ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ನಗರದ 35 ವಾರ್ಡ್ ಗಳಲ್ಲಿಯೂ ಸ್ವಚ್ಛತೆ ಕಾಪಾಡುವ ಸಲುವಾಗಿ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ವತಿಯಿಂದ ಸ್ವಚ್ಛತೆಗಾಗಿ ಪ್ಲಾಗಥಾನ್ ಕಾರ್ಯಕ್ರಮ ನಡೆಸಲಾಯಿತು.ಇಲ್ಲಿನ ಕುವೆಂಪು ನಗರ ವೃತ್ತದಲ್ಲಿ ಸ್ವಚ್ಛತೆಗಾಗಿ ಪ್ಲಾಗಥಾನ್‌ಗೆ ಜಿಲ್ಲಾ ನ್ಯಾಯಾಧೀಶ ಜಯಂತ್‌ಕುಮಾರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಇಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ. ಇಂತಹ ಪವಿತ್ರ ದಿನದಂದು ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿರುವ ಸ್ವಚ್ಛತೆಗಾಗಿ ಪ್ಲಾಗಥಾನ್ ಉತ್ತಮ ಕಾರ್ಯಕ್ರಮವಾಗಿದೆ. ಪ್ರತಿದಿನ ನಗರದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರನ್ನು ನಾವೆಲ್ಲರೂ ಅಭಿನಂದಿಸಲೇಬೇಕು. ಪೌರ ಕಾರ್ಮಿಕರು ಇಲ್ಲದಿದ್ದರೆ ನಗರದಲ್ಲಿ ನಾವು ನಡೆದಾಡಲು ಕಷ್ಟವಾಗುತ್ತಿತ್ತು ಎಂದರು.ಪ್ರತಿನಿತ್ಯ ಮುಂಜಾನೆಯೇ ಪೌರಕಾರ್ಮಿಕರು ಎಲ್ಲರ ಮನೆ ಬಾಗಿಲಿಗೆ ಹೋಗಿ ಕಸವನ್ನು ಸಂಗ್ರಹಿಸುವುದರ ಜತೆಗೆ ಸ್ವಚ್ಛತೆ ಕಾಪಾಡುತ್ತಾರೆ. ನಾವೆಲ್ಲರೂ ಸೇರಿ ನಗರವನ್ನು ಸ್ವಚ್ಛವಾಗಿಡಲು ಮುಂದಾಗಬೇಕು. ನಗರದ ಸ್ವಚ್ಛತೆ ಕಾಪಾಡುವುದು ಕೇವಲ ಪಾಲಿಕೆಯ ಕೆಲಸವಲ್ಲ. ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ತುಮಕೂರು ನಗರಕ್ಕೆ ಸ್ವಚ್ಛತೆ ಕಾಪಾಡುವುದರಲ್ಲಿ ಪ್ರಥಮ ಬಹುಮಾನ ಬರುವಂತಾಗಲಿ ಎಂದು ಅವರು ಆಶಿಸಿದರು.ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಪ್ರದೀಪ್ ಕುಮಾರ್ ಮಾತನಾಡಿ, ನಮ್ಮ ನಗರವನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳಲು ಪ್ಲಾಗಥಾನ್ ಒಂದು ಸದಾವಕಾಶ. ನಾವೆಲ್ಲಾ ಸೇರಿ ಸ್ವಚ್ಚತೆ ಕಾಪಾಡುವಲ್ಲಿ ತುಮಕೂರನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಗೆ ಸೇರಿಸೋಣ. ಯುವಕರನ್ನು ಸೇರಿಸಿಕೊಂಡು ಬಹಳ ಅದ್ಭುತವಾಗಿ ಈ ಕಾರ್ಯಕ್ರಮ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಮೇಯರ್ ಪ್ರಭಾವತಿ ಸುಧೀಶ್ವರ್ ಮಾತನಾಡಿ, ಪ್ರತಿಯೊಬ್ಬರೂ ನನ್ನ ಊರು ನನ್ನ ಮನೆ ಎಂದು ತಿಳಿದುಕೊಂಡು ನಗರವನ್ನು ಸ್ವಚ್ಚ ಮಾಡಬೇಕು. ಪೌರ ಕಾರ್ಮಿಕರು ಇಲ್ಲ ಅಂದರೆ ನಾವಿಲ್ಲ. ಮುಂಜಾನೆಯೇ ಅವರು ನಗರದ ಸ್ವಚ್ಛತೆ ಕಾಪಾಡುವ ಕಾಯಕದಲ್ಲಿ ನಿರತರಾಗಿರುತ್ತಾರೆ. ಅವರು ಶ್ರಮ ಜೀವಿಗಳು ಎಂದರು.ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಯುವಕರು, ವಿದ್ಯಾರ್ಥಿಗಳು ಶ್ರಮ ವಹಿಸಬೇಕು. ಸ್ವಚ್ಛತೆ ಕಾಪಾಡುವ ಕೆಲಸ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಇದು ನಿರಂತರವಾಗಿರಬೇಕು ಎಂದು ತಿಳಿಸಿದರು.
