದಲು ಮೇ ತಿಂಗಳಲ್ಲಿ ಆರಂಭಿಸಲು ಬಿಎಂಆರ್‌ಸಿಎಲ್‌ ಯೋಜಿಸಿದೆ.

ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮಾರ್ಗ ಎರಡೂವರೆ ವರ್ಷ, ಹಸಿರು ಮಾರ್ಗದ ವಿಸ್ತರಿತ ಭಾಗ ಐದು ವರ್ಷ ವಿಳಂಬವಾಗಿದ್ದವು. ಈಗ ಗುಲಾಬಿ ಮಾರ್ಗದ ಕಾರ್ಯಾಚರಣೆ ಕಾಲಮಿತಿಯೂ ವಿಸ್ತರಣೆ ಆಗುತ್ತಿದೆ ಎಂದು ಮೆಟ್ರೋ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

21 ಕಿಮೀ ಉದ್ದದ ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 7.5ಕಿಮೀ ಎತ್ತರಿಸಿದ (ಎಲಿವೆಟೆಡ್‌) ಭಾಗವಿದೆ. ಡೈರಿ ಸರ್ಕಲ್‌ನಿಂದ ನಾಗವಾರದವರೆಗೆ (13.76ಕಿಮೀ) ಉದ್ದ ಸುರಂಗ ಮಾರ್ಗವಿದೆ. ಈ ಮೊದಲು ಎತ್ತರಿಸಿದ ಮಾರ್ಗವನ್ನು ಮೊದಲು ಇದೇ ವರ್ಷ ಡಿಸೆಂಬರ್‌ಗೆ ಉದ್ಘಾಟಿಸಲು ತೀರ್ಮಾನಿಸಲಾಗಿತ್ತು.

ಗುಲಾಬಿ ಮಾರ್ಗದ ಎತ್ತರಿಸಿದ ಭಾಗ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ ಬೆಂಗಳೂರು, ಜೆಪಿ ನಗರ 4ನೇ ಹಂತ, ಜಯದೇವ ಮತ್ತು ತಾವರೆಕೆರೆ (ಸ್ವಾಗತ್‌ ಕ್ರಾಸ್‌ ರಸ್ತೆ) 6 ನಿಲ್ದಾಣಗಳನ್ನು ಒಳಗೊಂಡಿದೆ. ಕಾಮಗಾರಿ ಮತ್ತು ನಾನಾ ಕಾರಣಗಳಿಂದ ಈ ಗಡುವು 2026ರ ಮಾರ್ಚ್‌ಗೆ ವಿಸ್ತರಣೆಗೊಂಡಿತ್ತು. ಈಗ ಮತ್ತೊಮ್ಮೆ 2026ರ ಮೇ ವರೆಗೆ ವಿಸ್ತರಣೆಯಾಗಿದೆ. 

ಭೂಗತ ಮಾರ್ಗ:

ಡೇರಿ ಸರ್ಕಲ್‌-ನಾಗವಾರದವರೆಗಿನ ಸುರಂಗ ಮಾರ್ಗವನ್ನು 2026ರ ಡಿಸೆಂಬರ್‌ ವೇಳೆಗೆ ತೆರೆಯಲು ಸದ್ಯಕ್ಕೆ ಬಿಎಂಆರ್‌ಸಿಎಲ್‌ ಉದ್ದೇಶಿಸಿದೆ. ಇದು ನಗರದ ಅತ್ಯಂತ ಉದ್ದದ ಭೂಗತ ಮೆಟ್ರೋ ಮಾರ್ಗ ಎನ್ನಿಸಿಕೊಳ್ಳಲಿದೆ. ಆದರೆ, ಈ ಡೆಡ್‌ಲೈನ್‌ ಕೂಡ ವಿಸ್ತರಣೆ ಆಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಹಳದಿ-ಗುಲಾಬಿ ಮೆಟ್ರೋದ ಇಂಟರ್‌ಚೇಂಜ್‌ ಆಗಿ ಜಯದೇವ ಇಂಟರ್‌ಚೇಂಜ್‌, ನೇರಳೆ-ಗುಲಾಬಿ ನಡುವಿನ ಎಂ.ಜಿ.ರಸ್ತೆ ಇಂಟರ್‌ಚೇಂಜ್‌ ಬಳಕೆ ಕೂಡ ವಿಳಂಬವಾಗಲಿದೆ. ಇದಲ್ಲದೆ ಮುಂದೆ ನೀಲಿ ಮಾರ್ಗದಲ್ಲಿ ನಾಗವಾರ, ಕೆಂಪು ಮಾರ್ಗದಲ್ಲಿ ಡೈರಿ ಸರ್ಕಲ್‌ ಹಾಗೂ ಕಿತ್ತಳೆ ಮಾರ್ಗದಲ್ಲಿ ಜೆ.ಪಿ.ನಗರ 4ನೇ ಹಂತ ಇಂಟರ್‌ಚೇಂಜ್‌ ಆಗಲಿವೆ.

4 ಸೆಟ್‌ ರೈಲು ಬೇಕು:

ಗುಲಾಬಿ ಮಾರ್ಗಕ್ಕಾಗಿ ನಾಲ್ಕು ರೈಲು ಸೆಟ್‌ಗಳು ಬೇಕಾಗಬಹುದು. ಬಿಇಎಂಎಲ್‌ ಕಂಪನಿ ಈ ಮಾರ್ಗಕ್ಕೆ ರೈಲುಗಳನ್ನು ಒದಗಿಸಲಿದೆ. 2023ರಲ್ಲಿ ಬಿಇಎಂಎಲ್‌ ಜತೆಗೆ 318 ಮೆಟ್ರೋ ಬೋಗಿಗಳ ನಿರ್ಮಾಣಕ್ಕಾಗಿ ಒಪ್ಪಂದವಾಗಿದ್ದು ಈ ಪೈಕಿ 96 ಬೋಗಿಗಳು (16 ರೈಲುಗಳು) ಗುಲಾಬಿ ಮಾರ್ಗಕ್ಕೆ ನಿಯೋಜನೆ ಆಗಲಿದೆ. ಮೊದಲು ಎತ್ತರಿಸಿದ ಮಾರ್ಗಕ್ಕೆ ಅಗತ್ಯಕ್ಕೆ ಅನುಗುಣವಾಗಿ ರೈಲುಗಳನ್ನು ನಿಯೋಜಿಸಲಾಗುವುದು. ರೈಲುಗಳ ಪರೀಕ್ಷೆ ಮತ್ತು ಅಗತ್ಯ ಅನುಮೋದನೆ ಪಡೆಯಲು ಒಂದೆರಡು ತಿಂಗಳು ಸಮಯ ಬೇಕಾಗಲಿದೆ. ಈ 7 ಕಿಮೀ ಮಾರ್ಗವು 2026ರ ಮೇ ವೇಳೆಗೆ ಕಾರ್ಯಾಚರಣೆಗೆ ಮುಕ್ತಗೊಳ್ಳುವ ನಿರೀಕ್ಷೆಯಿದೆ. ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

Read more Articles on