ನೆಡುತೋಪುಗಳ ಕಡಿತಲೆ, ಸಾಗಾಣಿಕೆ ಆದೇಶಿಸಿ: ಧರ್ಮೇಂದ್ರ

| Published : Dec 20 2024, 12:49 AM IST

ಸಾರಾಂಶ

ಶಿವಮೊಗ್ಗದ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಎಂಪಿಎಂ ಮತ್ತು ಕೆಎಫ್‍ಡಿಸಿ ಅರಣ್ಯ ನೆಡುತೋಪು ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಅಹೋರಾತ್ರಿ ಅನಿರ್ದಿಷ್ಟವಾಧಿ ಧರಣಿ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೆಎಫ್‌ಡಿಸಿ ನಿಗಮದ ಅಸಂಬದ್ಧ ಆದೇಶದಿಂದ ಗುತ್ತಿಗೆದಾರರಿಗೆ ಆದ ಅನ್ಯಾಯ ಖಂಡಿಸಿ ಕರ್ನಾಟಕ ರಾಜ್ಯ ಎಂಪಿಎಂ ಮತ್ತು ಕೆಎಫ್‍ಡಿಸಿ ಅರಣ್ಯ ನೆಡುತೋಪು ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಗುರುವಾರ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಅನಿರ್ದಿಷ್ಟವಾಧಿ ಧರಣಿ ನಡೆಸಲಾಯಿತು.

ಈ ವೇಳೆ ಸಂಘದ ಅಧ್ಯಕ್ಷ ಧರ್ಮೇಂದ್ರ ಬಿ.ಶಿರವಾಳ ಮಾತನಾಡಿ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಬೆಳೆಸಿದ ನೆಡುತೋಪುಗಳ ಕಡಿತಲೆ ಹಾಗೂ ಸಾಗಾಣಿಕೆ ಕಾರ್ಯಾಚರಣೆಗೆ ನಿಗಮವೇ ವಿನಾಕಾರಣ ತಡೆ ಹಾಕಿರುವುದರ ಪರಿಣಾಮ, ಟೆಂಡರ್ ಮೂಲಕ ಗುತ್ತಿಗೆ ಪಡೆದ ಗುತ್ತಿಗೆದಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದ್ದು, ತಕ್ಷಣ ನೆಡುತೋಪುಗಳ ಕಡಿತಲೆ ಮತ್ತು ಸಾಗಾಣಿಕೆ ಕೆಲಸಕ್ಕೆ ಆದೇಶಿಸಬೇಕು. ಗುತ್ತಿಗೆದಾರರಿಗೆ ಆದ ನಷ್ಟವನ್ನು ನಿಗಮವೇ ಭರಿಸಬೇಕು ಎಂದು ಒತ್ತಾಯಿಸಿದರು.

ಕಳೆದ 25-30 ವರ್ಷಗಳಿಂದ ಕೆಎಫ್‍ಡಿಸಿ ನೆಡುತೋಪುಗಳ ಟೆಂಡರ್‌ನಲ್ಲಿ ಗುತ್ತಿಗೆದಾರರಾಗಿ ಭಾಗವಹಿಸಿ, ಕಾನೂನು ಪ್ರಕಾರ ನೆಡುತೋಪುಗಳನ್ನು ಪ್ರಾಮಾಣಿಕವಾಗಿ ಕಡಿತಲೆ ಮಾಡಿ, ಸರ್ಕಾರ ಮತ್ತು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಪರವಾಗಿ ಉತ್ತಮ ಸೇವೆ ನೀಡುತ್ತಾ ಬಂದಿದ್ದೇವೆ.

ಅದೇ ಪ್ರಕಾರ ಈಗಲೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಬೆಳೆಸಿದ ನೆಡುತೋಪುಗಳ ಕಡಿತಲೆ ಮತ್ತು ಸಾಗಾಣಿಕೆಗೆ ಇ-ಟೆಂಡರ್ ಮೂಲಕ ಗುತ್ತಿಗೆ ಪಡೆದು, ಒಂದಷ್ಟು ಕೆಲಸ ಕೂಡ ಆಗಿದೆ. ಆದರೆ ಈಗ ನೆಡುತೋಪುಗಳ ಕಡಿತಲೆ ಮತ್ತು ಸಾಗಾಣಿಕೆ ಕಾರ್ಯಾಚರಣೆಯನ್ನು ಅರಣ್ಯ ಅಭಿವೃದ್ಧಿ ನಿಗಮ ಸ್ಥಗಿತಗೊಳಿಸಲು ಆದೇಶಿಸಿದೆ. ಇದು ಗುತ್ತಿಗೆದಾರರನ್ನು ಸಂಕಷ್ಟಕ್ಕೆ ಸಿಲುಕಿದೆ ಎಂದು ದೂರಿದರು.

