ಸಾರಾಂಶ
ಯಲ್ಲಾಪುರ: ತಾಲೂಕು ಪಂಚಾಯಿತಿ ಜೀವ ವೈವಿಧ್ಯ ಸಮಿತಿ ಹಾಗೂ ಶಿವಮೊಗ್ಗ ಜಿಲ್ಲೆಯ ಮಾದರಿ ಜೀವವೈವಿಧ್ಯ ಸಮಿತಿಗಳ ಸಮಾಲೋಚನಾ ಸಭೆ ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಹಿರಿಯ ತೋಟಗಾರಿಕಾ ಅಧಿಕಾರಿ ಪವಿತ್ರಾ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.ಈ ಸಂದರ್ಭದಲ್ಲಿ ೨೦೨೧- ೨೨, ೨೦೨೨- ೨೩ ಹಾಗೂ ೨೦೨೩- ೨೪ ಈ ೩ ವರ್ಷಗಳಲ್ಲಿ ಶಿರಸಿ, ಯಲ್ಲಾಪುರ, ಸಿದ್ದಾಪುರ, ಸೊರಬ, ಸಾಗರ, ಹೊಸನಗರ ತಾಲೂಕುಗಳ ಜೀವವೈವಿಧ್ಯತೆ ನಿರ್ವಹಣಾ ಸಮಿತಿ ಕಾರ್ಯಚಟುವಟಿಕೆಗಳ ಕುರಿತ ಅವಲೋಕನ ನಡೆಸಲಾಯಿತು. ಜೀವವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶಕ್ಕೇ ಮಾದರಿಯಾಗಿ ಜೀವ ವೈವಿಧ್ಯ ಜಾಗೃತಿ ಕಾರ್ಯ ನಡೆಸಿರುವ ಈ ಬಿಎಂಸಿಗಳು ನಿಸರ್ಗದ ಉಳಿವಿಗೆ ದೊಡ್ಡ ಕೊಡುಗೆ ನೀಡಿವೆ. ಪಂಚಾಯಿತಿಗಳಿಗೆ ನಿಸರ್ಗ ಸಂರಕ್ಷಣೆಯ ಅಸ್ತ್ರ ಸಿಕ್ಕಿದೆ. ಮಲೆನಾಡಿನ ಸುಸ್ಥಿರ ಅಭಿವೃದ್ಧಿ ಯೋಜನೆ ರೂಪಿಸಲು ಪ್ರತಿ ತಾಲೂಕಿನಲ್ಲಿ ಬಿಎಂಸಿ ಮುಂದಾಗಬೇಕು. ಈ ಬಗ್ಗೆ ಮಂಡಳಿಯ ಸಹಕಾರ ಅಗತ್ಯ ಎಂದರು. ಸೊರಬದ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಸಾಗರ ತಾಲೂಕು ಪಂಚಾಯಿತಿ ಜೀವವೈವಿಧ್ಯತೆ ನಿರ್ವಹಣಾ ಸಮಿತಿಗೆ ರಾಜ್ಯ ಪ್ರಶಸ್ತಿ ಸಿಕ್ಕ ಕುರಿತು ಪ್ರಸ್ತಾಪಿಸಿ, ಉದ್ರಿ ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಕೆರೆ ಸಮ್ಮೇಳನ ಸೇರಿದಂತೆ ಹಲವಾರು ಕಾರ್ಯಕ್ರಮ ನಡೆಸಿ ಮಾದರಿ ಬಿಎಂಸಿ ಹೆಸರು ಪಡೆಯಲು ಕಾರಣವಾಯಿತೆಂದು ತಿಳಿಸಿದರು.
ಮಂಡಳಿಯ ಅಧಿಕಾರಿ ಡಾ. ಪ್ರೀತಂ ಮಾತನಾಡಿ, ಜೀವವೈವಿಧ್ಯತೆ ನಿರ್ವಹಣಾ ಸಮಿತಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜೀವವೈವಿಧ್ಯ ಕಾಯ್ದೆ ನಿಜಾರ್ಥದಲ್ಲಿ ಈ ಪ್ರದೇಶದಲ್ಲಿ ಅನ್ವಯ ಮಾಡಿದ್ದಾರೆ. ತಾಲೂಕು ಮಟ್ಟದ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ಜೀವವೈವಿಧ್ಯ ಕಾರ್ಯಗಳಲ್ಲಿ ಆಸಕ್ತಿ ವಹಿಸಿದ್ದು ಕಂಡುಬಂದಿದೆ ಎಂದರು.ಕೆ.ಎಸ್. ಭಟ್ಟ ಆನಗೋಡ, ಹೊಸನಗರದ ಚಕ್ರವಾಕ್ ಸುಬ್ರಹ್ಮಣ್ಯ, ಟಿ.ಆರ್. ಹೆಗಡೆ, ಸಾಗರದ ಆನೆಗೊಳಿ ಸುಬ್ಬರಾವ್ ಹಾಗೂ ಮಂಡಳಿಯ ಮತ್ತು ಸಮಿತಿಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು. ಸಮಿತಿಯ ಸದಸ್ಯ ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ್ ವಂದಿಸಿದರು.