ಸಾರಾಂಶ
ಗೋಕರ್ಣ: ಅಷ್ಟಮಂಗಲ ಹಲವು ಆಯಾಮಗಳನ್ನು ಒಳಗೊಂಡಿದ್ದು, ಅಷ್ಟಮಂಗಲವು ಜ್ಯೋತಿಷ್ಯದ ಮೇರುಶಿಖರವಿದ್ದಂತೆ. ಇದರ ಸಮಗ್ರ ಫಲ ನಿರೂಪಣೆಗೆ ವಿಶೇಷ ಮಹತ್ವವಿದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು, 55ನೇ ದಿನವಾದ ಶುಕ್ರವಾರ ಕಾಲ ಸರಣಿಯ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡಿದರು.ಶಿಶುವಿನಿಂದ ಲಗ್ನನಿರ್ಣಯ ಮಾಡುವಂಥ ವಿಶೇಷ ಪರಿಕಲ್ಪನೆ ಜ್ಯೋತಿಷ್ಯದಲ್ಲಿದೆ. ದೇವಸ್ಥಾನ ಅಥವಾ ಇತರ ಅತಿದೊಡ್ಡ ವ್ಯವಸ್ಥೆಗಳ ಭವಿಷ್ಯ ಚಿಂತನೆ ನಡೆಸಲು ಇದನ್ನು ಬಳಸಲಾಗುತ್ತದೆ. ಇದಕ್ಕೆ ಅಷ್ಟಮಂಗಲ ಪ್ರಶ್ನೆಯೆಂದು ಹೆಸರು. ಜ್ಯೋತಿಷದ ಮೇರುಶಿಖರ. ಜ್ಯೋತಿಷ್ಯದ ಸಂಪೂರ್ಣ ಜ್ಞಾನ ಅಷ್ಟಮಂಗಲದ ನಿರೂಪಣೆಗೆ ಅಗತ್ಯ ಎಂದರು.ಎಂಟು ಮಂಗಲವಸ್ತುಗಳ ಸಮ್ಮುಖದಲ್ಲಿ ಪ್ರಶ್ನಚಿಂತನ ನಡೆಯುವುದೇ ಅಷ್ಟಮಂಗಲ. ತಾಂಬೂಲ, ಅಕ್ಷತೆ, ಕ್ರಮುಕ, ಧಾರುಭಾಜನ, ಅಂಬರ, ದರ್ಪಣ, ಗ್ರಂಥ, ದೀಪಗಳೇ ಅಷ್ಟಮಂಗಲಗಳು. ಇವುಗಳ ಸಾಕ್ಷಿತ್ವದಲ್ಲಿ ಅಷ್ಟಮಂಗಲ ನಡೆಯುತ್ತದೆ. ಇದು ಶಾಸ್ತ್ರದ ಶಿಖರವಿದ್ದಂತೆ ಎಂದು ಬಣ್ಣಿಸಿದರು.
ಕಾಲದ ವಿಚಾರಕ್ಕೆ ಬಂದರೆ ತಿಥಿ, ವಾರ, ನಕ್ಷತ್ರ, ಯೋಗ, ಕರಣ ಪ್ರಮುಖವಾಗುತ್ತದೆ. ಅಂತೆಯೇ ಪ್ರಶ್ನೆ ಕೇಳಿದ ಜಾಗ ಕೂಡ ಪ್ರಮುಖವಾಗುತ್ತದೆ. ಫಲ ಬಿಡುವ, ಸುಂದರ, ಪುಷ್ಪಗಳಿದ್ದ ಪರಿಸರದಲ್ಲಿ, ಸ್ವರ್ಣರತ್ನಗಳಿದ್ದರೆ ಅದು ಶುಭಸೂಚನೆ. ಮನಸ್ಸಿಗೆ ಸಂತೋಷ ಉಂಟುಮಾಡಿದ್ದರೆ, ಗೋಮಯದಿಂದ ಸಾರಿಸಿದ್ದರೆ, ಸಮತಟ್ಟಾಗಿದ್ದರೆ, ಮಂಗಲಕಾರ್ಯ ನೆರವೇರುವುದಿದ್ದರೆ, ಅದು ಶುಭತ್ವದ ಸೂಚಕ ಎಂದರು.ಶ್ವಾಸಗತಿಯು ಸೂರ್ಯನಾಡಿ, ಚಂದ್ರನಾಡಿ ಮತ್ತು ಅಗ್ನಿನಾಡಿಯನ್ನು ಅವಲಂಬಿಸಿದೆ. ದೈವಜ್ಞನಾದವರು ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಶ್ವಾಸ ಪರೀಕ್ಷೆ ಮಾಡಿಕೊಳ್ಳಬೇಕು. ಇದರಿಂದ ತನ್ನ ಶುಭಾಶುಭವನ್ನು ಕೂಡಾ ತಿಳಿದುಕೊಳ್ಳಬಹುದು ಎಂದರು. ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ಸಾಧನೆ ಮತ್ತು ಸಂಶೋಧನೆಯಾಗುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಅಶೋಕೆಯಲ್ಲಿ ಸೇವಾಸೌಧಕ್ಕೆ ಸಂಪರ್ಕ ಕಲ್ಪಿಸುವ ಶಿಲಾಮಯ ರಾಜಪಥವನ್ನು ಮತ್ತು ಇಕ್ಕೆಲಗಳ ಉದ್ಯಾನವನಗಳ ಅನಾವರಣವನ್ನು ಸ್ವಾತಿ ಭಾಗ್ವತ್ ನೆರವೇರಿಸಿದರು. ಈ ಬಗ್ಗೆ ಪ್ರಸ್ತಾವಿಸಿದ ಶ್ರೀಗಳು, ಶುಕ್ರವಾರ ಅನಾವರಣಗೊಂಡಿರುವ ರಾಜಮಾರ್ಗ ತುಂಬಾ ವಿಶಿಷ್ಟ. ಗುರು- ದೇವರ ಕಡೆಗೆ ಕರೆದೊಯ್ಯುವ ಮಾರ್ಗ. ಗುರುಸನ್ನಿಧಿ, ದೇವ ಸನ್ನಿಧಿಗೆ ಅದು ಭಕ್ತರನ್ನು ಕರೆದೊಯ್ಯುತ್ತದೆ. ಕಲ್ಲು ಮತ್ತು ಹುಲ್ಲಿನಿಂದ ನಿರ್ಮಾಣವಾಗಿರುವಂಥದ್ದು. ಸುಂದರವಾಗಿ ವಿನ್ಯಾಸವಾಗಿದೆ. ಇಕ್ಕೆಲಗಳ ಹಸಿರು ನಂದನವನ ಮನಸ್ಸನ್ನು ವಿಶಾಲಗೊಳಿಸುವಂಥದ್ದು ಮತ್ತು ತಂಪುಗೊಳಿಸುವಂಥದ್ದು. ಇದಕ್ಕೆ ವಿಶೇಷ ಸ್ಥಾನವಿದೆ ಎಂದರು.ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ವಿವಿವಿ ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಕಾರ್ಯದರ್ಶಿ ಜಿ.ಕೆ. ಮಧು, ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ ದೈವಜ್ಞ ಕೇಶವ ಭಟ್ ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರು.