ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿಯಾದ ಒಡೆಯರಪಾಳ್ಯ ಮುಖ್ಯರಸ್ತೆ ಗುಂಡಿ ಬಿದ್ದು ಸಂಪೂರ್ಣ ಹದಗೆಟ್ಟಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಒಡೆಯರಪಾಳ್ಯ ಗ್ರಾಮದಲ್ಲಿ ಮಹಿಳೆಯರು ಮತ್ತು ಗ್ರಾಮಸ್ಥರು ಯುವ ಮುಖಂಡ ನಿಶಾಂತ್ ನೇತೃತ್ವದಲ್ಲಿ ಗುಂಡಿಗಳಲ್ಲಿ ರಾಗಿ ಪೈರು ನೆಟ್ಟು ಮಂಗಳವಾರ ವಿನೂತನ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಹನೂರು
ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿಯಾದ ಒಡೆಯರಪಾಳ್ಯ ಮುಖ್ಯರಸ್ತೆ ಗುಂಡಿ ಬಿದ್ದು ಸಂಪೂರ್ಣ ಹದಗೆಟ್ಟಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಒಡೆಯರಪಾಳ್ಯ ಗ್ರಾಮದಲ್ಲಿ ಮಹಿಳೆಯರು ಮತ್ತು ಗ್ರಾಮಸ್ಥರು ಯುವ ಮುಖಂಡ ನಿಶಾಂತ್ ನೇತೃತ್ವದಲ್ಲಿ ಗುಂಡಿಗಳಲ್ಲಿ ರಾಗಿ ಪೈರು ನೆಟ್ಟು ಮಂಗಳವಾರ ವಿನೂತನ ಪ್ರತಿಭಟನೆ ನಡೆಸಿದರು.ನಂತರ ಮಾತನಾಡಿದ ಯುವ ಮುಖಂಡ ನಿಶಾಂತ್, ಕಳೆದ ನಾಲ್ಕು ವರ್ಷಗಳಿಂದ ಒಡೆಯರಪಾಳ್ಯ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಗುಂಡಿ ಬಿದ್ದು ಹಲವು ವರ್ಷಗಳೇ ಕಳೆದಿವೆ. ಆದರೂ ದುರಸ್ತಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಆರೋಗ್ಯ ಕೇಂದ್ರದ ಕಾಮಗಾರಿಗೆ ಗುದ್ದಲಿ ಪೂಜೆ ನಡೆದು ಆರು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಹನೂರು, ಪಿ.ಜಿ.ಪಾಳ್ಯ ಹಾಗೂ ಒಡೆಯರಪಾಳ್ಯ ಗ್ರಾಮಗಳಲ್ಲಿ ಒಂದೇ ದಿನ ಆಸ್ಪತ್ರೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಸ್ಥಳದಲ್ಲಿ ಕಾಮಗಾರಿ ಆರಂಭವಾಗಿಲ್ಲ " ಎಂದು ಅವರು ದೂರಿದರು. "ರಸ್ತೆ ಅಭಿವೃದ್ಧಿ ಕಾಮಗಾರಿಗೆ ಆರನೇ ತಾರೀಖಿನವರೆಗೆ ಕಾಲಾವಕಾಶ ಕೇಳಿದ್ದಾರೆ. ಯಾವ ಪುರೋಹಿತರು ಇವರಿಗೆ ದಿನಾಂಕ ನಿಗದಿ ಮಾಡಿಕೊಟ್ಟಿದ್ದಾರೆ ಗೊತ್ತಿಲ್ಲ. ಮನುಷ್ಯತ್ವ ಇದ್ದರೆ ರಸ್ತೆಯನ್ನು ಅಭಿವೃದ್ಧಿಪಡಿಸಲಿ. ಇಲ್ಲದಿದ್ದರೆ ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಹೇಳಿದರೆ, ನಾವೇ ಚಂದಾ ವಸೂಲಿ ಮಾಡಿ ರಸ್ತೆಯನ್ನು ಅಭಿವೃದ್ಧಿಪಡಿಸಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.ಪಿ.ಜಿ.