ಕುಶಾಲನಗರ ಪಟ್ಟಣದ ಕಾವೇರಿ ನದಿ ದಡದ ವ್ಯಾಪ್ತಿಯಲ್ಲಿ ಸುಮಾರು ಐದು ಕಿಲೋಮೀಟರ್ ಉದ್ದದ ವಾಕ್ ಪಾತ್ ನಿರ್ಮಾಣದ ಬೃಹತ್ ಯೋಜನೆ ಮೂಲಕ ಸ್ಥಳೀಯರಿಗೆ ಹೆಚ್ಚಿನ ಸೌಕರ್ಯ ಅನುಕೂಲ ಕಲ್ಪಿಸುವ ಚಿಂತನೆಗೆ ಒತ್ತು ನೀಡಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ಪಟ್ಟಣದ ಕಾವೇರಿ ನದಿ ದಡದ ವ್ಯಾಪ್ತಿಯಲ್ಲಿ ಸುಮಾರು ಐದು ಕಿಲೋಮೀಟರ್ ಉದ್ದದ ವಾಕ್ ಪಾತ್ ನಿರ್ಮಾಣದ ಬೃಹತ್ ಯೋಜನೆ ಮೂಲಕ ಸ್ಥಳೀಯರಿಗೆ ಹೆಚ್ಚಿನ ಸೌಕರ್ಯ ಅನುಕೂಲ ಕಲ್ಪಿಸುವ ಚಿಂತನೆಗೆ ಒತ್ತು ನೀಡಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಕೊಪ್ಪ ಗಡಿಭಾಗದ ಐತಿಹಾಸಿಕ ಸೇತುವೆಯ ಪುನಶ್ಚೇತನ ಜೊತೆಗೆ ನಿರ್ಮಿಸಿದ ಕಾವೇರಿ ರೋಟರಿ ಉದ್ಯಾನ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕುಶಾಲನಗರ ಬೈಚನಹಳ್ಳಿ ಬಳಿಯಿಂದ ಮುಳ್ಳುಸೋಗೆ ತನಕ ಕಾವೇರಿ ನದಿ ತೀರದಲ್ಲಿ ವಾಕ್ ಪಾತ್ ನಿರ್ಮಾಣದ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಮೂಲಕ ಈ ಸಂಬಂಧ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ರೋಟರಿಯ ಕಾರ್ಯವೈಖರಿ ಶ್ಲಾಘಿಸಿದರು.
ರೋಟರಿ ಅಧ್ಯಕ್ಷ ಮನುಪೆಮ್ಮಯ್ಯ ಅವರ ನೇತೃತ್ವದಲ್ಲಿ ನಡೆದ ಈ ಸೇತುವೆ ಉದ್ಯಾನವನ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದರು.ರೋಟರಿ ಸಂಸ್ಥೆಯ ಅಧ್ಯಕ್ಷ ಹಾಗೂ ಯೋಜನೆಯ ಸರದಾರ ಮನು ಪೆಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಕುಶಾಲನಗರ ಗಡಿಭಾಗದ ಕಾವೇರಿ ನದಿ ಮೇಲೆ ಸುಮಾರು 179 ವರ್ಷಗಳ ಹಿಂದೆ ಬ್ರಿಟಿಷರ ಕಾಲದ ಅವಧಿಯಲ್ಲಿ ಅಂದಿನ ಕಮಿಷನರ್ ಕಬ್ಬನ್ ನೇತೃತ್ವದಲ್ಲಿ ನಿರ್ಮಿಸಲಾದ ಸೇತುವೆ, ಕಳೆದ 25 ವರ್ಷಗಳ ಹಿಂದೆ ಪಕ್ಕದಲ್ಲಿ ನೂತನ ಸೇತುವೆ ನಿರ್ಮಾಣ ಸಂದರ್ಭ ಸ್ಥಳೀಯ ಪ್ರಮುಖರು ಉಳಿಸಿ ಸಂರಕ್ಷಿಸಿದ್ದು ಕುಶಾಲನಗರ ರೋಟರಿ ಸಂಸ್ಥೆ ಮೂಲಕ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಮತ್ತು ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಉದ್ಯಾನವನವಾಗಿ ಪರಿವರ್ತಿಸಲಾಗಿದೆ. ಇಡೀ ದೇಶದಲ್ಲಿ ಉದ್ಯಾನವನವು ಹರಿಯುವ ನದಿಯ ಮೇಲ್ಭಾಗದಲ್ಲಿ ನಿರ್ಮಾಣಗೊಂಡಿರುವುದು ಅಪರೂಪದಾಗಿದೆ ಎಂದರು. ಸೇತುವೆ ಸ್ವಚ್ಛಗೊಳಿಸಿ, ಎರಡು ಬದಿಯಲ್ಲಿ ಕಮಾನು ರೂಪ ಬರುವಂತೆ ಗ್ರಿಲ್ ಗಳ ರಚನೆ ಮಾಡಿ, ನೆಲಕ್ಕೆ ಟೈಲ್ ಅಳವಡಿಸಿ ಉದ್ಯಾನವನವಾಗಿ ನಿರ್ಮಿಸಲಾಗಿದೆ. ಉದ್ಯಾನವನದ ನಿರ್ವಹಣೆಗೆ ಕುಶಾಲನಗರ ಪುರಸಭೆ ಮೂಲಕ ಯೋಜನೆ ರೂಪಿಸಲಾಗಿದೆ ಎಂದರು.ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್, ಹಿರಿಯರಾದ ಬಾಚರಣಿಯಂಡ ಅಪ್ಪಣ್ಣ, ಕೆ.ಪಿ. ಚಂದ್ರಕಲಾ, ವಕೀಲರಾದ ಆರ್ ಕೆ ನಾಗೇಂದ್ರ ಬಾಬು, ದಾನಿಗಳಾದ ಎಸ್ಎಲ್ಎನ್ ಸಂಸ್ಥೆಯ ಸಾತಪ್ಪನ್, ಪಿ ಆರ್ ಸಿ ಮಾಲೀಕರಾದ ಪುರುಷೋತ್ತಮ ರೈ, ಮಹಾರಾಜ ಟೈಲ್ಸ್ ಎಲ್ ರಾಜೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ ಬಿ ಭಾರತೀಶ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸಂಚಾಲಕ ಎಂ ಎನ್ ಚಂದ್ರಮೋಹನ್, ಭಾರವಿ ಸಂಸ್ಥೆಯ ರವಿಚಂದ್ರನ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಬಿ ಆರ್ ನಾಗೇಂದ್ರ ಪ್ರಸಾದ್, ರೋಟರಿ ಸಂಸ್ಥೆಯ ಸಹಾಯಕ ರಾಜ್ಯಪಾಲ ಉಲ್ಲಾಸ್ ಕೃಷ್ಣ, ರೋಟರಿ ಕಾರ್ಯದರ್ಶಿ ಮಂಜುನಾಥ್, ಮಹೇಶ್ ನಾಲ್ಗಡೆ, ಎಸ್ ಕೆ ಸತೀಶ್, ಡಾ. ಧರಣೇಂದ್ರ, ಕ್ರಿಜ್ವಲ್ ಕೋಟ್ಸ್,, ಆರತಿ ಶೆಟ್ಟಿ, ರೋಟರಿ ಸದಸ್ಯರು ಸೇರಿದಂತೆ ಕುಶಾಲನಗರದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಗಣ್ಯರು ಇದ್ದರು.