ಪ್ರಕೃತಿಯ ಸಮತೋಲನ ಸಸಿ ನೆಟ್ಟು ಬೆಳೆಸಿ

| Published : Aug 24 2024, 01:18 AM IST

ಸಾರಾಂಶ

ಪ್ರಕೃತಿಯಲ್ಲಿನ ಏರುಪೇರುಗಳಿಂದ ಭೂಮಿಯ ತಾಪಮಾನ ಹೆಚ್ಚಾಗಿದ್ದು ಅದರಿಂದ ಪ್ರಾಕೃತಿಕ ಅಸಮತೋಲನ ಏರ್ಪಟ್ಟಿದೆ. ತಾಪಮಾನವನ್ನು ನಿಯಂತ್ರಿಸಿ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರಕೃತಿ ನಮಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶುದ್ಧ ನೀರು, ಗಾಳಿ, ಆಹಾರ ಸೇರಿದಂತೆ ಇನ್ನು ಅನೇಕ ಅಗತ್ಯ ವಸ್ತುಗಳನ್ನು ನೀಡುತ್ತಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವ ಇಚ್ಛೆಯಿಂದ ಗಿಡ, ಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಿಸಬೇಕೆಂದು ಜಿಪಂ ಸಿಇಒ ಪ್ರಕಾಶ್.ಜಿ.ಟಿ.ನಿಟ್ಟಾಲಿ ಮನವಿ ಮಾಡಿದರು.

ಸಾಮಾಜಿಕ ಅರಣ್ಯ ವಲಯ ಚಿಕ್ಕಬಳ್ಳಾಪುರ ಇವರ ವತಿಯಿಂದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಒನ್ ಪ್ಲಾಂಟ್ ಫಾರ್ ಮದರ್ ಹೆಸರಿನಲ್ಲಿ ಹಮ್ಮಿಕೊಂಡಿರುವ ಅಭಿಯಾನಕ್ಕೆ ತಾಲೂಕಿನ ಅಗಲಗುರ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ನೀಡಿ ಮಾತನಾಡಿದರು.

ದೇಶಾದ್ಯಂತ 80 ಕೋಟಿ ಸಸಿ

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಒನ್ ಪ್ಲಾಂಟ್ ಫಾರ್ ಮದರ್ ಹೆಸರಿನಲ್ಲಿ ಅಭಿಯಾನ ಶುರು ಮಾಡಿದ್ದು ಈ ಅಭಿಯಾನದಡಿ ದೇಶಾದ್ಯಂತ ಎಂಬತ್ತು ಕೋಟಿ ಗಿಡ ನಡುವ ಯೋಜನೆ ಹಾಕಿಕೊಳ್ಳಲಾಗಿದೆ. ಪ್ರಕೃತಿಯಲ್ಲಿನ ಏರುಪೇರುಗಳಿಂದ ಭೂಮಿಯ ತಾಪಮಾನ ಹೆಚ್ಚಾಗಿದ್ದು ಅದರಿಂದ ಪ್ರಾಕೃತಿಕ ಅಸಮತೋಲನ ಏರ್ಪಟ್ಟಿದೆ. ತಾಪಮಾನವನ್ನು ನಿಯಂತ್ರಿಸಿ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಮರಗಿಡಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು

ಪರಿಸರ ಸಂರಕ್ಷಣೆ ಕೇವಲ ಕೆಲವರಿಗೆ ಮಾತ್ರ ಸೀಮಿತವಾಗಬಾರದು, ನಮಗೆ ಉತ್ತಮ ಆರೋಗ್ಯ ನೀಡುವಲ್ಲಿ ಗಿಡ-ಮರಗಳು ಬಹುಮುಖ್ಯ ಪಾತ್ರ ವಹಿಸಿವೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂಬುದನ್ನು ಅರಿತು ಪ್ರತಿಯೊಬ್ಬರೂ ಮರ, ಗಿಡ, ಕಾಡನ್ನು ಉಳಿಸಿ, ಬೆಳೆಸುವುದರ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಡಬೇಕಾಗಿದೆ ಎಂದು ತಿಳಿಸಿದರು.

