24 ಗಂಟೆಯಲ್ಲೇ ಟಿಸಿ ಬದಲಿಸಲು ಯೋಜನೆ

| Published : Apr 04 2025, 12:50 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೀಳಗಿ ರೈತರ ಜಮೀನುಗಳಲ್ಲಿನ ಪಂಪ್‌ಸೆಟ್, ಕೊಳವೆ ಭಾವಿ ಪಂಪ್‌ಸೆಟ್‌ಗಳಿಗೆ ಸರಿಯಾದ ಪ್ರಮಾಣದಲ್ಲಿ ವಿದ್ಯುತ್‌ ಸರಬರಾಜು ಆಗದೆ ಪಂಪ್‌ಸೆಟ್ ಹಾಳಾಗಿ ರೈತರಿಗೆ ತುಂಬಾ ಹಾನಿಯಾಗಿದೆ. ಸರಿಯಾದ ವಿದ್ಯುತ್‌ ಪೂರೈಕೆ ಆಗಬೇಕು ಎನ್ನುವ ಉದ್ದೇಶದಿಂದ ಉಪಕೇಂದ್ರ ಆರಂಭಿಸಿ ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಇಂತಹ ವಿದ್ಯುತ್‌ ಉಪಕೇಂದ್ರ ಸ್ಥಾಪಿಸಲಾಗಿದೆ ಎಂದು ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ರೈತರ ಜಮೀನುಗಳಲ್ಲಿನ ಪಂಪ್‌ಸೆಟ್, ಕೊಳವೆ ಭಾವಿ ಪಂಪ್‌ಸೆಟ್‌ಗಳಿಗೆ ಸರಿಯಾದ ಪ್ರಮಾಣದಲ್ಲಿ ವಿದ್ಯುತ್‌ ಸರಬರಾಜು ಆಗದೆ ಪಂಪ್‌ಸೆಟ್ ಹಾಳಾಗಿ ರೈತರಿಗೆ ತುಂಬಾ ಹಾನಿಯಾಗಿದೆ. ಸರಿಯಾದ ವಿದ್ಯುತ್‌ ಪೂರೈಕೆ ಆಗಬೇಕು ಎನ್ನುವ ಉದ್ದೇಶದಿಂದ ಉಪಕೇಂದ್ರ ಆರಂಭಿಸಿ ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಇಂತಹ ವಿದ್ಯುತ್‌ ಉಪಕೇಂದ್ರ ಸ್ಥಾಪಿಸಲಾಗಿದೆ ಎಂದು ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.

ತಾಲೂಕಿನ ಸುನಗ ಗ್ರಾಮದ ಹತ್ತಿರದಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ವತಿಯಿಂದ ನೂತನವಾಗಿ ನಿರ್ಮಿಸಲಾಗಿದ್ದ ೧೧೦-೧೧ ಕೆವಿ ವಿದ್ಯುತ್‌ ಉಪಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಶಾಸಕನಾಗಿದ್ದಾಗ ಬೀಳಗಿ ಮತಕ್ಷೇತ್ರದಲ್ಲಿ ೧೪ ವಿದ್ಯುತ್‌ ಉಪಕೇಂದ್ರಗಳನ್ನು ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೆವು. ಆಗ ರೈತರ ಹೊಲದಲ್ಲಿನ ಟಿಸಿ ಕೆಟ್ಟರೆ ಕೂಡಲೇ ದುರಸ್ತಿ ಮಾಡಿಕೊಡುವ ಸಲುವಾಗಿ ರೈತ ಕೆಂಪು ಕಾರ್ಡ್‌ ಯೋಜನೆ ಆರಂಭಿಸಿ ಹೆಸ್ಕಾಂ ವತಿಯಿಂದ ದುರಸ್ತಿ ಮಾಡುವ ಯೋಜನೆ ಹಾಕಿದ್ದೆವು. ಈ ಬಾರಿ ಟಿಸಿ ಬ್ಯಾಂಕ್‌ ಸ್ಥಾಪಿಸಿ ಟಿಸಿ ದುರಸ್ತಿ ಮಾಡಿಸಿ ಕೇವಲ ೨೪ ಗಂಟೆಯಲ್ಲಿ ರೈತರಿಗೆ ಟಿಸಿ ಬದಲಾಯಿಸುವ ಯೋಜನೆ ಆರಂಭಿಸಿದ್ದೇವೆ. ಮಾತ್ರವಲ್ಲ, ಈಗಾಗಲೇ 357 ಟಿಸಿ ದುರಸ್ತಿ ಮಾಡಿ ಸರಿಯಾದ ಸಮಯಕ್ಕೆ ಅನುಕೂಲ ಮಾಡಲಾಗಿದೆ ಎಂದರು.