ಪಾಳ್ಯ ಗ್ರಾಮದಲ್ಲಿ ಶಾಸಕರ ಬೆಂಬಲಿಗರು ಕೆರೆ ಅಭಿವೃದ್ಧಿ ಹೆಸರಿನಲ್ಲಿ ರೈತರಿಂದ ಲಕ್ಷಾಂತರ ರುಪಾಯಿ ಹಣ ವಸೂಲಿ ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ. 15 ದಿನ ಕಳೆದರೂ ಈ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಇದರಿಂದ ಅವರು ಭ್ರಷ್ಟಾಚಾರದಲ್ಲಿ ಪಾಲು ಪಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ " ಎಂದು ಅವರು ನೇರ ಆರೋಪ ಮಾಡಿದರು. "ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ಹನೂರು ಕ್ಷೇತ್ರದ ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರ ಪಡೆದುಕೊಂಡಿದ್ದೀರಿ. ನೀವು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮಾತ್ರ ಸೀಮಿತವಾಗಿದ್ದೀರಿ. ಕ್ಷೇತ್ರದ ಅಭಿವೃದ್ಧಿ ಸಂಪೂರ್ಣ ವಿಫಲವಾಗಿದೆ. ನೀವು ಮಾಡಿರುವ ಯಾವ ಕಾಮಗಾರಿಯೂ ಪೂರ್ಣಗೊಂಡಿಲ್ಲ. ನಿಮ್ಮ ಕಾಮಗಾರಿಗಳು ಕೇವಲ ಭೂಮಿ ಪೂಜೆಗೆ ಸೀಮಿತವಾಗಿವೆ ಎಂದು ಟೀಕಿಸಿದರು.
ಗ್ರಾಮದ ನಿವಾಸಿ ಮಾಲಾ ಮಾತನಾಡಿ, ಮಂಜುನಾಥ್ ಶಾಸಕರಾಗಿ ನಾಲ್ಕು ವರ್ಷಗಳು ಕಳೆದರೂ ಒಡೆಯರಪಾಳ್ಯ ಭಾಗದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ನೂರಾರು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿರುವ ಒಡೆಯರಪಾಳ್ಯ ಗ್ರಾಮದಲ್ಲಿ ಒಂದು ಬಸ್ ನಿಲ್ದಾಣವೂ ಇಲ್ಲ. ಮಹಿಳೆಯರಿಗೆ ಶೌಚಾಲಯವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆಗಳನ್ನು ಶಾಸಕರ ಬಳಿ ಕೇಳೋಣವೆಂದರೆ, ಅವರು ರಾತ್ರಿ ವೇಳೆ ಮಾತ್ರ ನಮ್ಮ ಭಾಗಕ್ಕೆ ಬರುತ್ತಾರೆ, ಬೆಳಗಿನ ಸಮಯದಲ್ಲಿ ಬರುವುದಿಲ್ಲ. ಮೂಲಭೂತ ಸೌಲಭ್ಯಗಳ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.ಗ್ರಾಮದ ನಿವಾಸಿ ಸಹನ, ಯುವ ಮುಖಂಡ ಜಯ ಕುಮಾರ್, ಗ್ರಾಮದ ಸತೀಶ್ ಕುಮಾರ್, ಬೈಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸದಾನಂದ, ಜಯಕುಮಾರ್, ಸಿದ್ದಪ್ಪಾಜಿ ನಾಯಕ, ನಂದೀಶ್, ಜಯಪ್ಪ, ಸತೀಶ್ ಕುಮಾರ್, ಮಹೇಶ್, ಪ್ರಸಾದ್, ರವಿಕುಮಾರ್, ದಿಲೀಪ್, ಬಸವರಾಜ್, ಮಾಲಾ, ಸುಶೀಲಮ್ಮ, ಮಂಜುನಾಥ್, ಮಾಂತೇಶ, ಬಸಪ್ಪ, ಶಾಂತ ಮಲ್ಲಪ್ಪ, ಸಂತೋಷ್, ಕಾಮಗೆರೆ ಸುರೇಶ್ ಇತರರು ಹಾಜರಿದ್ದರು