ತಾಯಿಯನ್ನು ಪೂಜಿಸುವ ಮಾದರಿ

ಕಳೆದ ದಶಕದಲ್ಲಿ ಭಾರತವು ಹಲವಾರು ಸಾಮೂಹಿಕ ಪ್ರಯತ್ನಗಳನ್ನು ಕೈಗೊಂಡಿದ್ದು, ಇದು ರಾಷ್ಟ್ರದಾದ್ಯಂತ ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಕಾರಣವಾಯಿತು. ಸುಸ್ಥಿರ ಅಭಿವೃದ್ಧಿಯತ್ತ ನಮ್ಮ ಅನ್ವೇಷಣೆಗೆ ಇದು ಉತ್ತಮವಾಗಿದೆ. ಸ್ಥಳೀಯರು ಈ ಸಂದರ್ಭಕ್ಕೆ ತಕ್ಕಂತೆ ಎದ್ದುನಿಂತು ಇದರಲ್ಲಿ ಮುಂದಾಳತ್ವ ವಹಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಪ್ರತಿ ಶಾಲೆಯ ಪ್ರತಿಯೊಂದು ಮಗುವಿಗೂ ಒಬ್ಬೊಬ್ಬ ತಾಯಿ ಇರ್ತಾರೆ ಅವರ ಹೆಸರಲ್ಲಿ ಒಂದೊಂದು ಗಿಡ ನೆಟ್ಟು ತಾಯಿಯನ್ನು ಪೋಷಿಸುವ ಮಾದರಿಯಲ್ಲೆ ಈ ಗಿಡಗಳನ್ನ ಪೋಶಿಸಿ ಬೆಳೆಸಬೇಕೆಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.ಇದೆ ವೇಳೆ ಕೃಷಿ ವಿಶ್ವವಿದ್ಯಾಲಯ ಚಿಂತಾಮಣಿಯಿಂದ ಜೈವಿಕ ಇಂದನ ತಯಾರಿಸುವ ಹೊಂಗೆ ಗಿಡಗಳ ಜಾಗೃತಿ ಅಭಿಯಾನವು ಹಮ್ಮಿಕೊಳ್ಳಲಾಗಿತ್ತು. ಚಿಂತಾಮಣಿ ಕೃಷಿ ವಿಶ್ವ ವಿದ್ಯಾಲಯದಿಂದ ಜೈವಿಕ ಇಂದನ ತಯಾರಿಸುವ ಮರಗಳ ಬೆಳೆಸುವ ಬಗ್ಗೆ ಅದರಿಂದ ರಾಸಾಯನಿಕ ಜಗತ್ತಿನ ಅಪಾಯ ತಪ್ಪಿಸೋದು ಇಂಧನದ ಅಬಾವ ತಪ್ಪಿಸುವ ಬಗ್ಗೆ ಮಾಹಿತಿ ನೀಡಿ ಶಾಲಾ ಆವರಣದಲ್ಲಿ ಗಿಡ ನೆಟ್ಟು ಮಕ್ಕಳಿಗೆ ಜಾಗೃತಿ ಮೂಡಿಸಿದರು.

ಸ್ಪರ್ಧೆ ವಿಜೇತರಿಗೆ ಬಹುಮಾನ

ಈ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಜಳಿಗೆ ಪರಿಸರ ಅಧ್ಯಯನ ಕುರಿತು ನಡೆಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಾಮಾಜಿಕ ಅರಣ್ಯ ವಲಯ ಜಿಲ್ಲಾಧಿಕಾರಿ ಗೀತಾ, ಎಸಿಎಫ್ ಓ ಮುನಿಕೃಷ್ಣಪ್ಪ, ತಹಸೀಲ್ದಾರ್ ಅನಿಲ್, ಐ ಡಬ್ಲೂ ಎಫ್ ಸಂಚಾಲಕಿ ಟಿ.ಸೌಮ್ಯ, ಶಾಲಾ ಸಮಾಜಿಕ ಅರಣ್ಯ ವಲಯದ ರೇಂಜರ್ ಅಜೇಯ್, ಮಂಜುನಾಥ್ ಶಾಲಾ ಮುಖ್ಯೋಪಾಧ್ಯಾಯರು ಸಿಬ್ಬಂದಿ ಇದ್ದರು .