ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗ
ಪಟ್ಟಣದಲ್ಲಿ ಶೀಘ್ರವಾಗಿ ಗಾರ್ಮೆಂಟ್ ಆರಂಭಿಸುವ ಯೋಜನೆ ಇದ್ದು, ಲಾಭಕ್ಕಾಗಿ ಗಾರ್ಮೆಂಟ್ ಆರಂಭಿಸುತ್ತಿಲ್ಲ. ಈ ಭಾಗದ ಯುವ ಜನರಿಗೆ ಉದ್ಯೋಗದ ಜತೆಗೆ ಬರುವ ಲಾಭಾಂಶದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಬಟ್ಟೆ ವಿತರಿಸಲು ಯೋಚಿಸಲಾಗಿದೆ ಎಂದು ಸರ್ಕಾರದ ಮುಖ್ಯಸಚೇತಕ, ಶಾಸಕ ಅಶೋಕ ಪಟ್ಟಣ ಹೇಳಿದರು.ಪಟ್ಟಣದ ಈರಮ್ಮ ಶಿ.ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಎಲ್ಲ ವಿದ್ಯಾರ್ಥಿಗಳಿಗೆ ನೀಡುವ ಶಾಲಾ ಬ್ಯಾಗ್ ಮತ್ತು ನೋಟ್‌ಬುಕ್ ವಿತರಣೆ ಬರುವ ಶೈಕ್ಷಣಿಕ ವರ್ಷದಲ್ಲಿ ಕೂಡಾ ಮುಂದುವರೆಸಲಾಗುವುದು ಎಂದರು. ಬಹುತೇಕ ರಾಜಕಾರಣಿಗಳು ಹಣ ಮಾಡುವುದಕ್ಕಾಗಿ ರಾಜಕಾರಣಕ್ಕೆ ಬರುತ್ತಿರುವುದು ವಿಷಾದನೀಯ. ರಾಜಕಾರಣಕ್ಕೆ ಬಂದು ಬೇನಾಮಿ ಆಸ್ತಿ ಮಾಡುವ ಬದಲು ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡಬೇಕು. ಮನುಷ್ಯ ಬರುವಾಗ ಬರಿಗೈಲೆ ಬರುತ್ತಾನೆ, ಎಷ್ಟು ಗಳಿಸಿದರು ಕೂಡ ಮತ್ತೆ ಬರಿಗೈಲೆ ಹೋಗುತ್ತಾನೆಂದು ಅರಿತು ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗಬೇಕು ಎಂದು ಸಲಹೆ ನೀಡಿದರು.ದೇಶದಲ್ಲಿ ನಡೆಯುವ ಚುನಾವಣೆಗಳು ಹಣ, ಹೆಂಡ ಮತ್ತು ಜಾತಿ ಆಧಾರದಲ್ಲಿ ನಡೆಯುತ್ತಿರುವುದ ಖೇದಕರವಾಗಿದ್ದು, ಯುವ ಜನಾಂಗ ಚುನಾವಣೆಯಲ್ಲಿ ಈ ಅಂಶಗಳಿಗೆ ಗಮನ ಹರಿಸದೇ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿಗೆ ಮತ ನೀಡುವ ಮೂಲಕ ಕ್ಷೇತ್ರದ ಪ್ರಗತಿಗೆ ಮುನ್ನುಡಿ ಬರೆಯಬೇಕು ಎಂದು ಕೋರಿದರು.ದುಬಾರಿ ಜೀವನದಲ್ಲಿ ಮನೆತನ ನಡೆಸುವುದು ಕಷ್ಟವಾಗಿದೆ. ಪರಿಣಾಮ ಮಹಿಳೆ ಕೂಡಾ ದುಡಿಯುವ ಅನಿವಾರ್ಯತೆ ಹೆಚ್ಚಾಗಿದೆ. ಆದರೆ, ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಹೆಚ್ಚಾದಂತೆ ಕೌಟುಂಬಿಕ ಜೀವನದಲ್ಲಿ ಡೈವೋರ್ಸ್ ಹೆಚ್ಚಾಗುತ್ತಿರುವುದು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ರತಿಯೊಬ್ಬರು ಒಂದಾಗಿ ಒಬ್ಬರನ್ನೊಬ್ಬರು ಅರಿತು ಬಾಳಬೇಕು ಎಂದು ತಿಳಿಸಿದರು.ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳು ಗುಟ್ಕಾ ಮತ್ತು ಮದ್ಯಪಾನ ಸೇರಿದಂತೆ ದುಶ್ಚಟಗಳ ದಾಸರಾಗದೇ ಕ್ರೀಡೆ ಸೇರಿದಂತೆ ಅಧ್ಯಯನಕ್ಕೆ ಪೂರಕವಾಗುವ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ಪ್ರಜೆಗಳಾಗುವತ್ತ ಗಮನ ಹರಿಸಲು ಸೂಚಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ, ನಿವೃತ್ತ ಪ್ರಾಚಾರ್ಯ ಎಸ್.ಜಿ.ಚಿಕ್ಕನರಗುಂದ ಮಾತನಾಡಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರ ಅಧ್ಯಯನ ಮುಂದುವರೆಸುವ ವಿದ್ಯಾರ್ಥಿಗಳು ಯಾವ ವಿಷಯ ಓದಿದರೇ ಭವಿಷ್ಯದಲ್ಲಿ ಅನುಕೂಲವಾಗುತ್ತದೆ ಎನ್ನುವುದನ್ನು ತಿಳಿದು ಹೆಚ್ಚಿನ ವ್ಯಾಸಂಗ ಮಾಡಬೇಕು ಮತ್ತು ಕಾಲೇಜು ಅಧ್ಯಯನ ಸಮಯದಲ್ಲಿ ಉದ್ಯೋಗಮೇಳ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಜಿ.ಬಿ.ರಂಗನಗೌಡ್ರ, ಜಯರಾಮ ಕೋಣಿ ಸೇರಿದಂತೆ ಹಲವರಿದ್ದರು.ರಾಜೇಶ್ವರಿ ಪಾಟೀಲ ಸ್ವಾಗತಿಸಿದರು. ಪ್ರಾಸ್ತಾವಿಕ ಡಾ.ಎಂ.ಡಿ.ಕಮತಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾವಿತ್ರಿ ಹಾಲೋಳ್ಳಿ, ನಿರೂಪಿಸಿದರು. ಡಾ.ಎ.ಬಿ.ವಗ್ಗರ ವಂದಿಸಿದರು.ತಾಂತ್ರಿಕತೆ ಅಭಿವೃದ್ಧಿ ಹೊಂದಿದ ಪರಿಣಾಮ ನಿರೂದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಯುವಕರು ಸರ್ಕಾರಿ ಉದ್ಯೋಗಕ್ಕಾಗಿ ಅಲೆಯದೇ ಸ್ವಯಂ ಉದ್ಯೋಗ ಕೈಗೊಂಡು ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು;
-ಅಶೋಕ ಪಟ್ಟಣ, ಸರ್ಕಾರದ ಮುಖ್ಯಸಚೇತಕ.