ಗುತ್ತಿಗೆ ಪಡೆದ ಕಾರಣಕ್ಕೆ ನೆಡುತೋಪುಗಳನ್ನು ಸರಿಯಾದ ಸಮಯಕ್ಕೆ ಕಡಿದು ಸಾಗಿಸುವುದಕ್ಕೆ ಅಗತ್ಯವಾಗಿ ಬೇಕಾದ ಕೂಲಿಯಾಳುಗಳನ್ನು ದೂರದ ಊರುಗಳಿಂದ ಕರೆತಂದು, ನೆಡುತೋಪುಗಳಲ್ಲಿ ಮೂಲ ಸೌಕರ್ಯಗಳೊಂದಿಗೆ ಇರಿಸಿದ್ದೇವೆ. ಕೂಲಿ ಜತೆಗೆ ಅವರ ವಸತಿ ಮತ್ತು ಊಟದ ವೆಚ್ಚವೂ ನಮ್ಮ ಮೇಲೆಯೇ ಇದೆ. ಆದರೆ ಈಗ ಅರಣ್ಯ ಅಭಿವೃದ್ಧಿ ನಿಗಮವು ನೆಡುತೋಪುಗಳ ಕಡಿತಲೆ ಮತ್ತು ಸಾಗಾಣಿಕೆ ಸ್ಥಗಿತಕ್ಕೆ ಆದೇಶ ನೀಡಿರುವುದರಿಂದ ಕೂಲಿಯಾಳುಗಳ ಮೇಲಿನ ಹೊರೆ ನಮ್ಮ ಮೇಲೆ ಬೀಳಲಿದೆ. ಗುತ್ತಿಗೆಗೆ ಸಂಬಂಧಿಸಿದಂತೆ ಮಾಡಿಕೊಂಡಿರುವ ಒಪ್ಪಂದವನ್ನು ನಿಗಮ ಗಾಳಿಗೆ ತೂರಿದೆ. ಗುತ್ತಿಗೆ ಒಪ್ಪಂದದ ಪ್ರಕಾರ ಸರಿಯಾದ ಸಮಯಕ್ಕೆ ನೆಡುತೋಪುಗಳನ್ನು ಕಡಿತಲೆ ಮಾಡಿ, ಸಾಗಾಣಿಕೆ ಮಾಡಬೇಕು ಎನ್ನುವ ನಿಗಮವು, ತಡವಾದಾಗ ಗುತ್ತಿಗೆದಾರರಿಗೆ ದಂಡ ಹಾಕಿದ ಉದಾಹರಣೆಗಳೂ ಇವೆ. ಈಗ ತಾನೇ ಒಪ್ಪಂದ ಮೀರಿದ ಕಾರಣಕ್ಕೆ ನಿಗಮವೇ ಗುತ್ತಿಗೆದಾದರರಿಗೆ ದಂಡ ಕಟ್ಟಬೇಕಿದೆ ಎಂದು ಆಗ್ರಹಿಸಿದರು.

ನೆಡುತೋಪುಗಳ ಕಡಿತಲೆ ಹಾಗೂ ಸಾಗಣಿಕೆ ಕಾರ್ಯಾಚರಣೆಗೆ ನಿಗಮವು, ಖರೀದಿದಾರ ಟೆಂಡರ್ ಮುಕ್ತಾಯಗೊಂಡಿದ್ದನ್ನು ಕಾರಣ ನೀಡುತ್ತಿದೆ. ಖರೀದಿದಾರರೊಂದಿಗಿನ ತನ್ನ ಟೆಂಡರ್ ಅಥವಾ ಒಪ್ಪಂದ ಯಾವಾಗ ಮುಕ್ತಾಯಗೊಳ್ಳುತ್ತದೆ ಎನ್ನುವುದರ ಪರಿಜ್ಞಾನವಿಲ್ಲದೆ, ಮತ್ತೇಕೆ ನಡೆತೋಪುಗಳ ಕಡಿತಲೆ ಮತ್ತು ಸಾಗಾಣಿಕೆಗೆ ಟೆಂಡರ್ ಮೂಲಕ ಗುತ್ತಿಗೆ ನೀಡಬೇಕಿತ್ತು ಎಂದು ಕಿಡಿಕಾರಿದರು.

ಧರಣಿಯಲ್ಲಿ ಸಂಘದ ಗೌರವಾಧ್ಯಕ್ಷ ಟಿ. ಪೆರುಮಾಳ್, ಪ್ರಧಾನ ಕಾರ್ಯದರ್ಶಿ ಜಾವೀದ್ , ಉಪಾಧ್ಯಕ್ಷ ಕಾಂತರಾಜು ಹಾಸನ, ಕಾರ್ಯದರ್ಶಿ ರಾಜು ಕೆ ನಾಯರ್, ನಿರ್ದೇಶಕರಾದ ಟೀಕಪ್ಪ ಭದ್ರಾವತಿ, ಕೆ.ವಿ. ಅನಂತ ಪದ್ಮನಾಭ ಕಿಣಿ ಸೇರಿದಂತೆ ಮತ್ತಿತರರು ಇದ್ದರು.