ಪಿಜೆ ಬಡಾವಣೆ 4.13 ಎಕ್ರೆ ಈಗ ಸರ್ಕಾರಿ ಖರಾಬು

| Published : Nov 25 2024, 01:01 AM IST

ಸಾರಾಂಶ

ದಾವಣಗೆರೆ: ದಾವಣಗೆರೆ ಪಿಜೆ ಬಡಾವಣೆಯ 4.13 ಎಕರೆ ವಕ್ಫ್ ಆಸ್ತಿಯಲ್ಲ. ಅದು ಸರ್ಕಾರಿ ಖರಾಬು ಎಂಬುದಾಗಿ ಪಹಣಿಯಲ್ಲಿ ತಿದ್ದುಪಡಿ ಮಾಡಿರುವ ಬೆನ್ನಲ್ಲೇ ನಿಟ್ಟಿಸಿರುವ ಬಿಟ್ಟಿರುವ ಸ್ಥಳೀಯ ನಿವಾಸಿಗಳು ಇದಕ್ಕೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ದಾವಣಗೆರೆ: ದಾವಣಗೆರೆ ಪಿಜೆ ಬಡಾವಣೆಯ 4.13 ಎಕರೆ ವಕ್ಫ್ ಆಸ್ತಿಯಲ್ಲ. ಅದು ಸರ್ಕಾರಿ ಖರಾಬು ಎಂಬುದಾಗಿ ಪಹಣಿಯಲ್ಲಿ ತಿದ್ದುಪಡಿ ಮಾಡಿರುವ ಬೆನ್ನಲ್ಲೇ ನಿಟ್ಟಿಸಿರುವ ಬಿಟ್ಟಿರುವ ಸ್ಥಳೀಯ ನಿವಾಸಿಗಳು ಇದಕ್ಕೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಗರದ ಪಿಜೆ ಬಡಾವಣೆಯ 4.13 ಎಕರೆ ವಕ್ಫ್ ಆಸ್ತಿಯೆಂಬುದಾಗಿ ದಾಖಲೆಯಲ್ಲಿ ಆಗಿದ್ದು, ಅದನ್ನು ಇದೀಗ ವಕ್ಫ್ ಆಸ್ತಿಯಲ್ಲ, ಸರ್ಕಾರಿ ಖರಾಬು ಎಂಬುದಾಗಿ ತಿದ್ದುಪಡಿ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಪ್ರಯತ್ನದ ಫಲವಾಗಿ ಬಡಾವಣೆ ನಿವಾಸಿಗಳ ಮೊಗದಲ್ಲಿ ಇದೀಗ ಮತ್ತೆ ಮಂದಹಾಸವು ಮೂಡಿದಂತಾಗಿದೆ. 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಆಗಿನ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಮೂಲಕ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡು, 2012ರಲ್ಲಿ ಸಿಎಂ ಆಗಿದ್ದ ಡಿ.ವಿ.ಸದಾನಂದಗೌಡರಿಗೆ ವರದಿ ನೀಡಿತ್ತು.

ಇದೇ ಮಾಣಿಪ್ಪಾಡಿ ವರದಿ ಆಧರಿಸಿ, ಸದಾನಂದಗೌಡರು ರಾಜ್ಯದಲ್ಲಿ 27 ಸಾವಿರ ಎಕರೆ ಜಮೀನು ವಕ್ಫ್ ಆಸ್ತಿ ಆಗಿದ್ದು, ಅದನ್ನು ವಾಪಾಸ್ಸು ಪಡೆಯುವ ಹೇಳಿಕೆ ನೀಡಿದ್ದರಿಂದ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಸಹ ಮುಸ್ಲಿಂ ಮುಖಂಡರ ಸಭೆಯಲ್ಲಿ ವಕ್ಫ್ ಆಸ್ತಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ವಾಪಾಸ್ಸು ನೀಡುವುದಾಗಿ ಹೇಳಿದ್ದನ್ನು ಸ್ಮರಿಸಬಹುದು.

ಅದರಂತೆ ದಾವಣಗೆರೆ ಪಿ.ಜೆ.ಬಡಾವಣೆಯ ಪಾಲಿಕೆ ಆಸ್ತಿಯನ್ನು ವಕ್ಫ್ ಆಸ್ತಿಯೆಂದು ಆಗ ಸಿಎಂ ಆಗಿದ್ದ ಸದಾನಂದಗೌಡ ಸೂಚನೆಯಂತೆ ತಿದ್ದುಪಡಿ ಮಾಡಲಾಗಿತ್ತು. ಈ ಬಗ್ಗೆ ಪಿ.ಜೆ.ಬಡಾವಣೆಯ ನಾಗರಿಕರು ತೀವ್ರ ಆತಂಕ ವ್ಯಕ್ತಪಡಿಸಿ, ದಾವಣಗೆರೆ -ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮುಖಾಂತರ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಗಮನಕ್ಕೆ ತಂದ ನಂತರ ಉಸ್ತುವಾರಿ ಸಚಿವರು ಸರ್ಕಾರದೊಂದಿಗೆ ಮಾತನಾಡಿ, ತಿದ್ದುಪಡಿಗೆ ಸೂಚಿಸಿದ್ದರು.

ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ಪ್ರಯತ್ನದ ಫಲವಾಗಿ ಇದೀಗ ಸರ್ಕಾರ ಪಹಣಿ ತಿದ್ದುಪಡಿ ಮಾಡಿದ್ದು, ಪಹಣಿಯಲ್ಲಿ ಸರ್ಕಾರಿ ಖರಾಬು ಜಾಗ ಎಂಬುದಾಗಿ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ಸ್ಥಳೀಯ ನಿವಾಸಿಗಳಾದ ಮಧು ಪವಾರ್, ಸಂದೀಪ್ ಜೈನ್, ನಾಕೋಡ ಸುರೇಶ, ವಿಜಯ ಜೈನ್, ಕಾಸಲ್ ಬದ್ರಿನಾಥ್, ಉತ್ತಮ್ ಜೈನ್, ನಿರಂಜನ ನಿಶಾನಿಮಠ, ಚೈನ್‍ರಾಜ್, ಎಚ್.ವಿ.ರಾಮದಾಸ್, ಪ್ರಭು ಐಗೂರು, ರಾಜು ಭಂಡಾರಿ, ಶ್ರೀಕಾಂತ್ ಬಗರೆ, ಮಹೇಂದ್ರಕುಮಾರ ಸೇರಿದಂತೆ ನಿವಾಸಿಗಳು ಹರ್ಷ ವ್ಯಕ್ತಪಡಿಸಿ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮತ್ತು ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿಯವರನ್ನು ಅಭಿನಂದಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಸೂಚನೆಯಂತೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಪಿಜೆ ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಅಧಿಕಾರಿಗಳು, ಸ್ಥಳೀಯ ನಿವಾಸಿಗಳ ಸಭೆ ನಡೆಸಲಾಗಿತ್ತು. ತಹಸೀಲ್ದಾರ್ ಡಾ.ಎಂ.ಬಿ.ಅಶ್ವಥ್ ಪಹಣಿಯಲ್ಲಿ ಆದ ಲೋಪದ ಬಗ್ಗೆ ಸ್ಥಳೀಯ ನಿವಾಸಿಗಳ ಗಮನಕ್ಕೆ ತಂದಿದ್ದರು. ಅಲ್ಲದೇ, ವಕ್ಫ್ ಮಂಡಳಿ ಸಹ ಪಿ.ಜೆ.ಬಡಾವಣೆ ಜಮೀನು ತನ್ನದಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದರೂ ಸಹ ಬಿಜೆಪಿಯವರು ಗೊಂದಲ ಸೃಷ್ಟಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಪಹಣಿಯ ರಿಸನಂ ಬಗ್ಗೆ ಗೊಂದಲ?!ದಾವಣಗೆರೆ ಪಿಜೆ ಬಡಾವಣೆಯ ರಿ.ಸ.ನಂ.48ರಲ್ಲಿ ಒಟ್ಟು ವಿಸ್ತೀರ್ಣ 70.18 ಎಕರೆ ಜಾಗ ಸರ್ಕಾರಿ ಖರಾಬು, ದಾವಣಗೆರೆ ಸಿಟಿ ಮುನಿಸಿಪಾಲಿಟಿ, ಪಿಜೆ ಬಡಾವಣೆ ಒಳಗೊಂಡಂತೆ ಎಂಬುದಾಗಿ ರೆಕಾರ್ಡ್ ಆಫ್ ರೈಟ್ಸ್‌, ಗೇಣಿ ಮತ್ತು ಪಹಣಿ ಪತ್ರಿಕೆ(ಆರ್‌ಟಿಸಿ) ಫಾರಂ ನಂ.16ರಲ್ಲಿ ನೀಡಲಾಗಿದೆ.

ಒಟ್ಟು 70.18 ಎಕರೆಯಲ್ಲಿ ಸರ್ಕಾರಿ ಖರಾಬು 52.16 ಎಕರೆ, ದಾವಣಗೆರೆ ಸಿಟಿ ಮುನಿಸಿಪಾಲಿಟಿ ಪಿಜೆ ಬಡಾವಣೆ ಒಳಗೊಂಡಂತೆ 18.02 ಎಕರೆ ಎಂಬುದಾಗಿ ಪಹಣಿ ನೀಡಲಾಗಿದೆ. ಈಚೆಗೆ ಪಿಜೆ ಬಡಾವಣೆಯಲ್ಲಿ ತಹಸೀಲ್ದಾರ್ ಕೆಲ ತಾಂತ್ರಿಕ ದೋಷದಿಂದ ಹೀಗಾಗಿದ್ದು, ಅದನ್ನು ಸರಿಪಡಿಸುವ ಭರವಸೆ ನೀಡಿದ್ದರು. ಅದೇ ಭರವಸೆಯಂತೆ ಲೋಪ ಸರಪಡಿಸಿದ್ದರೆ, ಒಳ್ಳೆಯದು. ಈ ಬಗ್ಗೆ ತಹಸೀಲ್ದಾರ್ ಸಹ ಅಧಿಕೃತವಾಗಿ ಘೋಷಿಸಬೇಕು ಎಂಬುದು ಜನರ ಒತ್ತಾಯವೂ ಆಗಿದೆ.