ಪಾಲಿಕೆ ಉಪಮೇಯರ್ ಟಿ.ಕೆ. ನರಸಿಂಹಮೂರ್ತಿ ಮಾತನಾಡಿ, ತುಮಕೂರು ನಗರದ ಸ್ವಚ್ಛತೆ ಕಾಪಾಡಲು ಆಯುಕ್ತರು ಕೈಗೊಂಡಿರುವ ಈ ಕಾರ್ಯಕ್ರಮ ವಿಶೇಷವಾಗಿದೆ. ಎಲ್ಲರೂ ಸೇರಿ ತುಮಕೂರನ್ನು ಪ್ಲಾಸ್ಟಿಕ್ ಮುಕ್ತ ಮಾಡೋಣ ಎಂದು ಕರೆ ನೀಡಿದರು.ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ಮಾತನಾಡಿ, ಪ್ಲಾಗಥಾನ್ ಪರಿಕಲ್ಪನೆ ಸ್ವೀಡನ್ ದೇಶದಿಂದ ಬಂದಿದೆ. ಜಾಗಿಂಗ್ ಮಾಡುತ್ತಲೇ ಕಸವನ್ನು ತೆಗೆಯುವುದು ಇದರ ಮೂಲ ಉದ್ದೇಶ. ತುಮಕೂರು ಮಹಾನಗರ ಪಾಲಿಕೆ ಮತ್ತು ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛ ಪರಿಸರದ ಬಗ್ಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪೌರ ಕಾರ್ಮಿಕರು ಮುಂಜಾನೆಯಿಂದಲೇ ನಗರದ ಸ್ವಚ್ಛತೆ ಕಾಪಾಡಲು ಶ್ರಮಿಸುತ್ತಾರೆ. ಪೌರ ಕಾರ್ಮಿಕರೊಂದಿಗೆ ನಾವು ಸಹ ಸ್ವಚ್ಛತೆ ಕಾಪಾಡಲು ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.ಸ್ವಚ್ಛತೆ ಕಾಪಾಡುವಲ್ಲಿ ಇಂದೋರ್ ಪ್ರಥಮ ಸ್ಥಾನದಲ್ಲಿದೆ. ಹಾಗೆಯೇ ತುಮಕೂರು ನಗರವನ್ನು ಸಹ ಸ್ವಚ್ಛತೆ ಕಾಪಾಡುವಲ್ಲಿ ಪ್ರಥಮ ಸ್ಥಾನಕ್ಕೆ ತರುವಲ್ಲಿ ನಾವು-ನೀವೆಲ್ಲಾ ಶ್ರಮ ವಹಿಸುವ ಅಗತ್ಯವಿದೆ ಎಂದರು.
ಪ್ಲಾಗಥಾನ್‌ನಲ್ಲಿ ಭಾಗವಹಿಸಲು ನೋಂದಣಿ ಕೂಡ ಮಾಡಲಾಗಿದ್ದು, ಕ್ಯೂಆರ್ ಕೋಡ್ ಮೂಲಕ 540 ಜನ ನೋಂದಣಿ ಮಾಡಿಕೊಂಡಿದ್ದು, 1500 ಜನ ನೇರವಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಸದ್ಯ 35 ವಾರ್ಡ್ ಗಳಲ್ಲೂ ಪ್ಲಾಗಥಾನ್‌ನಲ್ಲಿ ಸುಮಾರು 2500 ಮಂದಿ ಭಾಗವಹಿಸಿದ್ದಾರೆ ಎಂದರು.ಮೊದಲ ಬಾರಿಗೆ ತುಮಕೂರಿನಲ್ಲಿ ಜ. 28 ರಂದು 50 ಸಾವಿರ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಕನ್ನಡ ಅಕ್ಷರಗಳಲ್ಲಿ ತುಮಕೂರು ಎಂದು ಬರೆಯುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಲು ತಯಾರಿ ನಡೆಸಿದ್ದೇವೆ. ಈ ಪ್ಲಾಗಥಾನ್ ಕಾರ್ಯಕ್ರಮದಲ್ಲಿ ಸಂಗ್ರಹಿಸುವ ತ್ಯಾಜ್ಯ ಬಾಟಲಿಗಳನ್ನು ಇದಕ್ಕೆ ಬಳಸಲಾಗುತ್ತದ್ದು, 28 ರಂದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುವ ಕೆಲಸ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಉಪಮೇಯರ್ ಟಿ.ಕೆ. ನರಸಿಂಹಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮಾಜಿ ಮೇಯರ್ ಲಲಿತಾ ರವೀಶ್, ನ್ಯಾ. ನೂರುನ್ನೀಸಾ, ತುಮಕೂರು ವಿವಿ ಕುಲಸಚಿವೆ ನಹೀದಾ ಜಮ್‌ಜಮ್, ಕುವೆಂಪು ನಗರ ಕ್ಷೇಮಾಭಿವೃದ್ಧಿ ಸಂಘದ ಬಸವನಗೌಡ, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಪ್ರದೀಪ್‌ಕುಮಾರ್ ಹಾಗೂ ಕಾಲೇಜುವಿದ್ಯಾರ್ಥಿಗಳು, ಯುವಕರು, ಎನ್‌ಸಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.