110 ಟಿಎಂಸಿ ನೀರು ಸಂಗ್ರಹಕ್ಕೆ ಯೋಜನೆ ರೂಪಿಸಿ: ಸುನಂದಾ ಜಯರಾಂ

| Published : Feb 13 2024, 12:48 AM IST

110 ಟಿಎಂಸಿ ನೀರು ಸಂಗ್ರಹಕ್ಕೆ ಯೋಜನೆ ರೂಪಿಸಿ: ಸುನಂದಾ ಜಯರಾಂ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕಿದ್ದು, ಸರ್ಕಾರ ಶಾಶ್ವತ ಖರೀದಿ ಕೇಂದ್ರಗಳನ್ನು ತೆರೆದು ಎಲ್ಲಾ ರೈತರು ಸುಲಭವಾಗಿ ತಮ್ಮ ಉತ್ಪನ್ನಗಳನ್ನು ಖರೀದಿ ಕೇಂದ್ರಗಳಿಗೆ ಸಾಗಿಸಲು ಬಜೆಟ್‌ನಲ್ಲಿ ಅವಕಾಶ ಮಾಡಿಕೊಡಬೇಕು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಆವರ್ತನಿಧಿಯನ್ನು ಹೆಚ್ಚಿಸಬೇಕು. ಬೆಳೆಗಳನ್ನು ದಾಸ್ತಾನು ಮಾಡಲು ದಾಸ್ತಾನು ಮಳಿಗೆಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯರಾಜ್ಯ ಸರ್ಕಾರ ಫೆ.೧೬ರಂದು ಮಂಡಿಸುತ್ತಿರುವ ರಾಜ್ಯ ಬಜೆಟ್‌ನಲ್ಲಿ ಸಮಸ್ತ ಕರ್ನಾಟಕದ ನೀರಾವರಿ ಅಭಿವೃದ್ಧಿ, ಅಂತರ್ಜಲ ಅಭಿವೃದ್ಧಿ, ವಿದ್ಯುತ್ ಅಭಿವೃದ್ಧಿಗೆ ಶೇ.೩೦ರಷ್ಟು ಅನುದಾನ ಒದಗಿಸಬೇಕು. ಈ ಸಂಬಂಧ ೧ ಲಕ್ಷ ಕೋಟಿ ರು. ಹಣ ಘೋಷಿಸಬೇಕು ಎಂದು ರಾಜ್ಯ ರೈತಸಂಘದ ಮುಖಂಡೆ ಸುನಂದಾ ಜಯರಾಂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾವೇರಿ ನದಿ ನೀರು ನ್ಯಾಯ ಮಂಡಳಿ ಕರ್ನಾಟಕದ ಕಾವೇರಿ ಕಣಿವೆ ಪ್ರದೇಶದಲ್ಲಿ ೧೮.೮ ಲಕ್ಷ ಹೆಕ್ಟೇರ್‌ಗೆ ನೀರಾವರಿ ಪ್ರದೇಶವನ್ನು ಹೆಚ್ಚಿಸಿಕೊಳ್ಳಲು ಅನುಮತಿ ನೀಡಿದೆ. ಪ್ರಸ್ತುತ ೧೧ ಲಕ್ಷ ಎಕರೆ ಮಾತ್ರ ನೀರಾವರಿಗೆ ಒಳಪಟ್ಟಿದೆ. ಇನ್ನೂ ೭.೮ ಲಕ್ಷ ಎಕರೆಗೆ ನೀರಾವರಿಯನ್ನು ವಿಸ್ತರಿಸುವಂತೆ ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ನ್ಯಾಯ ಮಂಡಳಿ ಕರ್ನಾಟಕಕ್ಕೆ ೨೮೪ ಟಿಎಂಸಿ ನೀರನ್ನು ಬಳಸುವುದಕ್ಕೆ ಅನುಮತಿಸಿದೆ. ೨೮೪ ಟಿಎಂಸಿಯಲ್ಲಿ ೧೭೪ ಟಿಎಂಸಿ ನೀರು ಮಾತ್ರ ಬಳಕೆಯಾಗುತ್ತಿದ್ದು, ಉಳಿದ ೧೧೦ ಟಿಎಂಸಿ ನೀರು ಬಳಕೆಯಾಗುತ್ತಿಲ್ಲ. ಈ ನೀರು ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿದುಹೋಗುತ್ತಿದೆ. ಇದರಿಂದ ಕರ್ನಾಟಕಕ್ಕೆ ಭವಿಷ್ಯದಲ್ಲಿ ಅಪಾಯ ಎದುರಾಗುವ ಆತಂಕವಿದೆ ಎಂದು ಎಚ್ಚರಿಸಿದ್ದಾರೆ.

