ಪಶ್ಚಿಮ ಘಟ್ಟವೂ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಸುತ್ತಾಡಿ ಅಮೂಲ್ಯ ಔಷಧೀಯ ಸಸ್ಯಗಳ ತಲಸ್ಪರ್ಶಿ ಅಧ್ಯಯನ ಮಾಡಿದ್ದ ಬ್ರಹ್ಮಾವರ ತಾಲೂಕಿನ ಕರ್ಜೆಯ ಹಿರಿಯ ಸಸ್ಯಶಾಸ್ತ್ರಜ್ಞ ಮಂಜುನಾಥ ಗೋಳಿ (75) ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ಉಡುಪಿ: ಪಶ್ಚಿಮ ಘಟ್ಟವೂ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಸುತ್ತಾಡಿ ಅಮೂಲ್ಯ ಔಷಧೀಯ ಸಸ್ಯಗಳ ತಲಸ್ಪರ್ಶಿ ಅಧ್ಯಯನ ಮಾಡಿದ್ದ ಬ್ರಹ್ಮಾವರ ತಾಲೂಕಿನ ಕರ್ಜೆಯ ಹಿರಿಯ ಸಸ್ಯಶಾಸ್ತ್ರಜ್ಞ ಮಂಜುನಾಥ ಗೋಳಿ (75) ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ಅಳಿಯುತ್ತಿರುವ ಅನೇಕ ಸಸ್ಯಸಂಕುಲವನ್ನು ಹುಡುಕಿ ತಂದು, ಉಳಿಸಿ, ಬೆಳೆಸುವ ಕಾಯಕದಲ್ಲಿ ತೊಡಗಿದ್ದ ಅವರಿಗೆ ಸಾವಿರಾರು ಔಷಧೀಯ ಸಸ್ಯಗಳ ವೈಜ್ಞಾನಿಕ ಮಾಹಿತಿ, ಆಯುರ್ವೇದ ಬಳಕೆ, ಅವುಗಳ ಕನ್ನಡ, ಇಂಗ್ಲಿಷ್, ಸಂಸ್ಕೃತ, ತುಳು ನಾಮಗಳು ಕಂಠಸ್ಥವಾಗಿದ್ದವು. ಅವರು ಔಷಧೀಯ ಸಸ್ಯಗಳ ಎನ್‌ಸೈಕ್ಲೋಪಿಡಿಯಾ ಎಂದೇ ಖ್ಯಾತರಾಗಿದ್ದರು. ಯಕ್ಷಗಾನ ಸಹಿತ ಕಲಾ ಪ್ರೇಮಿಯಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಆಯುರ್ವೇದ ವೈದ್ಯರೂ, ಪ್ರಾಧ್ಯಾಪಕರೂ, ಪ್ರಗತಿಪರ ಕೃಷಿಕರೂ ಆಗಿದ್ದ ಅವರು ತನ್ನ ನರ್ಸರಿಯಲ್ಲಿ ಸಾವಿರಾರು ಔಷಧೀಯ ಸಸ್ಯಗಳನ್ನು ಬೆಳೆಸಿದ್ದರು. ಸಸ್ಯ ಶಾಸ್ತ್ರ - ಆಯುರ್ವೇದ ವಿಷಯಗಳಲ್ಲಿ ಪಿಎಚ್‍ಡಿ ಮಾಡಿರುವ ಅನೇಕರಿಗೆ ಮಾರ್ಗದರ್ಶನ ಮಾಡಿದ್ದರು. ಸ್ವತಃ ಯಾವುದೇ ಪ್ರಶಸ್ತಿ. ಸನ್ಮಾನಗಳನ್ನೂ ಸ್ವೀಕರಿಸುತ್ತಿರಲಿಲ್ಲ.
ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದಾಗ ದೆಹಲಿಯ ರಾಷ್ಟ್ರಪತಿ ಭವನದ ಮೊಗಲ್ ಗಾರ್ಡನ್‌ನಲ್ಲಿ ನೆಡುವುದಕ್ಕೆ ಗೋಳಿ ಅವರಿಂದ ಅನೇಕ ಔಷಧೀಯ ಸಸ್ಯಗಳನ್ನು ಕೊಂಡೊಯ್ಯಲಾಗಿತ್ತು. ಉಡುಪಿಯ ಪೇಜಾವರ ಮಠದ ಮುಚ್ಲುಕೋಡು ದೇವಾಲಯದಲ್ಲಿ 80 ಅಪೂರ್ವ ಔಷಧೀಯ ಸಸ್ಯಗಳ ಮೂಲಿಕವನ, ಇಸ್ರೋ ಸಹಿತ ಹಲವು ಸಂಸ್ಥೆಗಳಿಗೆ ಔಷಧೀಯ ವನ ನಿರ್ಮಿಸಲು ಮಾರ್ಗದರ್ಶನ ನೀಡಿದ್ದರು. ಅಸ್ಸಾಮಿನ ಅಗರ್ತಲಾದಿಂದ ಅಗರು ವೃಕ್ಷದ ಬೀಜಗಳನ್ನು ತಂದು ಸಂಸ್ಕರಿಸಿ ಸಸಿ ಮಾಡಿ ಉಡುಪಿಯ ಕೆಲವು ಮಠಾಧೀಶರಿಗೂ ನೀಡಿ ಬೆಳೆಸುವುದಕ್ಕೆ ಕಾರಣರಾಗಿದ್ದರು. ಪೇಜಾವರ ಶ್ರೀ ಸಂತಾಪ: ಮಂಜುನಾಥ ಗೋಳಿಯವರ ಹಠಾತ್ ನಿಧನದ ವಾರ್ತೆ ತಿಳಿದು ಅತೀವ ವಿಷಾದವಾಗಿದೆ. ಅನೇಕ ವರ್ಷಗಳಿಂದ ಅವರ ಸಸ್ಯ ಸಂರಕ್ಷಣೆಯ ಕಾರ್ಯವನ್ನು ಗಮನಿಸಿದ್ದೇವೆ. ಓರ್ವ ತಪಸ್ವಿಯಂತೆ ಜೀವನ ನಡೆಸಿದವರು. ಈ ನೆಲಕ್ಕೆ ಅವರಿಂದ ಶ್ರೇಷ್ಠ ಸೇವೆ ಸಂದಿದೆ. ಅವರ ನಿಧನ ಸಮಾಜಕ್ಕೆ ದೊಡ್ಡನಷ್ಟ. ಅವರಿಗೆ ಸದ್ಗತಿ ಲಭಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದು ದೆಹಲಿಯಲ್ಲಿ ಚಾತುರ್ಮಾಸ ವೃತದಲ್ಲಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಂದೇಶ ಕಳುಹಿಸಿದ್ದಾರೆ.