ಕನಕಗಿರಿ ಕ್ಷೇತ್ರದಲ್ಲಿ ಲಕ್ಷ ವೃಕ್ಷ ನೆಡುವ ಸಂಕಲ್ಪ: ತಂಗಡಗಿ

| Published : Jun 11 2024, 01:36 AM IST

ಕನಕಗಿರಿ ಕ್ಷೇತ್ರದಲ್ಲಿ ಲಕ್ಷ ವೃಕ್ಷ ನೆಡುವ ಸಂಕಲ್ಪ: ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಗಿರಿ ಕ್ಷೇತ್ರದಲ್ಲಿ ಪ್ರತಿ ವರ್ಷ ಒಂದು ಲಕ್ಷ ಸಸಿ ನೆಡುವ ಸಂಕಲ್ಪ ತೊಟ್ಟಿದ್ದೇನೆ.

ಹಸಿರೋತ್ಸವ-೨೪ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ

ಕನ್ನಡಪ್ರಭ ವಾರ್ತೆ ಕಾರಟಗಿ

ಕನಕಗಿರಿ ಕ್ಷೇತ್ರದಲ್ಲಿ ಪ್ರತಿ ವರ್ಷ ಒಂದು ಲಕ್ಷ ಸಸಿ ನೆಡುವ ಸಂಕಲ್ಪ ತೊಟ್ಟಿದ್ದೇನೆ. ಆ ಕಾರಣಕ್ಕೆ ಕ್ಷೇತ್ರದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಮತ್ತು ನಾಗರಿಕರು, ಸಂಘ-ಸಂಸ್ಥೆಗಳು ಪ್ರತಿಯೊಬ್ಬರು ಈ ಸಂಕಲ್ಪ ಈಡೇರಿಕೆಗಾಗಿ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮನವಿ ಮಾಡಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಪುರಸಭೆ ಸೋಮವಾರ ಹಮ್ಮಿಕೊಂಡಿದ್ದ ಹಸಿರೋತ್ಸವ-೨೪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿ ವರ್ಷ ಕ್ಷೇತ್ರದಲ್ಲಿ ಒಂದು ಲಕ್ಷ ಸಸಿ ನೆಡುವ ಸಂಕಲ್ಪ ತೊಟ್ಟಿದ್ದೇನೆ. ನನ್ನ ಸಂಕಲ್ಪ ನನಗಾಗಿ, ನನ್ನ ಕುಟುಂಬದ ಒಳಿತಿಗೆ ಅಲ್ಲ ಬದಲಾಗಿ ಇಡೀ ಮಾನವ ಸಂಕುಲದ ಒಳಿತಿಗಾಗಿ ಎನ್ನುವ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕು. ಅದರಲ್ಲೂ ಭವಿಷ್ಯದ ಭವ್ಯ ಪ್ರಜೆಗಳಾಗಲಿರುವ ಮಕ್ಕಳಲ್ಲಿ ಇರಬೇಕು ಎಂದರು.

ನಮ್ಮ ಆಧುನಿಕ ಜೀವನ ಶೈಲಿಯು ಪರಿಸರಕ್ಕೆ ಮಾರಕವಾಗಿದೆ. ಕಳೆದ ತಿಂಗಳು ನಾವು ಎಂದೆಂದೂ ಕಂಡರಿಯದ ಬಿಸಿಲನ್ನು ನೋಡಿದ್ದೇವೆ. ಆ ಬಿಸಿಲಿನಲ್ಲಿ ಖುದ್ದು ಹೋಗಿದ್ದೇ ನಮಗೆ ಗಿಡಮರಗಳ ಮಹತ್ವದ ಬಗ್ಗೆ ಅರಿವಿಗೆ ಬಂದಿದೆ. ಆ ಕಾರಣಕ್ಕೆ ಈ ಬಾರಿ ನಾನು ಸಂಕಲ್ಪ ತೊಟ್ಟಿದ್ದು, ನನ್ನ ಸಂಕಲ್ಪ ಯಶಸ್ವಿಗೆ ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಬಡಾವಣೆಯಲ್ಲಿ, ರಸ್ತೆಗಳ ಪಕ್ಕದಲ್ಲಿ, ಮನೆಯ ಅಕ್ಕಪಕ್ಕದಲ್ಲಿ, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ, ಗಿಡ ನೆಟ್ಟು ಬೆಳೆಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ತರಿಸಲಾಗಿದ್ದ ೨೦ ಸಾವಿರಕ್ಕೂ ಹೆಚ್ಚು ಸಸಿಗಳು ಎಲ್ಲವೂ ಖಾಲಿಯಾಗಿವೆ. ಮುಂದಿನ ದಿನಗಳಲ್ಲೂ ಕೂಡಾ ಲಕ್ಷಕ್ಕೂ ಹೆಚ್ಚು ಸಸಿ ತರಿಸುತ್ತೇನೆ. ಎಲ್ಲವನ್ನು ನೆಡಲು ಸಹಕರಿಸಬೇಕು ಎಂದರು.

ವೇಗವಾಗಿ ಬೆಳೆಯುತ್ತಿರುವ ಕಾರಟಗಿ ಪಟ್ಟಣದಲ್ಲಿ ಈ ಸಂಕಲ್ಪವನ್ನು ಸಾಕಾರಗೊಳಿಸಲು ಪುರಸಭೆ ಸಿಬ್ಬಂದಿ, ಸದಸ್ಯರು ಸಹಕಾರ ನೀಡುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಶಾಲೆ ಆವರಣದಲ್ಲಿ ಸಚಿವರು ಸಸಿ ನೆಟ್ಟು ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರದಲ್ಲಿ ಪುರಸಭೆ ಕಡೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ನೂರಾರು ಸಸಿಗಳನ್ನು ವಿತರಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್ ಪ್ರಾಸ್ತಾವಿಕ ಮಾತನಾಡಿದರು.

ಈ ವೇಳೆ ಪುರಸಭೆ ಸದಸ್ಯರಾದ ಎಚ್. ಈಶಪ್ಪ, ಹಿರೇಬಸಪ್ಪ ಸಜ್ಜನ್, ಮಂಜುನಾಥ ಮೇಗೂರು, ಸೋಮಶೇಖರ ಬೇರಿಗೆ, ಆನಂದ ಮ್ಯಾಗಡಮನಿ, ಸಿದ್ದಪ್ಪ ಬೇವಿನಾಳ, ವೀರೇಶ ಗದ್ದಿ, ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ರಫಿ, ಕೆ. ಸಿದ್ದನಗೌಡ, ಶರಣೇಗೌಡ ಮಾಲಿ ಪಾಟೀಲ್, ಬಿ. ಶರಣಯ್ಯಸ್ವಾಮಿ, ಚನ್ನಬಸವ ಸುಂಕದ, ಅಯ್ಯಪ್ಪ ಉಪ್ಪಾರ, ಶರಣಪ್ಪ ಪರಕಿ, ರುದ್ರಗೌಡ ನಂದಿಹಳ್ಳಿ, ಉದಯಕುಮಾರ ಈಡಿಗೇರ, ಪ್ರಾಚಾರ್ಯ ಅನಿಲ್‌ಕುಮಾರ್ ಸೇರಿದಂತೆ ಉಪನ್ಯಾಸಕರು ಇತರರಿದ್ದರು. ಹನುಮಂತಪ್ಪ ತೊಂಡಿಹಾಳ ಮತ್ತು ಮೆಹಬೂಬ್ ಕಿಲ್ಲೇದಾರ್ ಕಾರ್ಯಕ್ರಮ ನಿರ್ವಹಿಸಿದರು.