ತಮಿಳುನಾಡಿಗೆ ಕರ್ನಾಟಕದ ಹಂಚಿಕೆಯಲ್ಲಿ ೧೭೭ ಟಿಎಂಸಿ ಜೊತೆಗೆ ಕರ್ನಾಟಕ ಉಪಯೋಗಿಸದ ೧೧೦ ಟಿಎಂಸಿ ಸೇರಿ ಒಟ್ಟು ೨೮೭ ಟಿಎಂಸಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿದೆ. ಬಜೆಟ್‌ನಲ್ಲಿ ೧೧೦ ಟಿಎಂಸಿ ನೀರನ್ನು ಉಪಯೋಗಿಸಲು ಉಳಿಕೆ ೭.೮ ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ವಿಸ್ತರಿಸಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಸಂಕಷ್ಟ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನಿರಂತರ ನೀರು ಹರಿಸಿದ ಕಾರಣ ಕಾವೇರಿ ಕೊಳ್ಳದಲ್ಲಿ ಒಟ್ಟು ೩೬೦೦ ಕೋಟಿ ರು.ನಷ್ಟು ಬೆಳೆ ನಷ್ಟವಾಗಿದೆ. ಈ ನಷ್ಟವನ್ನು ಸರ್ಕಾರ ರೈತರಿಗೆ ತುಂಬಿಕೊಡಲು ಬಜೆಟ್‌ನಲ್ಲಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ರೈತರ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕಿದ್ದು, ಸರ್ಕಾರ ಶಾಶ್ವತ ಖರೀದಿ ಕೇಂದ್ರಗಳನ್ನು ತೆರೆದು ಎಲ್ಲಾ ರೈತರು ಸುಲಭವಾಗಿ ತಮ್ಮ ಉತ್ಪನ್ನಗಳನ್ನು ಖರೀದಿ ಕೇಂದ್ರಗಳಿಗೆ ಸಾಗಿಸಲು ಬಜೆಟ್‌ನಲ್ಲಿ ಅವಕಾಶ ಮಾಡಿಕೊಡಬೇಕು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಆವರ್ತನಿಧಿಯನ್ನು ಹೆಚ್ಚಿಸಬೇಕು. ಬೆಳೆಗಳನ್ನು ದಾಸ್ತಾನು ಮಾಡಲು ದಾಸ್ತಾನು ಮಳಿಗೆಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕಬ್ಬು ಬೆಳೆಗೆ ಎಫ್‌ಆರ್‌ಪಿ ಬೆಂಬಲ ಬೆಲೆ ಜೊತೆಗೆ ರಾಜ್ಯಸರ್ಕಾರ ಪ್ರೋತ್ಸಾಹಧನ ನೀಡಲು ಕ್ರಮ ವಹಿಸುವುದು. ವಿ.ಸಿ.ಫಾರಂನಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ಎಲ್ಲಾ ರೀತಿಯ ಅನುಕೂಲಗಳು, ಅವಕಾಶಗಳಿದ್ದು ಸರ್ಕಾರ ಇದಕ್ಕಾಗಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿದ್ದಾರೆ.

ವಿ.ಸಿ.ಫಾರಂನ ಕೃಷಿ ಕಾಲೇಜಿನಲ್ಲಿರುವ ಜೈವಿಕ ಗೊಬ್ಬರಗಳ ಉತ್ಪಾದನಾ ಘಟಕದ ಬಲವರ್ಧನೆ, ಗುಣಮಟ್ಟ ನಿಯಂತ್ರಣ ಹಾಗೂ ಪ್ರಯೋಗಾಲಯ ಸ್ಥಾಪನೆಗೆ ಸರ್ಕಾರ ಬಜೆಟ್‌ನಲ್ಲಿ ಅವಕಾಶ ಮಾಡಿಕೊಡಬೇಕು. ಮಣ್ಣಿನ ರಕ್ಷಣೆಗಾಗಿ ಜೈವಿಕ ಗೊಬ್ಬರಗಳ ಬಳಕೆ, ಜೈವಿಕ ನಿಯಂತ್ರಣಗಳು, ಪೀಡೆ ನಾಶಕಗಳು, ಉತ್ತಮ ಬೆಳೆ ಮತ್ತು ಇಳುವರಿಗಾಗಿ ಘನ, ದ್ರವ ಮತ್ತು ಹರಳು ಊಪದ ಗೊಬ್ಬರಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಕ್ರಮ, ರೈತ ಸಂಪರ್ಕ ಕೇಂದ್ರಗಳಿಗೆ ನಿಯಮಿತವಾಗಿ ಪೂರೈಸುವಂತೆ ಒತ್ತಾಯಿಸಿದ್ದಾರೆ.

ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ ಶಾಶ್ವತವಾಗಿ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಯಬೇಕಿದ್ದು, ಕಾರ್ಖಾನೆಯನ್ನು ಲಾಭದಾಯಕವಾಗಿ ಮುನ್ನಡೆಸಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.