ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಭೂಪರಿವರ್ತನೆ ಮಾಡದ ಪ್ರದೇಶದ ನಿವೇಶನಗಳಿಗೆ ಈಗಾಗಲೇ ಖಾತಾ ಮಾಡಿಕೊಟ್ಟಿದರೂ ಸಹ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡದಂತೆ ಮುಖ್ಯ ಆಯುಕ್ತರು ಆದೇಶಿಸಿರುವ ಹಿನ್ನೆಲೆಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ಸಲ್ಲಿಕೆಯಾಗಿದ್ದ ಸುಮಾರು ಎರಡು ಸಾವಿರಕ್ಕೂ ಅರ್ಜಿಗಳನ್ನು ತಡೆಹಿಡಿಯಲಾಗಿದೆ.ಬೆಂಗಳೂರು ನಗರ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯಾದ ಪ್ರದೇಶಕ್ಕೆ ಕೆಟಿಸಿಪಿ ಕಾಯ್ದೆಯಡಿ ಅನುಮೋದನೆ ಪಡೆಯಬೇಕು. ಆದರೆ, ಬಿಬಿಎಂಪಿಯಿಂದ 20 ಸಾವಿರ ಚದರ ಮೀಟರ್‌ಗಿಂತ ಕಡಿಮೆ ವಿಸ್ತೀರ್ಣದ ಪ್ರದೇಶಗಳಿಗೆ ನೇರವಾಗಿ ಖಾತಾ ನೀಡಿ, ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಲಾಗುತ್ತಿದೆ. ಇದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಕಾಯ್ದೆಯ ಉಲ್ಲಂಘನೆಯಾಗಿದೆ.
ಭೂ ಪರಿವರ್ತನೆಯಾದ ಜಮೀನುಗಳಿಗೆ ಬಿಡಿಎಯಿಂದ ವಿನ್ಯಾಸ ನಕ್ಷೆ ಅನುಮೋದನೆಯಾಗದೇ ನಿವೇಶನಗಳಿಗೆ ಖಾತಾ ಮತ್ತು ನಕ್ಷೆ ಮಂಜೂರಾಯಿ ನೀಡಬಾರದು ಎಂದು ಬಿಡಿಎ ತಿಳಿಸಿತ್ತು. ಹಾಗಾಗಿ ಭೂ ಪರಿವರ್ತನೆ ಆಗದ ಪ್ರದೇಶದ ನಿವೇಶನಗಳಿಗೆ ಖಾತಾ ಮತ್ತು ನಕ್ಷೆ ಮಂಜೂರಾತಿ ನೀಡಬಾರದೆಂದು ಬಿಬಿಎಂಪಿಯ ನಗರ ಯೋಜನಾ ವಿಭಾಗದ ಅಧಿಕಾರಿಗಳಿಗೆ ಸೂಚಿಸಿ ಆದೇಶಿಸಿದ್ದರು.ಈ ಹಿನ್ನೆಲೆಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ತಡೆ ಹಿಡಿಯಲಾಗಿದೆ. ಬಿಡಿಎನಿಂದ ಏಕ ನಿವೇಶನ ನಕ್ಷೆ ಮಂಜೂರಾತಿ ಹೊಂದಿದ್ದರೆ ಮಾತ್ರ ನಕ್ಷೆ ಮಂಜೂರಾತಿ ನೀಡುವುದಾಗಿ ಬಿಬಿಎಂಪಿಯ ಅಧಿಕಾರಿಗಳು ತಿಳಿಸುತ್ತಿದ್ದಾರೆ.‘ಎ’ ಖಾತಾ ಸೈಟ್ ಆಗಿದ್ದರೂ ನಕ್ಷೆ ಮಂಜೂರಾತಿ ಆಗಲ್ಲ
ನಗರದಲ್ಲಿ ಎ ಖಾತಾ ನಿವೇಶನವನ್ನು ಹೊಂದಿದ್ದರೂ ಏಕ ನಿವೇಶನ ನಕ್ಷೆ ಮಂಜೂರಾತಿಯನ್ನು ಬಿಡಿಎನಿಂದ ಪಡೆದುಕೊಂಡಿಲ್ಲ ಎಂದರೆ ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿ ನೀಡುವುದಿಲ್ಲ.ಪಾಲಿಕೆಗೆ ಆದಾಯ ನಷ್ಟ?ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ವರ್ಷಕ್ಕೆ ಕನಿಷ್ಠ 10 ಸಾವಿರಕ್ಕೂ ಅಧಿಕ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಲಾಗುವುದರಿಂದ ಸಾಕಷ್ಟು ಪ್ರಮಾಣದ ಆದಾಯ ಬಿಬಿಎಂಪಿಗೆ ಬರುತ್ತದೆ. ಆದರೆ ಇದೀಗ ಏಕ ನಿವೇಶನ ನಕ್ಷೆ ಇಲ್ಲದಿರುವ ಬಡಾವಣೆಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ತಡೆ ಹಿಡಿದಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಆದಾಯ ನಷ್ಟ ಉಂಟಾಗುತ್ತಿದೆ.ವಾಸ್ತುಶಿಲ್ಪಿಗಳ ಮನವಿ
ಏಕ ನಿವೇಶನ ನಕ್ಷೆ ಮಂಜೂರಾತಿ ಇಲ್ಲದ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡದಿರುವ ಆದೇಶದಿಂದ ಜನರಿಗೆ ಸಾಕಷ್ಟು ತೊಂದರೆ ಉಂಟಾಗಿದೆ ಎಂದು ನೋಂದಾಯಿತ ವಾಸ್ತುಶಿಲ್ಪಿ ಎಂಜಿನಿಯರ್‌ಗಳು ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿ ಸಾರ್ವಜನಿಕರ ಪರವಾಗಿ ಆದೇಶವನ್ನು ಮರು ಪರಿಶೀಲನೆ ನಡೆಸುವಂತೆ ಕೋರಿದ್ದಾರೆ.ಮನವಿಯಲ್ಲಿ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯದ ಈ ಆದೇಶದಿಂದ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ಆದರೆ, ಬೊಮ್ಮನಹಳ್ಳಿ, ಮಹದೇವಪುರ, ಆರ್‌ಆರ್‌ನಗರ, ದಾಸರಹಳ್ಳಿ ಮತ್ತು ಯಲಹಂಕ ವಲಯದ ಶೇ.60ಕ್ಕೂ ಹೆಚ್ಚು ಆಸ್ತಿದಾರರು ತೊಂದರೆಗೆ ಒಳಗಾಗಲಿದ್ದು, ಇತ್ತೀಚಿನ ಬಿಬಿಎಂಪಿ ಆದೇಶದಂತೆ ಕಟ್ಟಡದ ನಕ್ಷೆ ಮಂಜೂರಾತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.