ಕನ್ನಡಪ್ರಭವಾರ್ತೆ ಕುಶಾಲನಗರ

ರೋಟರಿ ಕುಶಾಲನಗರ ಸುವರ್ಣ ಮಹೋತ್ಸವ ಅಂಗವಾಗಿ ಸ್ವಚ್ಛ ಕುಶಾಲನಗರ ಧ್ಯೇಯದೊಂದಿಗೆ ಪ್ರಮುಖ ಪ್ರವಾಸಿ ತಾಣವಾದ ಕಾವೇರಿ ನಿಸರ್ಗಧಾಮದಲ್ಲಿ ಪ್ಲಾಸ್ಟಿಕ್ ಬಾಟಲಿ ಸಂಗ್ರಹಣೆಯ 3ನೇ ಘಟಕವನ್ನು ಅಳವಡಿಸಲಾಯಿತು. ಈ ಸಂದರ್ಭ ಮಾತನಾಡಿದ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಪ್ರಮುಖ ಪ್ರವಾಸಿ ತಾಣ ಕಾವೇರಿ ನಿಸರ್ಗಧಾಮಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ವಿಶೇಷವಾಗಿ ವಾರಾಂತ್ಯಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಹಾಗೂ ಇತರ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಸಮಸ್ಯೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಈ ಸ್ಥಳದಲ್ಲಿ ಘಟಕವನ್ನು ಸ್ಥಾಪಿಸಲಾಗಿದೆ. ಇದು ನಮ್ಮ ಸ್ವಚ್ಛ ಕುಶಾಲನಗರ ಅಭಿಯಾನದ ಭಾಗವಾಗಿದೆ. ಈಗಾಗಲೇ ಎರಡು ಘಟಕಗಳನ್ನು ಅಳವಡಿಸಲಾಗಿದ್ದು, ಇದೀಗ ಮೂರನೇ ಘಟಕವನ್ನು ಪ್ರವಾಸಿಗರಿಗೆ ಉಪಯೋಗವಾಗುವಂತೆ ಅಳವಡಿಸಿದ್ದೇವೆ. ಸಾರ್ವಜನಿಕರು ಇದರ ಬಳಕೆಯೊಂದಿಗೆ ಪರಿಸರ ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.

ಘಟಕಕ್ಕೆ ಕುಶಾಲನಗರ ಪುರಸಭೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಅಧ್ಯಕ್ಷೆ ರೇಷ್ಮಾ ನವೀನ್, ಪುರಸಭೆ ಆರೋಗ್ಯಾಧಿಕಾರಿ ಉದಯ್ ಕುಮಾರ್, ರೋಟರಿ ಕಾರ್ಯದರ್ಶಿ ಮಂಜುನಾಥ್ ಹೆಚ್.ಪಿ., ಇನ್ನರ್ ವೀಲ್ ಸದಸ್ಯೆ ಸುಪ್ರೀತಾ ರವಿ, ರೋಟರಿ ಸದಸ್ಯರಾದ ಸತೀಶ್ ಎಸ್.ಕೆ., ಡಾ. ಹರಿ ಎ. ಶೆಟ್ಟಿ, ಸಹಾಯಕ ರಾಜ್ಯಪಾಲ ಉಲ್ಲಾಸ್, ರಾಣಿ ಉಲ್ಲಾಸ್, ಮಹೇಶ್ ನಲವಾಡೆ, ರುದ್ರೇಶ್ ಪಟೇಲ್, ಜೇಕಬ್, ರಾಜಶೇಖರ್, ಶೀನಾ ಪ್ರಕಾಶ್, ಸುನೀತಾ ಮಹೇಶ್, ಚಿತ್ರಾ ರಮೇಶ್ ಇದ್ದರು.