ಈ ಎರಡು ಯೋಜನೆಗಳು ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿಯೂ ಮಾಡಿಲ್ಲ. ರಾಜ್ಯದಲ್ಲಿಯೇ ಮೊದಲು ಮಾಡಿದ್ದು ಬೀಳಗಿ ಮತಕ್ಷೇತ್ರದಲ್ಲಿ ಹೆಮ್ಮೆಯ ವಿಷಯವಾಗಿದೆ. ಹಾಗೇ ರೈತರು, ಸಾರ್ವಜನಿಕರು ಉಚಿತವಾಗಿ ವಿದ್ಯುತ್‌ ಸಿಗುತ್ತದೆ ಎಂದು ಬೇಕಾಬಿಟ್ಟಿಯಾಗಿ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ರಾಜ್ಯ ಸರ್ಕಾರ ರೈತರಿಗೆ ಮಾಡುವ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಸುನಗ ಗ್ರಾಮದ ಹತ್ತಿರ ಉದ್ಘಾಟನೆಯಾಗಿರುವ ವಿದ್ಯುತ್‌ ಉಪಕೇಂದ್ರ ₹೮.೧೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈಗಾಗಲೇ ೧ ಟಿಸಿ ಅಳವಡಿಸಲಾಗಿದೆ. ಇನ್ನೊಂದು ₹೩ ಕೋಟಿ ವೆಚ್ಚದಲ್ಲಿ ಅಳವಡಿಸುವ ಯೋಜನೆ ಹಾಕಲಾಗಿದೆ. ಈ ಉಪಕೇಂದ್ರದಿಂದ ಸುನಗ ತಾಂಡಾ ೧ ಮತ್ತು ೨, ಜಾನಮಟ್ಟಿ, ಬೂದಿಹಾಳ ಮತ್ತು ಕವಳ್ಳಿ ಗ್ರಾಮಗಳು ಸೇರಿದಂತೆ ಇನ್ನೂ ಅನೇಕ ಗ್ರಾಮಗಳಿಗೆ ವಿದ್ಯುತ್‌ ಸರಬರಾಜು ಸಮರ್ಪಕವಾಗಿ ನಿಗದಿತ ಸಮಯ ಸಿಗಲಿದೆ ಎಂದು ಹೇಳಿದರು.

ಮತಕ್ಷೇತ್ರದ ಹಿರೇಶೆಲ್ಲಿಕೇರಿ, ಅಮಲಝೇರಿ ಹಾಗೂ ಹುಲಗೇರಿ ಗ್ರಾಮಗಳ ಹತ್ತಿರ ನೂತನ ವಿದ್ಯುತ್‌ ಉಪಕೇಂದ್ರಗಳು ಮಂಜೂರಾಗಿವೆ. ಶೀಘ್ರದಲ್ಲಿ ಕೆಲಸ ಆರಂಭವಾಗಲಿದ್ದು, ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಜನರ ಸಹಕಾರವಿಲ್ಲದೆ ಯಾವ ಯೋಜನೆಯೂ ಯಶಸ್ವಿಯಾಗುವುದಿಲ್ಲ ಎಂದರು.

ಅನಗವಾಡಿ ಬೂದಿಹಾಳ ರಸ್ತೆ ಜತೆಗೆ ಬ್ರಿಡ್ಜ್‌ ನಿರ್ಮಾಣಕ್ಕಾಗಿ ಶೀಘ್ರದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಸ್ಥಳ ಪರಿಶೀಲನೆ ಮಾಡಿ ಕಾಮಗಾರಿ ಮಂಜೂರು ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಬಾಗಲಕೋಟೆ ಪ್ರಸರಣ ವಿಭಾಗದ ಮುಖ್ಯ ಇಂಜಿನೀಯರ್‌ ಗುರುನಾಥ ಗೊಟ್ಯಾಳ ಮಾತನಾಡಿದರು. ಸುನಗ ಗ್ರಾಪಂ ಅಧ್ಯಕ್ಷೆ ಪವಿತ್ರಾ ಬಸಪ್ಪ ದಳವಾಯಿ. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅನವೀರಯ್ಯ ಪ್ಯಾಟಿಮಠ, ಸಿಪಿಐ ಎಚ್.ಬಿ.ಸಣಮನಿ, ಅಧೀಕ್ಷಕಕ ಇಂಜಿನೀಯರ ರಮೇಶ ಪವಾರ, ಕಾರ್ಯನಿರ್ವಾಹಕ ಇಂಜಿನೀಯರ್‌ ಸಚಿನ ಬೂದಿ, ಹೆಸ್ಕಾಂ ಅಧಿಕಾರಿ ಬೋಕಿ, ಮಹಾಂತೇಶ, ಸುರೇಶ ಹಳ್ಳಿ ಸೇರಿದಂತೆ ಇತರರು ಇದ್ದರು.

-----------