ಸಾರಾಂಶ
ಬೀಡಿನ ಗುಡ್ಡೆ ಮೈದಾನದಲ್ಲಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಗ್ಯಾರೇಜ್ ಕಾರ್ಮಿಕರ ಪ್ರೀಮಿಯರ್ ಲೀಗ್ - ಜಿಪಿಎಲ್ ಸೀಸನ್ -1 ಕ್ರಿಕೆಟ್ ಪಂದ್ಯಕೂಟ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ನಗರಸಭೆಯ ಆಧೀನದಲ್ಲಿರುವ ಬೀಡಿನಗುಡ್ಡೆಯ ತೆರೆದ ಮೈದಾನದಲ್ಲಿ ನಿರಂತರವಾಗಿ ಕ್ರೀಡಾ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಮೈದಾನಕ್ಕೆ ಆವರಣ ಗೋಡೆಯಿಲ್ಲದೆ ಇಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳು ಬರುತ್ತಿವೆ. ಈ ಮೈದಾನದ ಬಗ್ಗೆ ನಗರಸಭೆಯ ಅಧ್ಯಕ್ಷರ ಮತ್ತು ಶಾಸಕರ ವಿಶೇಷ ಮುತುವರ್ಜಿಯಿಂದ ಯೋಗ್ಯ ಕ್ರಿಕೆಟ್ ಮೈದಾನವನ್ನಾಗಿ ಅಭಿವೃದ್ಧಿಪಡಿಸುವ ಬಗ್ಗೆ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಉಡುಪಿ ನಗರಸಭೆಯ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಹೇಳಿದರು.ಅವರು ಬೀಡಿನ ಗುಡ್ಡೆ ಮೈದಾನದಲ್ಲಿ ಭಾನುವಾರ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಆಯೋಜಿಸಿದ ಗ್ಯಾರೇಜ್ ಕಾರ್ಮಿಕರ ಪ್ರೀಮಿಯರ್ ಲೀಗ್ - ಜಿಪಿಎಲ್ ಸೀಸನ್ -1 ಕ್ರಿಕೆಟ್ ಪಂದ್ಯಕೂಟ ಉದ್ಘಾಟಿಸಿ ಮಾತನಾಡಿದರು.ನಗರಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಮುಂಜಾನೆ ಪಂದ್ಯಕೂಟಕ್ಕೆ ಚಾಲನೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಡಿವೈಎಸ್ಪಿ ಪ್ರಭು ಡಿ.ಟಿ. ಬಹುಮಾನಗಳನ್ನು ವಿತರಿಸಿದರು.ಸಂಘ ಅಧ್ಯಕ್ಷ ರೋಷನ್ ಕರ್ಕಡ ಕಾಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘ ಸ್ಥಾಪಕ ಅಧ್ಯಕ್ಷ ಪ್ರಭಾಕರ್ ಕೆ., ಚಯರ್ ಮ್ಯಾನ್ ವಿಲ್ಸನ್ ಅಂಚನ್, ಗೌರವ ಸಲಹೆಗಾರರಾದ ಯಾದವ್ ಶೆಟ್ಟಿಗಾರ್, ಜಯ ಸುವರ್ಣ ಮತ್ತು ಉದಯ್ ಕಿರಣ್, ಉಪಾಧ್ಯಕ್ಷರಾದ ರಾಜೇಶ್ ಜತ್ತನ್ ಮತ್ತು ವಿನಯ್ ಕುಮಾರ್ ಕಲ್ಮಾಡಿ, ಕ್ರೀಡಾ ಕಾರ್ಯದರ್ಶಿ ಮಧುಸೂದನ್ ಕನ್ನರ್ಪಾಡಿ, ಪಂದ್ಯಕೂಟದ ಸಂಯೋಜಕರಾದ ರವೀಂದ್ರ ಶೇಟ್, ಮಹೇಶ್ ನಿಟ್ಟೂರು, ನವೀನ್ ಉದ್ಯಾವರ್ ಮತ್ತಿತರರು ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕೋಶಾಧಿಕಾರಿ ಸಂತೋಷ್ ಕುಮಾರ್ ಸ್ವಾಗತಿಸಿದರು. ವಿನಯಕುಮಾರ್ ವಂದಿಸಿದರು.